ADVERTISEMENT

‘ವೃದ್ಧಾಪ್ಯ ವೇತನ; ಖಾತೆಗೆ ಜಮೆ ವ್ಯವಸ್ಥೆ’

ಅಂಚೆಯಣ್ಣನ ಮೂಲಕ ತಲುಪಿಸುವ ವ್ಯವಸ್ಥೆ ರದ್ದು: ಆರ್‌.ಅಶೋಕ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 11:49 IST
Last Updated 24 ಜನವರಿ 2021, 11:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಮಗಳೂರು: ‘ಅಂಚೆಯಣ್ಣನ ಮೂಲಕ ವೃದ್ಧಾಪ್ಯ ವೇತನ ತಲಪಿಸುವುದನ್ನು ರದ್ದುಪಡಿಸಲಾಗಿದೆ. ಆರ್‌ಟಿಜಿಎಸ್‌ ಮೂಲಕ ಫಲಾನುಭವಿಯ ಖಾತೆಗೆ ಪಿಂಚಣಿ ಜಮೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ನಾಲ್ಕೈದು ತಿಂಗಳು ಪಿಂಚಣಿ ಹಣ ತಲುಪಿಸದಿರುವುದು, ಹಣ ಕಡಿತ ಮಾಡಿಕೊಂಡು ಫಲಾನುಭವಿಗೆ ನೀಡಿರುವ ದೂರುಗಳು ಇವೆ. ಅಂಚೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

‘ವೃದ್ಧಾಪ್ಯ ವೇತನ ಸೌಲಭ್ಯಕ್ಕಾಗಿ ಜನರು ಅರ್ಜಿ ಹಿಡಿದು ತಾಲ್ಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ, 60 ವರ್ಷ ತುಂಬಿದವರಿಗೆ (ಆಧಾರ್‌ ಕಾರ್ಡ್‌ ದಾಖಲೆ) ಸವಲತ್ತಿನ ಆದೇಶವನ್ನು ಮನೆ ಬಾಗಿಲಿಗೆ ತಲು‍ಪಿಸಲು ತೀರ್ಮಾನಿಸಲಾಗಿದೆ. ಇದೇ 27ರಂದು ವಿಧಾನಸೌಧದ ಬ್ಯಾಕ್ವೆಂಟ್‌ ಸಭಾಂಗಣದಲ್ಲಿ ಹೊಸ ಪ್ರಯೋಗಕ್ಕೆ ಚಾಲನೆ ನೀಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಕಂದಾಯ ಇಲಾಖೆಯಲ್ಲಿ ಬದಲಾದವಣೆ ನಿಟ್ಟಿನಲ್ಲಿ ಪ್ರಯೋಗಕ್ಕೆ ಕೈ ಹಾಕಿದ್ದೇವೆ. ಪ್ರತಿ ತಿಂಗಳ ಮೂರನೇ ಶನಿವಾರ ಹಳ್ಳಿಗೆ ತೆರಳಿ ಜನರ ಕುಂದುಕೊರತೆ ಆಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ‘ಹಳ್ಳಿಯಲ್ಲಿ ಜಿಲ್ಲಾಧಿಕಾರಿ’, ‘ಮನೆ ಬಾಗಿಲಿಗೆ ಜಿಲ್ಲಾಧಿಕಾರಿ’ ಉದ್ದೇಶ ಇಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದು ಹೇಳಿದರು.

‘ದಾಖಲಾತಿ, ಪಿಂಚಣಿ ಇತ್ಯಾದಿ ನಿಟ್ಟಿನಲ್ಲಿ ಜನರು ಕಚೇರಿಗಳಿಗೆ ಜನರು ಅಲೆಯುವುದನ್ನು ತಪ್ಪಿಸಲು ಅಧಿಕಾರಿಗಳೇ ಹಳ್ಳಿಗಳಿಗೆ ತೆರಳುವಂತೆ ಕ್ರಮ ವಹಿಸಿದ್ದೇವೆ. ಜಿಲ್ಲಾಧಿಕಾರಿ ಜತೆಗೆ ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ಭೂದಾಖಲೆ ಉಪನಿರ್ದೇಶಕ ಇತರರರು ಹಳ್ಳಿಗಳಿಗೆ ತೆರಳಬೇಕು. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಅಲ್ಲಿ ಕಾರ್ಯನಿರ್ವಹಿಸಬೇಕು. ಜಿಲ್ಲಾಧಿಕಾರಿ ಸಾಧ್ಯವಾದರೆ ಆ ದಿನ ಗ್ರಾಮದಲ್ಲೇ ವಾಸ್ತವ್ಯ ಹೂಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.