
ಚಿಕ್ಕಮಗಳೂರು–ಮೂಡಿಗೆರೆ ರಸ್ತೆ ಅಭಿವೃದ್ಧಿಗೆ ಪೂರ್ವ ತಯಾರಿ ನಡೆಸುತ್ತಿರುವುದು
ಸಂಗ್ರಹ ಚಿತ್ರ
ಚಿಕ್ಕಮಗಳೂರು: ಮೂಡಿಗೆರೆ–ಚಿಕ್ಕಮಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಭೂಸ್ವಾಧೀನವೇ ದೊಡ್ಡ ತೊಡಕಾಗಿದ್ದು, ಕಾಮಗಾರಿ ಆರಂಭಗೊಳ್ಳುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಮೂಗ್ತಿಹಳ್ಳಿಯಿಂದ ಮೂಡಿಗೆರೆ ತನಕದ 26 ಕಿಲೋ ಮೀಟರ್ ರಸ್ತೆ ವಿಸ್ತರಣೆಗೆ ₹400 ಕೋಟಿ ಮೊತ್ತದ ಯೋಜನೆ ಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಸಿದ್ಧಪಡಿಸಿದ್ದ 3ಡಿ ನಕ್ಷೆ ಪ್ರಕಾರ ಭೂಸ್ವಾಧೀನ ಆಗಲಿರುವ ಜಾಗ, ಸರ್ವೆ ನಂಬರ್, ರೈತರ ವಿವರವನ್ನು ಕಂದಾಯ ಇಲಾಖೆ ಸಿದ್ಧಪಡಿಸಿತ್ತು.
ಎನ್‌ಎಚ್‌ಎಐ ಬೆಂಗಳೂರು ಪ್ರಾದೇಶಿಕ ಕಚೇರಿಗೆ 3ಡಿ ನಕ್ಷೆ ಸಹಿತ ವಿವರವನ್ನು 2025ರ ಏಪ್ರಿಲ್‌ನಲ್ಲಿ ಭೂಸಾರಿಗೆ ಇಲಾಖೆಗೆ ಸಲ್ಲಿಸಿತ್ತು. ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಿ ಇಲಾಖೆ ಮೇ 30ರಂದು ಅಧಿಸೂಚನೆ ಹೊರಡಿಸಿತ್ತು. ಇದರಿಂದಾಗಿ ರಸ್ತೆ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಏಳು ತಿಂಗಳು ಕಳೆದಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಜಮೀನುಗಳ ಮಾಲೀಕರಿಗೆ 3–ಜಿ ಅವಾರ್ಡ್ ನೋಟಿಸ್ ನೀಡಲಾಗಿದೆ. 150 ಭೂಮಾಲೀಕರಿಂದ ಭೂಮಿ ಸ್ವಾಧೀನವಾಗಬೇಕಿದ್ದು, ಈವರೆಗೆ 43 ರೈತರು ದಾಖಲೆಗಳನ್ನು ಒದಗಿಸಿ ಪರಿಹಾರ ಪಡೆದುಕೊಂಡಿದ್ದಾರೆ.
ಇನ್ನು ಕೆಲವರು ದಾಖಲೆ ಒದಗಿಸಿದ್ದು, ಅವರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕರು ದಾಖಲೆಗಳನ್ನು ಸಲ್ಲಿಸಿಲ್ಲ. ದಾಖಲೆ ಸಲ್ಲಿಸಿದರೆ ಪರಿಹಾರ ಮೊತ್ತ ಸಂದಾಯ ಮಾಡಲಾಗುವುದು ಎಂದು ಹಲವು ಬಾರಿ ಕಂದಾಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಆದರೆ, ಹೆಚ್ಚಿನ ರೈತರು ಇನ್ನೂ ದಾಖಲೆ ಒದಗಿಸಿಲ್ಲ. ಇದರಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಎರಡು ಬಾರಿ ರೈತರಿಗೂ ನೋಟಿಸ್ ನೀಡಲಾಗಿದೆ. ಇನ್ನೂ ವಿಳಂಬವಾದರೆ ಮೂರನೇ ನೋಟಿಸ್ ನೀಡಿ ದಾಖಲೆಗಳನ್ನು ಒದಗಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ದಾಖಲೆ ಒದಗಿಸದಿದ್ದರೆ ನ್ಯಾಯಾಲಯಕ್ಕೆ ಪರಿಹಾರ ಮೊತ್ತವನ್ನು ಠೇವಣಿ ಇರಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಈ ಪ್ರಕ್ರಿಯೆ ನಡೆಯಲು ಕನಿಷ್ಠ ನಾಲ್ಕೈದು ತಿಂಗಳು ಬೇಕಾಗಲಿದೆ. ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸುವಷ್ಟರಲ್ಲಿ ಮತ್ತೆ ಮಳೆಗಾಲ ಆರಂಭವಾದರೆ ಕಾಮಗಾರಿ ನಡೆಸುವುದು ಕಷ್ಟ. ಆಗ ಮತ್ತಷ್ಟು ವಿಳಂಬವಾಗಲಿದೆ.
ರೈತರಿಂದ ದಾಖಲೆಗಳನ್ನು ಪಡೆದು ಭೂಸ್ವಾಧೀನ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಬೇಕು. ಬೇಸಿಗೆಯಲ್ಲೇ ಕಾಮಗಾರಿ ಆರಂಭಿಸಬೇಕು ಎಂಬುದು ಮೂಡಿಗೆರೆ ಭಾಗದ ಜನರ ಆಗ್ರಹ.
ಬೇಲೂರು ರಸ್ತೆ: ಡಿಪಿಆರ್‌ಗೆ ಅನುಮೋದನೆ
ಚಿಕ್ಕಮಗಳೂರು–ಬೇಲೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಭೂಸಾರಿಗೆ ಇಲಾಖೆಯ ಅನುಮೋದನೆ ದೊರೆತಿದೆ. ಈ ರಸ್ತೆಗೂ ಭೂಸ್ವಾಧೀನ ಆರಂಭವಾಗಬೇಕಿದೆ. ಅದಕ್ಕೂ ಮುನ್ನ ಸರ್ವೆ ಕಾರ್ಯ ನಡೆಯಬೇಕಿದ್ದು ಇದಕ್ಕಾಗಿ ಏಜೆನ್ಸಿ ನಿಗದಿಯಾಗಬೇಕಿದೆ. ಏಜೆನ್ಸಿ ನಿಗದಿಯಾದರೆ ಸರ್ವೆ ನಡೆಸಿ 3ಡಿ ನಕ್ಷೆ ಸಿದ್ಧವಾಗಲಿದೆ. ನಕ್ಷೆಗೆ ಕೇಂದ್ರ ಭೂಸಾರಿಗೆ ಇಲಾಖೆ ಅನುಮೋದನೆ ದೊರಕಿದ ಬಳಿಕವೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ಅದಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗಲಿದೆ ಎನ್ನುತ್ತಾರೆ ಎನ್‌ಎಚ್‌ಎಐ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.