ADVERTISEMENT

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಅರೆಬರೆ; ತೊಂದರೆ

ವಿವಿಧ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 13:46 IST
Last Updated 8 ಜನವರಿ 2019, 13:46 IST
ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು
ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು   

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ, ಕೇಂದ್ರ ಸರ್ಕಾರದ ಆರ್ಥಿಕ ನೀತಿ, ಕೈಗಾರಿಕಾ ನೀತಿಗಳು ಕಾರ್ಮಿಕ ವಿರೋಧಿಯಾಗಿವೆ ಎಂದು ವಿವಿಧ ಸಂಘಟನೆಗಳು ಮಂಗಳವಾರ ನಗರದಲ್ಲಿ ಮುಷ್ಕರ ಮಾಡಿದವು. ಕೆಎಸ್‌ಆರ್‌ಟಿಸಿ ಬಸ್ಸುಗಳು ಅರೆಬರೆ ಸಂಚಾರದಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಬೆಳಿಗ್ಗೆ 8 ಗಂಟೆರವರೆಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇತ್ತು. ನಂತರ ಬಸ್ಸುಗಳ ಸಂಚಾರ ವಿರಳವಾಯಿತು. ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಬಸ್ಸುಗಳು ಇರಲಿಲ್ಲ. ಪ್ರಯಾಣಿಕರು ನಿಲ್ದಾಣದಲ್ಲಿ ಪರಿತಪಿಸುವಂತಾಯಿತು. ಶಾಲೆಕಾಲೇಜಿಗೆ ಬಂದಿದ್ದ ಗ್ರಾಮೀಣ ವಿದ್ಯಾರ್ಥಿಗಳು ಊರಿಗೆ ವಾಪಸ್‌ ಹೋಗುವುದಕ್ಕೆ ತೊಂದರೆಯಾಯಿತು. ಕಡೂರು, ತರೀಕೆರೆ, ಮೂಡಿಗೆರೆ ಮಾರ್ಗದ ಬಸ್ಸುಗಳು ಆಗೊಂದು, ಹೀಗೊಂದು ಸಂಚರಿಸಿದವು. ಸಂಜೆ 4 ಗಂಟೆ ನಂತರ ಕೆಲವು ಬಸ್ಸುಗಳು ವಿವಿಧೆಡೆಗಳಿಗೆ ಸಂಚರಿಸಿದವು. ಆದರೆ, ನಿತ್ಯದಂತೆ ಎಲ್ಲ ಬಸ್ಸುಗಳ ಸಂಚಾರ ಯಥಾವತ್ತಾಗಿ ಆರಂಭವಾಗಿಲ್ಲ. ನಿರ್ವಾಹಕರು, ಚಾಲಕರು, ಸಿಬ್ಬಂದಿ ಬೆಳಿಗ್ಗೆಯಿಂದಲೂ ನಿಲ್ದಾಣದಲ್ಲಿ ಇದ್ದರು.

ಖಾಸಗಿ ವಾಹನ ಸಂಚಾರ ಯಥಾವತ್ತು: ನಗರದಲ್ಲಿ ಮಂಗಳವಾರ ಆಟೊ, ಖಾಸಗಿ ವಾಹನಗಳ ಸಂಚಾರ ನಿತ್ಯದಂತೆ ಇತ್ತು. ನಗರ ಸಂಚಾರ ಬಸ್ಸುಗಳು ಸಂಚರಿಸಿದವು.

ADVERTISEMENT

ನಗರದಲ್ಲಿ ಅಂಗಡಿ, ಮಳಿಗೆಗಳು, ಹೋಟೆಲ್‌ ಮೊದಲಾದವು ಎಂದಿನಂತೆ ಕಾರ್ಯನಿರ್ವಹಿಸಿದವು. ಜನಜೀವನ ಸಹಜವಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನದಟ್ಟಣೆ, ಜನದಟ್ಟಣೆ ನಿತ್ಯಕ್ಕಿಂತ ಕೊಂಚ ಕಡಿಮೆ ಇತ್ತು.

ಶಾಲೆಕಾಲೇಜುಗಳಿಗೆ ರಜೆ ಇರಲಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಿದ್ದರು. ಶಾಲಾ ವಾಹನಗಳು ಎಂದಿನಂತೆ ಸಂಚರಿಸಿದವು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕೆಲ ಸಂಘಟನೆಗಳು ಪ್ರತ್ಯೇಕವಾಗಿ ಪತ್ಯೇಕ ಕಡೆ ಪ್ರತಿಭಟನೆ ಮಾಡಿದವು. ಕೆಎಸ್‌ಆರ್‌ಟಿಸಿ ನಿಲ್ದಾಣ, ಆಜಾದ್‌ ಪಾರ್ಕ್ ವೃತ್ತ ಸಹಿತ ವಿವಿಧೆಡೆಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ಪ್ರತಿಭಟನಾ ಮೆರವಣಿಗೆ, ಸಭೆ
ಅಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌(ಎಐಟಿಯುಸಿ), ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಐಎನ್‌ಟಿಯುಸಿ) ಮೊದಲಾದ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರ್‌ ಮಾತನಾಡಿ, ‘ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಬಹಳಷ್ಟು ಕಾರ್ಖಾನೆಗಳಲ್ಲಿ ಶೇ 70 ಗುತ್ತಿಗೆ ಆಧಾರದಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ’ ಎಂದು ದೂಷಿಸಿದರು.

