ADVERTISEMENT

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಆಚರಣೆ: ರಾತ್ರಿ ಭಜನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 3:41 IST
Last Updated 16 ಫೆಬ್ರುವರಿ 2026, 3:41 IST
ಚಿಕ್ಕಮಗಳೂರಿನ ಅರವಿಂದನಗರದ ಸೋಮೇಶ್ವರ ದೇಗುಲದಲ್ಲಿ ಶಿವನ ಪೂಜೆ ಭಾನುವಾರ ನಡೆಯಿತು
ಚಿಕ್ಕಮಗಳೂರಿನ ಅರವಿಂದನಗರದ ಸೋಮೇಶ್ವರ ದೇಗುಲದಲ್ಲಿ ಶಿವನ ಪೂಜೆ ಭಾನುವಾರ ನಡೆಯಿತು   

ಚಿಕ್ಕಮಗಳೂರು: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಗರದಾದ್ಯಂತ ಶಿವನ ದೇವಾಲಯಗಳಲ್ಲಿ ಶಿವನಾಮ ಸ್ಮರಣೆ ನಡೆಯಿತು.

ನಗರದ ಬೋಳರಾಮೇಶ್ವರ ದೇವಾಲಯ, ಓಂಕಾರೇಶ್ವರ, ಅರವಿಂದನಗರ ಸೋಮೇಶ್ವರ ದೇವಾಲಯ, ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಶಿವಗಂಗಾ ದೇಗುಲ, ಹಳ್ಳದ ರಾಮೇಶ್ವರ, ಪಾತಾಳೇಶ್ವರ ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ತೆರಳಿ ದೇವರ ದರ್ಶನ ಪಡೆದು ಹೂವು, ಹಣ್ಣು, ಕಾಯಿ ನೀಡಿ ಭಕ್ತಿ ಸಮರ್ಪಿಸಿದರು.

ಬೋಳರಾಮೇಶ್ವರ ದೇವಾಲಯದಲ್ಲಿ ಶಿವಲಿಂಗದ ಮೂರ್ತಿಯನ್ನು ಬಿಲ್ವಪತ್ರೆ, ತುಳಸಿಮಾಲೆ ಸಹಿತ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಬಂದು ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿ ಸಲ್ಲಿಸಿದರು. ಬಸವನಹಳ್ಳಿ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ವಿಗ್ರಹಕ್ಕೆ ಅಲಂಕಾರ ಮಾಡಿ ಪೂಜಿಸಲಾಯಿತು.  

ADVERTISEMENT

ಲೋಕ ಕಲ್ಯಾಣಾರ್ಥವಾಗಿ ಮುಂಜಾನೆ ದೇವರಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ರಾತ್ರಿ ಭಜನೆ ಕಾರ್ಯಕ್ರಮ, ಜಾಗರಣೆ, ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಲಯದ ಅರ್ಚಕರು ತಿಳಿಸಿದರು.

ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನದ ಮೂಲಕ ಆರಾಧಿಸಿದರೆ ಕಷ್ಟಗಳು ದೂರವಾಗಲಿದೆ ಎಂಬುದು ಭಕ್ತರ ನಂಬಿಕೆ ಎಂದು ಹೇಳಿದರು.

ಕಡೂರು: ಭಕ್ತಿ-ಭಾವದ ಶಿವರಾತ್ರಿ ಆಚರಣೆ

ಕಡೂರು: ತಾಲ್ಲೂಕಿನಾದ್ಯಂತ ಎಲ್ಲ ಮನೆ ಮನೆಗಳು, ಶಿವಾಲಯಗಳು ಮತ್ತು ವಿವಿಧ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು ದಿನವಿಡೀ ನಡೆದರೆ, ಕೆಲವು ದೇವಾಲಯಗಳಲ್ಲಿ ನಾಲ್ಕೂ ಯಾಮಗಳಲ್ಲಿ ಈಶ್ವರನಿಗೆ ರುದ್ರಾಭಿಷೇಕ, ಭಜನೆ, ಪಾರಾಯಣ ಮತ್ತಿತರ ಕಾರ್ಯಕ್ರಮಗಳು ಜರುಗಿದವು.

