ಚಿಕ್ಕಮಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಯ ಅರಣ್ಯ ಗುತ್ತಿಗೆ ಒಪ್ಪಂದ ಕಾರ್ಯಗತಗೊಳಿಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ತನ್ನ ಒಡೆತನದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಟೌನ್‌ಶಿಪ್ ಸಹಿತ 282 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾಗಿದೆ.
ಕುದುರೆಮುಖದಲ್ಲಿ 1977ರಲ್ಲಿ ಗಣಿಗಾರಿಕೆ ಆರಂಭವಾಗಿದ್ದು, ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಉಳಿದುಕೊಳ್ಳಲು ಕುದುರೆಮುಖ ಟೌನ್‌ಶಿಪ್ ನಿರ್ಮಾಣವಾಗಿತ್ತು. ಸುಮಾರು 6,000ಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಅವರ ಕುಟುಂಬಗಳು ಇಲ್ಲಿ ನೆಲೆಸಿದ್ದವು. ವಸತಿ ಗೃಹ, ಸರ್ಕಾರಿ ಶಾಲೆ, ಕೆಂದ್ರೀಯ ವಿದ್ಯಾಲಯ, ಆಸ್ಪತ್ರೆ, ಆಟದ ಮೈದಾನ, ಮಾರುಕಟ್ಟೆ, ಸಿನಿಮಾ ಮಂದಿರ, ಕ್ರೀಡಾಂಗಣ, ಕ್ಲಬ್‌ಹೌಸ್ ಸೇರಿ ಎಲ್ಲಾ ಸೌಲಭ್ಯಗಳಿದ್ದವು.
ಗಣಿಗಾರಿಕೆಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮ ಗಮನಿಸಿದ ಸುಪ್ರೀಂ ಕೋರ್ಟ್ 2005ರಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಆದೇಶಿಸಿತು. 2006ರಲ್ಲಿ ಅಧಿಕೃತವಾಗಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಗಣಿಗಾರಿಕೆ ನಿಲ್ಲುತ್ತಿದ್ದಂತೆ ಉದ್ಯೋಗಿಗಳ ವರ್ಗಾವಣೆಯಾಗಿದೆ. ಟೌನ್‌ಶಿಪ್‌ನಲ್ಲಿ ಮನೆಗಳು, ಕಚೇರಿಗಳು, ಶಾಲೆಗಳು ಇವೆ. ಕೆಲ ಕಟ್ಟಡಗಳನ್ನು ಅರಣ್ಯ ಇಲಾಖೆ ಬಳಕೆ ಮಾಡುತ್ತಿದೆ. ಸುತ್ತಮುತ್ತ ಇರುವ ಜನರಿಗಾಗಿ ಆಸ್ಪತ್ರೆ ಮತ್ತು ಶಾಲೆ ಕೂಡ ಚಾಲ್ತಿಯಲ್ಲಿವೆ.
ಇದೀಗ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿಯ ಅರಣ್ಯ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ಕೆಐಒಸಿಎಲ್ ಕಾರ್ಯಗತಗೊಳಿಸುವ ತವಕದಲ್ಲಿದೆ. ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ವೇಳೆ ಆಗಿದ್ದ ಅರಣ್ಯ ನಾಶಕ್ಕೆ ಸಂಬಂಧಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಜಾರಿಗೊಳಿಸುವ ತನಕ ಸಂಡೂರಿನಲ್ಲಿ ಅರಣ್ಯ ಭೂಮಿ ಹಸ್ತಾಂತರಿಸದಿರಲು ರಾಜ್ಯ ಅರಣ್ಯ ಇಲಾಖೆ ನಿರ್ಧರಿಸಿದೆ. ಅದಕ್ಕಾಗಿ ಕುದುರೆಮುಖ ಟೌನ್‌ಶಿಪ್ ಸೇರಿ ಅಷ್ಟೂ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸಿದ್ಧತೆ ನಡೆಸಿದೆ. ಅರಣ್ಯ ಇಲಾಖೆಗೆ ಪತ್ರವನ್ನೂ ಬರೆದಿದೆ.
‘ಕುದುರೆಮುಖದಲ್ಲಿ ಸದ್ಯ ಸರ್ಕಾರಿ ಶಾಲೆ ಇದೆ. ಸಣ್ಣ ಪ್ರಮಾಣದ ಮಾರುಕಟ್ಟೆ, ಕೃಷಿ ಸಂಬಂಧಿತ ಚಟುವಟಿಕೆಗಳು ನಡೆಯುತ್ತಿವೆ. ಈ ಜಾಗವನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆಗೆ ನೀಡುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಕುದುರೆಮುಖದ ಸುತ್ತಮುತ್ತಿನ ನೆಲ್ಲಿಬೀಡು, ಜಾಂಬ್ಲೆ, ಸಿಂಗ್ಸಾರ್, ಬಿಳಿಗಲ್ಲು ಗ್ರಾಮಸ್ಥರು ಕೂಡ ಸೌಕರ್ಯಗಳಿಂದ ವಂಚಿತರಾಗುತ್ತಾರೆ. ಮೂರು ದಶಕಗಳ ಕಾಲ ಕಂಪನಿಗೆ ಲಾಭಗಳಿಸಲು ಅವಕಾಶ ಮಾಡಿಕೊಟ್ಟ ಜನರ ಬದುಕುನ್ನು ಸಂಕಷ್ಟಕ್ಕೆ ತಳ್ಳಬಾರದು’ ಎಂಬುದು ಸ್ಥಳೀಯರ ಆಕ್ಷೇಪ.
