ಚಿಕ್ಕಮಗಳೂರು: ಬೇಸಿಗೆಗೆ ಮುನ್ನವೇ ಈ ಬಾರಿ ಮಂಗನ ಕಾಯಿಲೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ನಾಲ್ವರಿಗೆ ಈ ಸೋಂಕು ತಗುಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ರೋಗ ಹರಡುವುದನ್ನು ತಡೆಯುವುದು ಆರೋಗ್ಯ ಇಲಾಖೆ ಪಾಲಿಗೆ ಸವಾಲಿನ ಕೆಲಸವಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ 1957ರಲ್ಲಿ ಮೊದಲು ಕಾಣಿಸಿಕೊಂಡಿತು. ಸಂಶೋಧನೆ ವೇಳೆ ಇದು ಹೊಸ ವೈರಸ್ ಎಂಬುದು ಗೊತ್ತಾದ ಬಳಿಕ ಕ್ಯಾಸನೂರು ಕಾಡಿನ ಕಾಯಿಲೆ(ಕೆಎಫ್‌ಡಿ) ಎಂದೇ ಕರೆಯಲಾಗುತ್ತಿದೆ.
ಈ ಕಾಯಿಲೆ ಹರಡಿದ ಮಂಗಗಳಿಗೆ ಕಚ್ಚಿದ ಉಣ್ಣೆಗಳು(ಕೀಟ) ಮನುಷ್ಯರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತಿದೆ. ಮನುಷ್ಯನಿಂದ ಮನುಷ್ಯನಿಗೆ ಹರಡುವ ಕಾಯಿಲೆ ಅಲ್ಲ. ಸಾಧಾರಣವಾಗಿ ಈ ಉಣ್ಣೆಗಳು ಅಕ್ಟೋಬರ್‌ನಲ್ಲಿ ಹುಟ್ಟಿಕೊಂಡು ಡಿಸೆಂಬರ್ ನಂತರ ವೈರಾಣು ಹರಡುತ್ತವೆ. ಬೇಸಿಗೆ ಕಾಲದಲ್ಲೇ ಹೆಚ್ಚಾಗಿ ಹರಡುತ್ತವೆ. ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆ. ಈ ಕೀಟಗಳು ಸಾಮಾನ್ಯವಾಗಿ ಮರದ ಎಲೆಗಳ ಮೇಲೆ ಕುಳಿತುಕೊಳ್ಳುತ್ತವೆ.
ಅರಣ್ಯಕ್ಕೆ ಹೋದ ಜನರಿಗೆ ಕಚ್ಚಿದರೆ ಅವರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷ ಕೊಪ್ಪ ತಾಲ್ಲೂಕಿನಲ್ಲಿ ಹೆಚ್ಚಿನದಾಗಿ ಈ ರೋಗ ಹರಡಿತ್ತು. ಅದರಲ್ಲೂ ಕಾಡಿನಲ್ಲಿ ಕಡಿದ್ದಿದ್ದ ಮರ ಸಾಗಿಸಲು ಹೋದವರಿಗೂ ಈ ರೋಗಕ್ಕೆ ತುತ್ತಾಗಿದ್ದರು. ಫೆಬ್ರುವರಿ ತಿಂಗಳಲ್ಲಿ ಹೆಚ್ಚಿನದಾಗಿ ಹರಡಿತ್ತು.
ಈ ವರ್ಷ ಜನವರಿಯಲ್ಲೇ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ನೆರೆ ಹೊರೆಯ ಜಿಲ್ಲೆಯಲ್ಲಿ ಎಲ್ಲಾ ಮಂಗನ ಕಾಯಿಲೆ ದಾಖಲಾಗಿಲ್ಲ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಮತ್ತು ಕೊಪ್ಪ ತಾಲ್ಲೂಕಿನಲ್ಲಿ ರೋಗ ಕೆಎಫ್‌ಡಿ ಕಾಣಿಡಿಕೊಂಡಿದ್ದು, ಜನರಲ್ಲಿ ಭೀತಿ ಹೆಚ್ಚಿಸಿದೆ.
ಕೆಎಫ್‌ಡಿ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಹೆಚ್ಚಿನದಾಗಿ ಮಾಡಲಾಗುತ್ತಿದ್ದು ಈವರೆಗೆ 4 ಪ್ರಕರಣ ದಾಖಲಾಗಿವೆ. ಎಲ್ಲರಿಗೂ ಚಿಕಿತ್ಸೆ ದೊರಕಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.ಡಾ.ಅಶ್ವತ್ಥಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
* ಪ್ರಾರಂಬಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು.
* ಮಂಗಗಳು ಸಾಯುತ್ತಿರುವುದು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ತಿಳಿಸಬೇಕು.
* ಕಾಡಿಗೆ ಹೋಗುವಾಗ ಮೈ ತುಂಬ ಬಟ್ಟೆ ಧರಿಸಬೇಕು.
* ಮನೆಯಿಂದ ಹೊರ ಹೋಗುವಾಗ ಡಿಇಪಿಎ() ತೈಲ ಹಚ್ಚಿಕೊಳ್ಳಬೇಕು.
* ಮಂಗ ಸತ್ತಿರುವ ಪ್ರದೇಶಕ್ಕೆ ಸಾರ್ವಜನಿಕರು ಹೋಗದಿರುವುದು ಉತ್ತಮ.
* ಕಾಡಿನಿಂದ ಬಂದ ತಕ್ಷಣ ಧರಿಸಿದ್ದ ಬಟ್ಟೆಯನ್ನು ಬಿಸಿನೀರಿಲ್ಲಿ ತೊಳೆಯಬೇಕು ಸ್ನಾನ ಮಾಡಬೇಕು.
* ಕಾಡಿನಿಂದ ಬಂದ ಕೂಡಲೇ ದನಕರುಗಳ ಮೇಲಿನ ಉಣ್ಣೆಯನ್ನು ಕಿತ್ತು ತೆಗೆಯಬೇಕು.
* ಕಾಡಿನಿಂದ ಒಣ ಎಲೆ ಅಥವಾ ಕಟ್ಟಿಗೆ ತಂದು ಸಂಗ್ರಹಿಸದಿರುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.