ಕಡೂರಿನ ಚಂದ್ರಮೌಳೀಶ್ವರ (ಸ್ಮಶಾನೇಶ್ವರ) ದೇವಾಲಯದಲ್ಲಿ ಭಾನುವಾರ ಬೆಳಗಿನಿಂದಲೇ ಭಕ್ತರು ಸರತಿಯಲ್ಲಿ ನಿಂತು ಪರಮೇಶ್ವರನ ದರ್ಶನ ಪಡೆಯುವ ಜತೆಗೆ ಸ್ವತಃ ಅಭಿಷೇಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ತಾಲ್ಲೂಕಿನ ಪ್ರಮುಖ ಶಿವಾಲಯಗಳಾದ ಕಡೂರು ಪ್ರಸನ್ನ ಗಂಗಾಧರೇಶ್ವರ, ಯಗಟಿ ಮಲ್ಲಿಕಾರ್ಜುನ ಸ್ವಾಮಿ, ಸಿಂಗಟಗೆರೆ ಕಲ್ಲೇಶ್ವರ ಸ್ವಾಮಿ, ಬೀರೂರು ವೀರಭದ್ರ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ನರಸಣ್ಣನವರ ಛತ್ರದ ಚಂದ್ರಮೌಳೀಶ್ವರ, ಶ್ರೀರಾಮಪುರಂ ಚಂದ್ರಮೌಳೀಶ್ವರ, ಸಖರಾಯಪಟ್ಟಣದ ಕಲ್ಮರುಡಿ ಮಠ, ಕಾಳಹಸ್ತೀಶ್ವರ ದೇವಾಲಯ, ಅಯ್ಯನಕೆರೆ ಬಲ್ಲಾಳೇಶ್ವರ ದೇವಾಲಯ, ಹಿರಿಯಂಗಳ ರುದ್ರಸ್ವಾಮಿ ದೇವಾಲಯ, ಚೌಳಹಿರಿಯೂರು ಈಶ್ವರ, ಸೋಮೇಶ್ವರ, ಭೋಗನಂಜುಂಡೇಶ್ವರ ದೇವಾಲಯ, ಹಿರೇನಲ್ಲೂರು ಮಲ್ಲಿಕಾರ್ಜುನ ದೇವಾಲಯ ಮೊದಲಾದ ಕಡೆಗಳಲ್ಲಿ ದಿನವಿಡೀ ಅಭಿಷೇಕ, ಶಿವನಾಮ ಸ್ಮರಣೆ, ಭಜನೆ, ಜಾಗರಣೆ ಕಾರ್ಯಕ್ರಮಗಳು ನಡೆದವು.

ಭಕ್ತರು ದೇವಾಲಯಗಳಿಗೆ ವಿಶೇಷವಾಗಿ ಬಿಲ್ವಪತ್ರೆ, ಮುತ್ತುಗದ ಹೂ, ತುಂಬೆ ಹೂ, ಎಳನೀರು, ನೀರು, ಹಾಲು, ಪಂಚಾಮೃತ ಸಾಮಗ್ರಿಗಳನ್ನು ಒಯ್ದು ಅಭಿಷೇಕ ಮಾಡಿ, ಅರ್ಚಿಸಿ ಭಕ್ತಿಭಾವ ಮೆರೆದರು. ಕಡೂರಿನ ಭಕ್ತರು ಖಂಡುಗದಹಳ್ಳಿ ಶ್ರೀಗುರು ಸೋಮೇಶ್ವರ ಸ್ವಾಮಿ ದೇವಾಲಯಕ್ಕೆ ಪಾದಯಾತ್ರೆಯಲ್ಲಿ ತೆರಳಿದ್ದು ಜಾಗರಣೆ ಬಳಿಕ ಬೆಳಿಗ್ಗೆ ರಥೋತ್ಸವ ನಡೆಯಲಿದೆ.

