
ಚಿಕ್ಕಮಗಳೂರು: ಪಶ್ಚಿಮಘಟ್ಟದ ಜೀವವೈವಿಧ್ಯದ ಅಧ್ಯಯನ ಕೈಗೊಂಡಿರುವ ಸಂಶೋಧಕರ ತಂಡವು ಮೂಡಿಗೆರೆ ತಾಲ್ಲೂಕಿನ ಮಧುಗುಂಡಿಯಲ್ಲಿ ಕುಪ್ಪಳಿಸುವ ಜೇಡಗಳ ‘ಪಿಲಿಯಾ’ ಗುಂಪಿಗೆ ಸೇರಿದ ಹೊಸ ಪ್ರಭೇದದ ಜೇಡವು ಗೋಚರಿಸಿದೆ.
ಈ ಕುರಿತ ವರದಿ ಅಂತರರಾಷ್ಟ್ರೀಯ ಜೀವವೈವಿಧ್ಯ ಅಧ್ಯಯನ ಪತ್ರಿಕೆ ಝೂಟಾಕ್ಸಾನಲ್ಲಿ(Zootaxa) ಪ್ರಕಟವಾಗಿದೆ. ಈ ತಳಿಯ ಜೇಡ ಕೊನೆಯದಾಗಿ 1902ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಈಗ, 123 ವರ್ಷಗಳ ನಂತರ ಮಧುಗುಂಡಿಯಲ್ಲಿ ಈ ಸಂಕುಲ ಕಾಣಿಸಿಕೊಂಡಿರುವುದು ದಾಖಲಾಗಿದೆ.
ಸಂಶೋಧಕರು ಮೊದಲ ಬಾರಿಗೆ ಈ ಪ್ರಬೇಧದ ಗಂಡು, ಹೆಣ್ಣು ಜೇಡಗಳನ್ನು ಗುರುತಿಸಿದ್ದಾರೆ. ಈ ಗುಂಪಿಗೆ ‘ಪಿಲಿಯಾ ಮಲೆನಾಡು’ ಎಂಬ ಹೆಸರನ್ನು ಸಂಶೋಧಕರು ಸೂಚಿಸಿದ್ದಾರೆ. ಗೋಚರಿಸಿದ ಸ್ಥಳಕ್ಕೆ ಗೌರವ ಸೂಚಿಸಲು ಈ ಹೆಸರು ನೀಡಲಾಗಿದೆ ಎಂದೂ ಹೇಳುತ್ತಾರೆ.
ಮಧುಗುಂಡಿಯ ರಿವರ್ ಮಿಸ್ಟ್ ರೆಸಾರ್ಟ್‌ನಲ್ಲಿ ನೈಸರ್ಗಿಕ ತಜ್ಞರಾಗಿರುವ, ವನ್ಯಜೀವಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಜಿತ್ ಪಡಿಯಾರ್ ಈ ಹೊಸ ಪ್ರಭೇದವನ್ನು ಮೊದಲಿಗೆ ಗಮನಿಸಿದ್ದಾರೆ. ಒಟ್ಟು 24 ಜೇಡ ಪತ್ತೆಯಾಗಿವೆ. ಅವುಗಳಲ್ಲಿ 17 ಗಂಡು, ಮೂರು ಹೆಣ್ಣು ಮತ್ತು ನಾಲ್ಕು ಎಳೆಯ ಜೇಡಗಳಿವೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಅಪರೂಪದ ‘ಕೇಸರಿ ರೀಡ್‌ಟೇಲ್’ ಚಿಟ್ಟೆಗಳನ್ನು ಅಜಿತ್ ಪಡಿಯಾರ್ ಗುರುತಿಸಿದ್ದರು.
‘ಸಾಮಾನ್ಯವಾಗಿ ಮನೆ ಮತ್ತು ತೋಟಗಳಲ್ಲಿ ಕಾಣಿಸುವ ಜೇಡಗಳಿಗಿಂತ ಈ ಪಿಲಿಯಾ ಪ್ರಭೇದದ ಜೇಡಗಳು ವಿಭಿನ್ನವಾಗಿವೆ. ಅದರಲ್ಲೂ ಹೆಣ್ಣು ಜೇಡ ಮೊದಲ ಬಾರಿಗೆ ಗುರುತಿಸಲ್ಪಟ್ಟಿದೆ. ಇದು ಈ ಪ್ರಭೇದದ ಅಧ್ಯಯನದಲ್ಲಿ ಮಹತ್ವದ ಹೆಜ್ಜೆ’ ಎಂದು ಪಡಿಯಾರ್ ಅಭಿಪ್ರಾಯಪಡುತ್ತಾರೆ.
ಗಮನಾರ್ಹವೆಂದರೆ ಈ ಜೇಡಗಳು ಅಪರೂಪದ ಸಸ್ಯ ಪ್ರಭೇದಗಳಾದ ‘ಮೆಮೆಸಿಲಾನ್ ಅಂಬಲಾಟಮ್’ ಮತ್ತು ‘ಮೆಮೆಸಿಲಾನ್ ಮಲಬಾರಿಕಮ್’ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಈ ಸಸ್ಯಗಳ ಎಲೆಗಳ ನಡುವೆ ಅಡಗಿಕೊಂಡಿರುವುದು ಕಂಡುಬಂದಿದೆ ಎಂದು ವಿವರಿಸಿದರು.
ಜೇಡಗಳ ಅಧ್ಯಯನದಲ್ಲಿ ಪರಿಣತಿಯುಳ್ಳ ಜಾನ್ ಟಿ.ಡಿ. ಕ್ಯಾಲೆಬ್, ವೈದ್ಯ ಎ.ಪಿ.ಸಿ. ಅಭಿಜಿತ್ ಮತ್ತು ಐಟಿ ವೃತ್ತಿಪರ ಜಿತೇಶ್ ಪೈ ಅವರು ಲೇಖನದ ಸಹ–ಲೇಖಕರು ಎಂದು ಪಡಿಯಾರ್ ವಿವರಿಸಿದರು.
ಚಾರ್ಮಾಡಿ ಕಣಿವೆಯ ಮಧುಗುಂಡಿಯಲ್ಲಿ ಪರಿಸರ ಅಧ್ಯಯನಕ್ಕೆ ಹೆಚ್ಚು ಅವಕಾಶವಿರುವುದು ಮತ್ತೆ ಸಾಬೀತಾಗಿದೆ. ಹಾಗಾಗಿ ಅಧ್ಯಯನ ಆಸಕ್ತಿ ಇರುವ ಅತಿಥಿಗಳಿಗೇ ಹೆಚ್ಚಿನ ಅವಕಾಶ ನೀಡುತ್ತಿದ್ದೇವೆ.– ಶ್ರೀಜಿತ್, ರಿವರ್ ಮಿಸ್ಟ್ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.