ಚಿಕ್ಕಮಗಳೂರು: ಹೊಸ ವರ್ಷದ ಸಂಭ್ರಮದ ನಡುವೆ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರವಾಸಿಗರ ದಂಡೆ ನೆರೆದಿತ್ತು. ಎಲ್ಲೆಡೆ ಪ್ರವಾಸಿ ತಾಣಗಳು ಬುಧವಾರ ಭರ್ತಿಯಾಗಿದ್ದವು.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರ, ಕೆಮ್ಮಣ್ಣುಗುಂಡಿ, ಹಿರೆಕೊಳಲೆ ಕೆರೆ, ಎತ್ತಿನಭುಜ, ದೇವರಮನೆ, ರಾಣಿಝರಿ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಕೂಡಿಗೆ ಜಲಪಾತ, ಕ್ಯಾತನಮಕ್ಕಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಹೆಬ್ಬೆ ಜಲಪಾತ, ಅಯ್ಯನಕೆರೆ ಸೇರಿ ಎಲ್ಲಾ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಿದವು.
ವರ್ಷಾಂತ್ಯ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆ ಜಿಲ್ಲೆಯ ಎಲ್ಲಾ ಹೋಮ್ ಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು ಭರ್ತಿಯಾಗಿದ್ದವು. ರಾತ್ರಿ ಸಂಭ್ರಮ ಮುಗಿಸಿ ಬೆಳಿಗ್ಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು.
ವಾರಾಂತ್ಯ ಅಲ್ಲದಿದ್ದರೂ ಹೊಸ ವರ್ಷದ ಸಂಭ್ರಮ ಆಚರಣೆಗೆ ಜಿಲ್ಲೆಯ ಎಲ್ಲಾ ಹೋಂಸ್ಟೇಗಳು ಭರ್ತಿಯಾಗಿದ್ದವು. ಹೊರ ರಾಜ್ಯಗಳು ಮತ್ತು ನಾಡಿನ ವಿವಿಧೆಡೆಗಳಿಂದ ಜನ ದಾಂಗುಡಿ ಇಟ್ಟಿದ್ದರು. ಗಿರಿ ಶ್ರೇಣಿ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಜಲಪಾತಗಳು, ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಕಲರವ ಮೇಳೈಸಿತ್ತು.
ಅಲ್ಲಲ್ಲಿ ಕಾರುಗಳನ್ನು ನಿಲ್ಲಿಸಿ ಕಾಫಿ ಮತ್ತು ಟೀ ತೋಟಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು. ತಂಡೋಪ ತಂಡವಾಗಿ ಸುತ್ತಾಡಿದರು. ಬಹುತೇಕರು ಕಾರುಗಳಲ್ಲಿ ಬಂದಿದ್ದರಿಂದ ಚಿಕ್ಕಮಗಳೂರು ನಗರ ಸೇರಿ ಎಲ್ಲೆಡೆ ವಾಹನ ದಟ್ಟಣೆ ಉಂಟಾಗಿತ್ತು. ಹೆದ್ದಾರಿಗಳಲ್ಲೂ ಕಾರುಗಳ ಸಾಲು ದೊಡ್ಡದಾಗಿತ್ತು.
ಅದರಲ್ಲೂ ರಾಜ್ಯದ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯಲ್ಲಿ ಅಹ್ಲಾದಕರ ಅನುಭವ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಳ್ಳಯ್ಯನಗಿರಿಯ ತುದಿಯಲ್ಲಿನ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಿರಿದಾದ ರಸ್ತೆ ಆಗಿರುವುದರಿಂದ ವಾಪಸ್ ಬರಲು ಜಾಗ ಇಲ್ಲದೆ ಪ್ರವಾಸಿಗರು ಪರದಾಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಮಿತ್ರರನ್ನು ನೇಮಿಸಿದ್ದು, ಅವರು ಕೂಡ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿದರು.
ಶೃಂಗೇರಿ, ಕಳಸ, ಹೊರನಾಡು, ಅಮೃತಾಪುರ ದೇಗುಲಗಳಿಗೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಪ್ರವಾಸಿಗರು ಹೆಚ್ಚಾಗಿದ್ದರಿಂದ ಕೆಎಸ್ಆರ್‌ಟಿಸಿ ಬಸ್‌ಗಳು ಕೂಡ ಭರ್ತಿಯಾಗಿ ಕಾರ್ಯಾಚರಣೆ ಮಾಡಿದವು.
ಪ್ರವಾಸಿಗರ ಸಂಖ್ಯೆ ಹೆಚ್ಚಳ
ಮೂಡಿಗೆರೆ: ಹೊಸ ವರ್ಷ ಆಚರಣೆಗೆ ಈ ಬಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಬೆಂಗಳೂರು ಮಂಗಳೂರು ಮೈಸೂರು ಕೋಲಾರ ತುಮಕೂರು ಸೇರಿದಂತೆ ವಿವಿಧ ಭಾಗಗಳ ಪ್ರವಾಸಿಗರು ತಾಲ್ಲೂಕಿಗೆ ಬಂದಿದ್ದರು. ಹೋಮ್ ಸ್ಟೇ ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಿಸಲಾಯಿತು. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಆಚರಿಸುತ್ತಿದ್ದ ಹೊಸ ವರ್ಷಾಚರಣೆಯನ್ನು ಈ ಬಾರಿ ಕೈ ಬಿಡಲಾಗಿತ್ತು. ದೇವರಮನೆ ಎತ್ತಿನಭುಜ ಪ್ರದೇಶಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಅಲ್ಪ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಹೊಸ ವರ್ಷಾಚರಣೆ ಮುಗಿದ ಬಳಿಕ ತಮ್ಮೂರುಗಳಿಗೆ ಪ್ರವಾಸಿಗರು ತೆರಳಿದ್ದರಿಂದ ಬುಧವಾರ ಮಧ್ಯಾಹ್ನದವರೆಗೂ ಪಟ್ಟಣ ಸೇರಿದಂತೆ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಳವಾಗಿತ್ತು. ಕೆಲವು ಶಾಲೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲೂ ಹೊಸ ವರ್ಷದ ಪ್ರಯುಕ್ತ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.