ಚಿಕ್ಕಮಗಳೂರಿನ ಬೋಳರಾಮೇಶ್ವರಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು
ಚಿಕ್ಕಮಗಳೂರಿನ ಬೋಳರಾಮೇಶ್ವರ ದೇಗಲದಲ್ಲಿ ಬ್ರಹ್ಮಕುಮಾರಿ ಈಶ್ವರಿ ವತಿಯಿಂದ ನಿರ್ಮಿಸಿರುವ ಶಿವಲಿಂಗವನ್ನು ಭಕ್ತರು ದರ್ಶನ ಮಾಡಿದರು
ಮೂಡಿಗೆರೆ ತಾಲ್ಲೂಕಿನ ದೇವರಮನೆ ಕಾಲಭೈರವೇಶ್ವರ ದೇಗಲದಲ್ಲಿ ಭಾನುವಾರ ವಿಶೇಷ ಅಲಂಕಾರ ಮಾಡಲಾಗಿತ್ತು

ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ರುದ್ರಾಭಿಷೇಕ

ನರಸಿಂಹರಾಜಪುರ: ಮಹಾಶಿವರಾತ್ರಿ ಪ್ರಯುಕ್ತ ತಾಲ್ಲೂಕಿನಾದ್ಯಂತ ವಿವಿಧ ಶಿವನ ದೇವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ರುದ್ರಾಭಿಷೇಕ ನಡೆದವು.  ಪಟ್ಟಣದ ಹಳೇಮಂಡಗದ್ದೆ ಸರ್ಕಲ್ ವ್ಯಾಪ್ತಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಸಂಜೆಯೂ ಸಹ ವಿಶೇಷ ಪೂಜೆ ಪ್ರಸಾದ ವಿನಿಯೋಗ ಜರುಗಿತು. ಕಲಾ ಮತ್ತು ಸುರಭಿ ಯುವಕ ಸಂಘದ ನೇತೃತ್ವದಲ್ಲಿ ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ರಾಗಮಯೂರಿ ಅಕಾಡೆಮಿ ಮಕ್ಕಳಿಂದ ಶ್ರೀಕೃಷ್ಣ ಲೀಲಾ ಅಮೋಘ ನೃತ್ಯ ರೂಪಕ ನಡೆಯಿತು. ಮೆಣಸೂರು ಗ್ರಾಮದ ಭದ್ರಾ ಹಿನ್ನೀರಿನ ದಡದಲ್ಲಿರುವ ಪುರಾತನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ರುದ್ರಾಭಿಷೇಕ ನಡೆದು ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.

ದೇವಸ್ಥಾನದ ಆವರಣದಲ್ಲಿರುವ ವೀರಗಲ್ಲಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಗಲಾಪುರ ಗ್ರಾಮದ ಈಶ್ವರ ದೇವಸ್ಥಾನದ ಸೇವಾ ಸಮಿತಿ ಆಶ್ರಯದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಹಾಶಿವರಾತ್ರಿ ಆಚರಣೆ ಪ್ರಯುಕ್ತ ರಾತ್ರಿ ಅಭಿನವ ಮ್ಯೂಸಿಕಲ್ ಈವೆಂಟ್ಸ್‌ನಿಂದ ಆರ್ಕೆಸ್ಟ್ರಾ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಅಗ್ರಹಾರದಲ್ಲಿರುವ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ರಾತ್ರಿ ಜಾಗರಣೆ ನಡೆದರೆ ಮುತ್ತಿನಕೊಪ್ಪ ಗ್ರಾಮದಲ್ಲಿರುವ ಈಶ್ವರ ದೇವಾಲಯ ಬಡಗಬೈಲು ಗ್ರಾಮದ ಕನಗೆರೆ ರಂಗನಾಥೇಶ್ವರ ಸ್ವಾಮಿ ದೇವಾಲಯ ಭದ್ರಾಅಭಯಾರಣ್ಯ ಪ್ರದೇಶದ ವ್ಯಾಪ್ತಿಯ ಹೆಬ್ಬೆಯಲ್ಲಿರುವ ಭವಾನಿ ಶಂಕರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಈಶ್ವರ ಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.