ADVERTISEMENT

ಚಿಕ್ಕಮಗಳೂರು | ಚುನಾವಣೆ ಪ್ರಕ್ರಿಯೆ: 150 ಕ್ಯಾಮರಾ ಕಣ್ಗಾವಲು

22 ಚೆಕ್‌‍ಪೋಸ್ಟ್‌, 5 ಸಂಚಾರ ತನಿಖಾ ತಂಡಕ್ಕೆ ತಲಾ ಒಂದು ಕ್ಯಾಮರಾ

ವಿಜಯಕುಮಾರ್ ಎಸ್.ಕೆ.
Published 25 ಮಾರ್ಚ್ 2024, 7:29 IST
Last Updated 25 ಮಾರ್ಚ್ 2024, 7:29 IST
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ   

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಬಹುತೇಕ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಲಿದೆ. 150ಕ್ಕೂ ಹೆಚ್ಚು ಕ್ಯಾಮರಾಗಳು ಚುನಾವಣಾ ಪ್ರಕ್ರಿಯೆ, ನೀತಿ ಸಂಹಿತೆ ಪಾಲನೆ ಮೇಲೆ ಕಣ್ಣಿಡಲಿವೆ

ಚುನಾವಣೆ ಪ್ರಕ್ರಿಯೆಗಳೆಲ್ಲವೂ ಕ್ಯಾಮರಾ ಕಣ್ಗಾವಲಿನಲ್ಲೆ ನಡೆಯಬೇಕೆಂಬುದು ಚುನಾವಾಣಾ ಆಯೋಗ ಸೂಚನೆ ಇದೆ. ಅದರಂತೆ ಸದ್ಯ ಜಿಲ್ಲೆಯ 22 ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲವೂ ಕ್ಯಾಮರ ಕಣ್ಣಿನ ಅಡಿಯಲ್ಲೆ ನಡೆಯುತ್ತಿದೆ.

ಸದ್ಯ ಜಿಲ್ಲೆಯಲ್ಲಿ 22 ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 18 ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳಾಗಿದ್ದು, ಜಿಲ್ಲೆಯ ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾಲ್ಕು ಚೆಕ್‌ಪೋಸ್ಟ್‌ಗಳು ಜಿಲ್ಲೆಯೊಳಗೇ ಸೂಕ್ಷ್ಮ ಪ್ರದೇಶದಲ್ಲಿವೆ. ಈ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ.

ADVERTISEMENT

ಪೊಲೀಸ್‌, ಅಬಕಾರಿ, ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಂಡಕ್ಕೆ ತಲಾ ಒಬ್ಬ ಖಾಸಗಿ ಛಾಯಾಗ್ರಹಕರನ್ನು ಒದಗಿಸಲಾಗಿದೆ. ವಾಹನ ತಪಾಸಣೆ ವೇಳೆ ಎಲ್ಲವನ್ನೂ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ಕ್ಯಾಮೆರಾಗಳನ್ನು ಖಾಸಗಿಯವರಿಂದ ಬಾಡಿಗೆ ಪಡೆಯಲಾಗಿದ್ದು, ಕ್ಯಾಮೆರಾ ಸಹಿತ ಬಂದು ಚಿತ್ರೀಕರಿಸಿ ಜಿಲ್ಲಾಡಳಿತಕ್ಕೆ ಒದಗಿಸುವುದು ಈ ಕೆಲಸದ ಗುತ್ತಿಗೆ ಪಡೆದವರ ಜವಾಬ್ದಾರಿ.

ಪ್ರತಿ ಚುನಾವಣೆಯಲ್ಲೂ ಕ್ಯಾಮೆರಾಗಳನ್ನು ಬಾಡಿಗೆ ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಈ ಬಾರಿಯೂ ಅದೇ ರೀತಿ 22 ಚೆಕ್‌ಪೋಸ್ಟ್‌ ಮತ್ತು 5 ಸಂಚಾರಿ ತನಿಖಾ ತಂಡಕ್ಕೆ ತಲಾ ಒಂದರಂತೆ ಒಟ್ಟು 27 ಕ್ಯಾಮೆರಾಗಳನ್ನು ಸದ್ಯಕ್ಕೆ ಬಾಡಿಗೆಗೆ ಪಡೆಯಲಾಗಿದೆ.

ಚುನಾವಣಾ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ದಿನದಿಂದ 27 ಕ್ಯಾಮೆರಾ ಕಣ್ಗಾವಲಿದೆ. ಮತದಾನದ ದಿನದಂದು ಇನ್ನೂ 120ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಪಡೆದುಕೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ. ಅದಕ್ಕೂ ಟೆಂಡರ್ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಆರಂಭಿಸಿದೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಡೂರು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿದರೆ, ಉಳಿದ ನಾಲ್ಕು ಕ್ಷೇತ್ರಗಳು(ಚಿಕ್ಕಮಗಳುರು, ಶೃಂಗೇರಿ, ಮೂಡಿಗೆರೆ ಮತ್ತು ತರೀಕೆರೆ) ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಮತದಾನ ಮಾತ್ರ ಜಿಲ್ಲೆಯಲ್ಲಿ ನಡೆಯಲಿದ್ದು ಮತ ಎಣಿಕೆ ಉಡುಪಿ ಮತ್ತು ಹಾಸನದಲ್ಲಿ ನಡೆಯಲಿದೆ.

