ಮೂಡಿಗೆರೆ (ಚಿಕ್ಕಮಗಳೂರು): ವಿವಾಹಿತ ಮಹಿಳೆಯೊಂದಿಗೆ ಪರಾರಿಯಾದ ಅನ್ಯಕೋಮಿನ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದುತ್ವಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬಣಕಲ್ ಪೊಲೀಸ್ ಠಾಣೆ ಮುಂದೆ ಗುರುವಾರ ಜಮಾಯಿಸಿ ಆಕ್ರೋಶ ವ್ಯಕ್ತ ಪಡಿಸಿದರು.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ವಿವಾಹಿತ ಮಹಿಳೆಯು, ಮೂರು ತಿಂಗಳ ಹಿಂದೆ ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನ ಕಾಫಿ ಲಿಂಕ್ಸ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆ ಅಂಗಡಿಯಲ್ಲಿ ಕೇರಳ ಮೂಲದ ಅನ್ಯಕೋಮಿನ ಯುವಕನ ಪರಿಚಯವಾಗಿದ್ದು, ಕೆಲ ದಿನಗಳ ಹಿಂದೆ ಆ ಯುವಕನ ಜತೆ ವಿವಾಹಿತ ಮಹಿಳೆ ಪರಾರಿಯಾಗಿದ್ದಳು ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಆಕೆಯ ಪತಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ ಕರೆತಂದ ವಿಷಯ ತಿಳಿಯುತ್ತಿದ್ದಂತೆ ಬಣಕಲ್ ಪೊಲೀಸ್ ಠಾಣೆ ಬಳಿ ಜಮಾಯಿಸಿದ ಹಿಂದುತ್ವಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅನ್ಯಕೋಮಿನ ಯುವಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ ಲವ್ ಜಿಹಾದ್ ನಡೆಯುತ್ತಿದ್ದು, ವಿವಾಹಿತ ಮಹಿಳೆಯನ್ನು ಕರೆದೊಯ್ದಿರುವ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
ಗ್ರಾಮದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.