‘ದುಡಿಯವ ವರ್ಗವನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. ಆರ್ಥಿಕ, ಕೈಗಾರಿಕಾ ನೀತಿಗಳು ಕಾರ್ಮಿಕ ವಿರೋಧಿಯಾಗಿವೆ. ಇದರಿಂದಾಗಿ ಕೈಗಾರಿಕೆಗಳ ಬೆಳೆಗಣಿಗೆಗೆ ಹೊಡೆತ ಬಿದ್ದಿದೆ’ ಎಂದು ಆರೋಪಿಸಿದರು.

‘ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು, ಕಪ್ಪುಹಣ ತಂದು ಜನರ ಖಾತೆಗೆ ಜಮೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಈಡೇರಿಸಿಲ್ಲ. ಶ್ರೀಮಂತರು, ಉದ್ಯಮಿಗಳು, ಕಾರ್ಪೊರೇಟ್‌ ಕುಳಗಳಿಗೆ ಮೋದಿ ಮಣೆ ಹಾಕುತ್ತಿದ್ದಾರೆ’ ಎಂದು ದೂರಿದರು.

ಕಾರ್ಮಿಕ ಮುಖಂಡರಾದ ರಾಧಾಸುಂದರೇಶ್‌ ಮಾತನಾಡಿ, ‘ಸಮಾಜದ ಬದಲಾವಣೆ ಹೊಣೆ ನಮ್ಮ ಮೇಲಿದೆ. ದೇಶವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಯತ್ನಿಸಬೇಕಿದೆ’ ಎಂದರು.

‘ಮೋದಿ ನೇತೃತ್ವದ ಸರ್ಕಾರದ ಕಾನೂನುಗಳಿಂದ ಕಾರ್ಮಿಕರು ರೋಸಿ ಹೋಗಿದ್ದಾರೆ. ಕೆಲಸದ ಅವಧಿ 8 ಗಂಟೆ ಇರುವುದನ್ನು ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ಕೆಲಸದ ಅವಧಿ ಹೆಚ್ಚಿಸಿದರೆ ಕಾರ್ಮಿಕರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಗುತ್ತಿಗೆ ಆಧಾರದ ನೌಕರಿಯಿಂದಾಗಿ ಗುಲಾಮಗಿರಿ ಅನುಭವಿಸಬೇಕಾಗಿದೆ. ಜನರನ್ನು ಗುತ್ತಿಗೆ ತೆಗೆದುಕೊಳ್ಳುವಂಥ ಹೀನಾಯ ಸ್ಥಿತಿಗೆ ಈ ಸರ್ಕಾರ ಬಂದಿದೆ. ಇದನ್ನು ಎಲ್ಲರೂ ವಿರೋಧಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಕಾರ್ಮಿಕ ವಿರೋಧಿಗಳಿಗೆ ಪಾಠ ಕಲಿಸಬೇಕು’ ಎಂದರು.

ಸಹ್ಯಾದ್ರಿ ಪ್ಲಾಂಟೇಷನ್‌ ಮತ್ತು ಜನರಲ್‌ ವರ್ಕರ್ಸ್‌ ಸಂಘಟನೆಯ ಕೆ.ಎಂ.ರಾಮಚಂದ್ರ ಒಡೆಯರ್‌ ಮಾತನಾಡಿ, ‘ಮೋದಿ ಅವರು ಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ. ಅದಾನಿ, ಅಂಬಾನಿ ಅಂಥವರಿಗೆ ಮಣೆ ಹಾಕುತ್ತಿದ್ದಾರೆ. ಸರಿಯಾದ ನಾಯಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕಿದೆ’ ಎಂದರು.

ಸಿಪಿಐ ಜಿಲ್ಲಾ ಪ್ರಧಾನಕಾರ್ಯದರ್ಶಿ ರೇಣುಕಾರಾಧ್ಯ ಮಾತನಾಡಿ, ‘ಕೇಂದ್ರ ಸರ್ಕಾರವು ಕಾರ್ಮಿಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ನಮ್ಮ ಕೂಗು ಕೇಳದವರನ್ನು ಅಧಿಕಾರದಿಂದ ಓಡಿಸುವ ಕೆಲಸವನ್ನು ಮಾಡಬೇಕಿದೆ’ ಎಂದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಸ್‌.ವಿಜಯಕುಮಾರ್‌, ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯ, ಮೈಸೂರು ತೋಟ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸುಬ್ರಮಣಿ, ಸೆಲ್ವಂ, ಮುನಿಯಾಂಡಿ, ಅಬ್ದುಲ್‌ ಜಫಾರ್‌, ಗೋವಿಂದನ್‌, ಇಂದುಮತಿ, ಮಂಗಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.