ಮೂಡಿಗೆರೆ: ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸ್ ಇಲಾಖೆ, ಚಾರ್ಮಾಡಿಘಾಟಿ-ದೇವನಗೂಲ್ ಲಿಂಕ್ ರಸ್ತೆಗೆ ಗೇಟ್ ಅಳವಡಿಕೆ ಮಾಡಿದೆ.
ಕೊಟ್ಟಿಗೆಹಾರದ ಚೆಕ್ ಪೋಸ್ಟ್ ತಪ್ಪಿಸುವ ಸಲುವಾಗಿ ಕೆಲವು ವಾಹನಗಳು ದೇವನಗೂಲ್ ಮಾರ್ಗವಾಗಿ ಬಂದು, ಚಾರ್ಮಾಡಿಘಾಟಿ ರಸ್ತೆಗೆ ಸೇರುತ್ತಿದ್ದವು. ದನಗಳ ಕಳ್ಳ ಸಾಗಾಣಿಕೆಯ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ ಎಂಬ ಆರೋಪ ಕೇಳಿ ಬಂದಿತ್ತು. ಆ ನಿಟ್ಟಿನಲ್ಲಿ ರಸ್ತೆಗೆ ಅಡ್ಡಲಾಗಿ ಗೇಟ್ ಅಳವಡಿಸಲಾಗಿದ್ದು, ಈ ಗೇಟನ್ನು ಹಗಲಿನಲ್ಲಿ ಮಾತ್ರ ತೆಗೆದು, ರಾತ್ರಿ ವೇಳೆಯಲ್ಲಿ ಮುಚ್ಚಲಾಗುತ್ತದೆ. ಇದರಿಂದ ತಾಲ್ಲೂಕಿನಿಂದ ಚಾರ್ಮಾಡಿ ಘಾಟಿ ಮೂಲಕ ಕರಾವಳಿಗೆ ಸಾಗುವ ವಾಹನಗಳೆಲ್ಲವೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕವೇ ಸಾಗಬೇಕಿದ್ದು, ಸಿಸಿಟಿವಿ ಕ್ಯಾಮೆರಾದ ಕಣ್ಗಾವಲಿಗೂ ಸಿಲುಕಲಿವೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಈ ಮಾರ್ಗ ಸಂಪೂರ್ಣ ಬಂದ್ ಆಗಲಿದೆ. ಗೇಟ್‌ನ ಕೀಲಿಯನ್ನು ಕೊಟ್ಟಿಗೆಹಾರ ಚೆಕ್‌ಪೋಸ್ಟ್ ಸಿಬ್ಬಂದಿ ವಶದಲ್ಲಿರಿಸಿಕೊಂಡು ನಿರ್ವಹಣೆ ಕೈಗೊಳ್ಳಲಾಗುತ್ತಿದೆ.
'ಚಾರ್ಮಾಡಿ ಘಾಟಿ ಪ್ರದೇಶದ ಅಡ್ಡದಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಈಗ ಇತಿಹಾಸ. ಗೇಟ್ ಅಳವಡಿಕೆ ಕೇವಲ ತಾತ್ಕಾಲಿಕ ಪರಿಹಾರವಲ್ಲ, ಜನರ ಸುರಕ್ಷತೆ ಹಾಗೂ ಶಾಂತಿಗಾಗಿ ದೀರ್ಘಕಾಲಿಕ ಹೆಜ್ಜೆ. ಗ್ರಾಮಸ್ಥರ ಸಹಕಾರವು ಈ ಕಾರ್ಯಕ್ಕೆ ಜೀವ ತುಂಬಿದೆ. ಪೊಲೀಸರೊಂದಿಗೆ–ಜನ ಕೈಜೋಡಿಸಿದರೆ ಯಾವುದೇ ಕಾನೂನು ಉಲ್ಲಂಘನೆ ಆಗುವುದಿಲ್ಲ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಹೇಳಿದರು.
ಪೊಲೀಸ್ ಇಲಾಖೆಯಿಂದ ಗೇಟ್ ಅಳವಡಿಸಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತ ಪಡಿಸಿದ್ದು, ದನ ಕಳ್ಳತನದಂತಹ ಅಕ್ರಮ ಚಟುವಟಿಕೆಗಳು ನಿಲ್ಲಬಹುದು ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.