ADVERTISEMENT

ದತ್ತಪೀಠದಲ್ಲಿ ಹೊಸ ಆಚರಣೆ ನಡೆಸಿಲ್ಲ: ಶಾ ಖಾದ್ರಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 23:04 IST
Last Updated 5 ಫೆಬ್ರುವರಿ 2026, 23:04 IST
ಸೈಯದ್ ಫಕ್ರುದ್ದೀನ್ ಶಾ ಖಾದ್ರಿ
ಸೈಯದ್ ಫಕ್ರುದ್ದೀನ್ ಶಾ ಖಾದ್ರಿ   

ಚಿಕ್ಕಮಗಳೂರು: ‘ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕಲಿಮಾ ತಯ್ಯಿಬಾ ಜಿಯಾರತ್(ದರ್ಶನ) ಸಂಪೂರ್ಣ ಶಾಂತಿಯುತವಾಗಿ ನಡೆಸಲಾಗಿದೆ. ಯಾವುದೇ ಹೊಸ ಧಾರ್ಮಿಕ ವಿಧಿ ಅಥವಾ ಆಚರಣೆ ನಡೆಸಿಲ್ಲ’ ಎಂದು ಬಾಬಾಬುಡನ್ ವಂಶಸ್ಥ ಸೈಯ್ಯದ್ ಫಕ್ರುದ್ದೀನ್ ಶಾ ಖಾದ್ರಿ ಸ್ಪಷ್ಟಪಡಿಸಿದ್ದಾರೆ.

ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳನ್ನಷ್ಟೇ ಜ.23ರಂದು ನಡೆಸಲಾಗಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳ್ಳಿ ಬಾಗಿಲಿನ ಬಳಿ ಇರುವ ಕಲಿಮಾ ತಯ್ಯಿಬಾ ಹೊಸದಾಗಿ ನಿರ್ಮಿಸಿರುವುದಲ್ಲ. ಅದು ಐತಿಹಾಸಿಕವಾಗಿ ಅಸ್ತಿತ್ವದಲ್ಲಿರುವ ಕುರುಹು. ಇದರ ದರ್ಶನ ಹಿಂದಿನ ದಿನಗಳಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ.

ADVERTISEMENT

‘ಕಾನೂನಿಗೆ ಪೂರ್ಣ ಗೌರವ ಕೊಟ್ಟು ಈ ಆಚರಣೆ ಕೈಗೊಳ್ಳಲಾಗಿದೆ. ಮೊದಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಪೂರ್ವಜರ ಸಮಾಧಿಗಳಿಗೆ ಹೋಗುವ ಪ್ರವೇಶದ್ವಾರ ಮುಚ್ಚಿದ್ದರಿಂದ ಫಾತಿಹಾ ಸಲ್ಲಿಸಲು ಸಾಧ್ಯವಾಗಿಲ್ಲ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೂ ನೋವುಂಟಾಗಿದೆ’ ಎಂದು ತಿಳಿಸಿದ್ದಾರೆ.