‘ಕುದುರೆಮುಖದಲ್ಲಿ ಯೋಜನಾ ಬದ್ಧವಾದ ನಗರ ನಿರ್ಮಿಸಿತ್ತು. ಇದು ಏಷ್ಯದಲ್ಲಿಯೇ ಮೊದಲ ಯೋಜನಾಬದ್ಧ ಟೌನ್‌ಶಿಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ನಿರ್ಮಾಣಗಳನ್ನು ಸರ್ಕಾರ ಸದ್ಭಳಕೆ ಮಾಡಿಕೊಳ್ಳಲಿಲ್ಲ. ಈಗ ಅರಣ್ಯ ಇಲಾಖೆಯ ಒತ್ತಡಕ್ಕೆ ಮಣಿದು ಕಂಪನಿಯು ಈ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಮುಂದಾಗಿದೆ’ ಎಂಬುದು ಅವರ ಆರೋಪ.
‘ಕೆಐಒಸಿಎಲ್‌ನ ಈ ನಿರ್ಧಾರವು ಕುದುರೆಮುಖದ ಸುತ್ತಮುತ್ತಲಿನ ಜನರಿಗೆ ಕಂಪನಿಯು ಬಗೆಯುತ್ತಿರುವ ದ್ರೋಹ ಮಾತ್ರವಲ್ಲ ಕಂಪನಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿರುವ ಕ್ರಮ’ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗಡೆ ಹೇಳಿದರು.
‘ಕುದುರೆಮುಖದದಲ್ಲಿ ಕಂಪನಿಯ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ಜನಜೀವನಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ಇಲ್ಲಿಯ ನಿರ್ಮಾಣಗಳನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು. ಕಂಪನಿಯು ಗಣಿಗಾರಿಕೆ ನಡೆಸಲು ಯಾರಿಂದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತೋ ಆ ರೈತರಿಗೇ ಭೂಮಿ ಹಂಚಬೇಕು. ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದವರಿಗೆ ಈ ಭೂಮಿಯನ್ನು ನೀಡಬೇಕು ಹಾಗೂ ಪಶ್ಚಿಮಘಟ್ಟದಲ್ಲಿ ‘ಟೈಮ್ ಬಾಂಬ್’ ನಂತಿರುವ ಲಕ್ಯಾ ಅಣೆಕಟ್ಟನ್ನು ಕಂಪನಿಯೇ ನಿರ್ವಹಿಸಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಕಂಪನಿಯು ಇತ್ತ ಗಮನವನ್ನೇ ನೀಡಲಿಲ್ಲ’ ಎಂದರು.
ಗಣಿಗಾರಿಕೆಯ ಸಂದರ್ಭದಲ್ಲಿ ಸೃಷ್ಟಿಯಾಗುತ್ತಿದ್ದ ಹೂಳು ತುಂಬಲು ಅರಣ್ಯ ಇಲಾಖೆ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ್ದ ಲಕ್ಯಾ ಅಣೆಕಟ್ಟೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಬೇಕಾಗುತ್ತದೆ. ಆಗ ಇದನ್ನು ನಿರ್ವಹಿಸುವವರು ಯಾರು ನಿರ್ವಹಿಸದಿದ್ದರೆ ಅಣೆಕಟ್ಟು ಒಡೆದು ಹೂಳೆಲ್ಲವೂ ಭದ್ರಾ ನದಿಗೆ ಹರಿಯಲಿದೆ. ಆಗ ನದಿ ಸಂಪೂರ್ಣವಾಗಿ ನಾಶವಾಗುವ ಅಪಾಯವೂ ಇದೆ ಎಂದು ಹೇಳಿದರು.
ಈ ಅಣೆಕಟ್ಟೆಯಿಂದ ಕಂಪನಿ ಮಂಗಳೂರಿನ ಪಣಂಬೂರಿನಲ್ಲಿ ಹೊಂದಿರುವ ಪೆಲ್ಲೆಟೈಸೇಶನ್ ಸ್ಥಾವರಕ್ಕೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಈ ಅಣೆಕಟ್ಟೆ ಜಾಗವನ್ನು ಅರಣ್ಯ ಇಲಾಖೆಗೆ ನೀಡುವುದರಿಂದ ಕಂಪನಿಗೇ ನೀರಿನ ಸಮಸ್ಯೆ ಎದುರಾಗಲಿದೆ. ಮಂಗಳೂರಿನಲ್ಲಿ ಕಂಪನಿಗೆ ಅಗತ್ಯವಾಗಿರುವ ಇಷ್ಟೊಂದು ನೀರನ್ನು ಹೊಂದಿಸುವುದು ಕಷ್ಟ ಎಂಬುದನ್ನು ಕಂಪನಿ ಮರೆತಂತಿದೆ. ಈ ಪ್ರಸ್ತಾವ ತಾತ್ಕಾಲಿಕ ಪರಿಹಾರವಾಗಿ ಕಂಡರೂ ಭವಿಷ್ಯದಲ್ಲಿ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.