ಆದ್ದರಿಂದ ಮತ ಎಣಿಕೆಗೆ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುವ ಹೊಣೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಇಲ್ಲ. ಮತದಾನ ಪೂರ್ಣಗೊಳಿಸಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಉಡುಪಿ ಮತ್ತು ಹಾಸನದಲ್ಲಿನ ಸ್ಟ್ರಾಂಗ್‌ ರೂಂಗಳಿಗೆ ಸಾಗಿಸಿದರೆ ಚುನಾವಣಾ ಕಾರ್ಯ ಪೂರ್ಣಗೊಂಡಂತೆ ಆಗಲಿದೆ. ಅಷ್ಟೂ ಕಾರ್ಯಗಳನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯಲಾಗುತ್ತಿದೆ.

ದಿನ ಬಾಡಿಗೆ ಆಧಾರದಲ್ಲಿ ಕ್ಯಾಮರಾ
ಚುನಾವಣಾ ಕಾರ್ಯಕ್ಕೆ ಬೇಕಾಗುವ ಪ್ರತಿ ಕ್ಯಾಮೆರಾಕ್ಕೆ ದಿನಕ್ಕೆ ₹2750ರಂತೆ ದರವನ್ನು ಜಿಲ್ಲಾಡಳಿತ ನಿಗದಿ ಮಾಡಿದೆ. ಚುನಾವಣಾ ಘೋಷಣೆ ಆಗುತ್ತಿದ್ದಂತೆ ಕ್ಯಾಮೆರಾ ಒದಗಿಸಲು ಹಲವರು ಜಿಲ್ಲಾಡಳಿತದ ಮುಂದೆ ಮುಗಿಬಿದ್ದಿದ್ದರು. ಆದ್ದರಿಂದ ಟೆಂಡರ್ ಪ್ರಕ್ರಿಯೆ ನಡೆಸಿ ಕಡಿಮೆ ದರ ನಿಗದಿ ಮಾಡಿದವರಿಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳುತ್ತಾರೆ. ಸದ್ಯ ಪ್ರತಿನಿತ್ಯ ₹74250 ಖರ್ಚಾಗುತ್ತಿದ್ದು 40 ದಿನಕ್ಕೆ ಒಟ್ಟು ₹2970000 ಖರ್ಚಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅದರ ಜತೆಗೆ ಮತದಾನದ ದಿನ 120ಕ್ಕೂ ಹೆಚ್ಚು ಕ್ಯಾಮರಗಳು ಬೇಕಾಗಲಿದ್ದು ಎರಡು ದಿನಕ್ಕೆ ₹60 ಲಕ್ಷಕ್ಕೂ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ.
‘ಜವಾಬ್ದಾರಿ ಹೆಚ್ಚು: ದರ ಕಡಿಮೆ’
ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವುದರಿಂದ ದಿನಕ್ಕೆ ₹2750 ದರ ಕಡಿಮೆ ಎಂದು ಛಾಯಾಗ್ರಾಹಕರು ಹೇಳುತ್ತಾರೆ. 24 ಗಂಟೆಯೂ ಒಬ್ಬರೇ ಕಾರ್ಯ ನಿರ್ವಹಿಸಲು ಆಗುವುದಿಲ್ಲ. ಇಬ್ಬರನ್ನು ನಿಯೋಜಿಸಬೇಕು. ಯಾರೊಬ್ಬರ ಬಳಿಯೂ ಅಷ್ಟು ಕ್ಯಾಮೆರಾಗಳು ಸಂಗ್ರಹ ಇರುವುದಿಲ್ಲ. ಬೇರೆ ಬೇರೆ ಸ್ಟೂಡಿಯೊಗಳಿಂದ ಬಾಡಿಗೆ ಪಡೆಯಬೇಕಾಗುತ್ತದೆ ಎಂದು ವಿವರಿಸುತ್ತಾರೆ. ಜಿಲ್ಲಾಡಳಿತ ಸದ್ಯಕ್ಕೆ ಹಣ ಒದಗಿಸುವುದಿಲ್ಲ. ಗುತ್ತಿಗೆ ಪಡೆದವರು ಮೊದಲು ಬಂಡವಾಳ ಹೂಡಬೇಕು. ಚುನಾವಣೆ ಮುಗಿದ ನಂತರ ಬಿಲ್‌ ಸಲ್ಲಿಸಬೇಕು. ಚುನಾವಣಾ ಆಯೋಗದಿಂದ ಅನುದಾನ ಬಂದ ಬಳಿಕ ಹಣ ಬಿಡುಗಡೆಯಾಗಲಿದೆ. ಎಷ್ಟು ತಿಂಗಳಾಗಲಿದೆ ಎಂಬುದು ಗೊತ್ತಿಲ್ಲ. ‌ಜವಾಬ್ದಾರಿ ಹೆಚ್ಚಿದ್ದು ಲ್ಲಾ ವೆಚ್ಚವನ್ನು ಲೆಕ್ಕಚಾರ ಮಾಡಿದರೆ ಗುತ್ತಿಗೆ ಪಡೆದವರಿಗೆ ಬರಿಗೈ ಆಗಲಿದೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.