
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೀರೂರು ವಲಯದ ರೈಲ್ವೆ ನೌಕರರು ಪ್ರತಿಭಟನೆ ನಡೆಸಿದರು
ಕಡೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀರೂರು ವಲಯದ ರೈಲ್ವೆ ನೌಕರರು ಸೋಮವಾರ ಕಡೂರು ರೈಲು ನಿಲ್ದಾಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬೀರೂರು ಸೆಕ್ಷನ್‌ನ ಕಡೂರು, ಬಳ್ಳೇಕೆರೆ, ಬೀರೂರು, ನಾಗವಂಗಲ, ಶಿವನಿ, ಅಜ್ಜಂಪುರ, ರಾಮಗಿರಿ ಮೊದಲಾದ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆ ಮಜ್ದೂರ್ ಯುನಿಯನ್ ವತಿಯಿಂದ ಪ್ರತಿಭಟನೆ ನಡೆಯಿತು.
ಬೇಡಿಕೆಗಳು: 8ನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಬೇಕು, ಟ್ರ್ಯಾಕ್ ನಿರ್ವಾಹಕರಿಗೆ ಈಗಿರುವ ಭತ್ಯೆಯ ಬದಲು ₹4,200 ಶ್ರೇಣಿಗೆ ಏರಿಸಬೇಕು, 7ನೇ ವೇತನ ಆಯೋಗದ ಶಿಫಾರಸಿನಂತೆ ಕನಿಷ್ಟ ವೇತನವನ್ನು ₹18 ಸಾವಿರಕ್ಕೆ ಪರಿಗಣಿಸಿ ಬೋನಸ್ ಮಂಜೂರು ಮಾಡಬೇಕು. 1 ಮತ್ತು 2ನೇ ಶ್ರೇಣಿಯ ತಂತ್ರಜ್ಞರ ಹುದ್ದೆಗಳನ್ನು ವಿಲೀನಗೊಳಿಸಬೇಕು. ಲೋಕೊಪೈಲಟ್‌ಗಳಿಗೆ ಹೆಚ್ಚುವರಿಯಾಗಿ ಮಂಜೂರಾಗಿರುವ ವೇತನಶ್ರೇಣಿಯ ಹೆಚ್ಚುವರಿಯನ್ನು ತೆರಿಗೆಯಿಂದ ಹೊರತುಪಡಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ನೇರ ನೇಮಕಾತಿಯಲ್ಲಿ ಶೇ 10ರಷ್ಟು ಹುದ್ದೆಗಳನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮೀಸಲಿಡಬೇಕು. ಹೊಸ ಮಾರ್ಗಗಳ ಸಂಚಾರಕ್ಕೆ ತಕ್ಕಂತೆ ಹೆಚ್ಚುವರಿ ಸಿಬ್ಬಂದಿ ನೇಮಕಾತಿ ಮಾಡಬೇಕು. ಕೀಮೆನ್‌ಗಳ ಗಸ್ತು ಅವಧಿ, ದೂರವನ್ನು ಕಡಿತಗೊಳಿಸಬೇಕು. ಎಲ್ಲಾ ರೈಲ್ವೆ ನೌಕರರರ ಪೋಷಕರಿಗೂ ಪ್ರಯಾಣದ ಪಾಸ್ ಪರಿಗಣಿಸಬೇಕು. ವೈದ್ಯಕೀಯ ವಿಭಾಗದಲ್ಲಿ ನೌಕರರಿಗೆ ಎಲ್ಲ ಬಗೆಯ ಚಿಕಿತ್ಸಾ ಸೌಲಭ್ಯ ಲಭಿಸುವಂತೆ ಕ್ರಮ ವಹಿಸಬೇಕು.
ಮಜ್ದೂರ್ ಯುನಿಯನ್‌ನ ಮಂಜುನಾಥ, ಹಾಲೇಶಪ್ಪ, ಆನಂದ, ಪ್ರವೀಣ್, ರವಿ, ರಮೇಶ್, ಶಂಕರ್, ಗೋಪಾಲ್, ಅಮಿತ್, ಶಶಿಕಾಂತ, ಚಂದನ್, ಕಿರಣ್, ಚೇತನ್, ಅರುಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.