
ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುಧಿ ಭಾನುವಾರ ನಡೆದ ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರ ಶುಭಾಗಮನ ಕಾರ್ಯಕ್ರಮವನ್ನು ಅರಣ್ಯ-ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.
ಅಜ್ಜಂಪುರ: ‘ಅರಣ್ಯ ಇಲಾಖೆಯಿಂದ ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರು ತಪಗೈದ ಬೆಟ್ಟದ ಬಳಿ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ಉದ್ಯಾನ ನಿರ್ಮಿಸಲಾಗುವುದು’ ಎಂದು ಅರಣ್ಯ-ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ತಾಲ್ಲೂಕಿನ ಬುಕ್ಕಾಂಬುಧಿ ಬೆಟ್ಟದಲ್ಲಿ ತಪಗೈದ ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರ ಶುಭಾಗಮನ ಶತಮಾನೋತ್ಸವ ಹಾಗೂ ಮಹಾದ್ವಾರ-ಗುರು ನಿವಾಸ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ವೀರಶೈವ ವಸತಿ ನಿಲಯ ನಿರ್ಮಾಣಕ್ಕೆ ನಿವೇಶನ, ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ. ಬುಕ್ಕಾಂಬುಧಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡುವೆ ಎಂದರು.
ಮುಖಂಡ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಜಾತಿಗಣತಿ ವಿಚಾರದಲ್ಲಿ ಲಿಂಗಾಯತ ಸಮಾಜಕ್ಕೆ ಆದಷ್ಟು ಅನ್ಯಾಯ ಮತ್ಯಾವ ಜಾತಿಗೂ ಆಗಿಲ್ಲ. ಜಾತಿ ಕಲಂನಲ್ಲಿ ಕೆಲವರು ಲಿಂಗಾಯತ, ಕೆಲವರು ವೀರಶೈವ, ಹಲವರು ಲಿಂಗಾಯತ-ವೀರಶೈವ ಎಂತಲೂ ಬರೆಸಿದ್ದಾರೆ. ಇಷ್ಟು ಛಿದ್ರಗೊಂಡಿರುವ ಲಿಂಗಾಯತ ಸಮಾಜ ಒಗ್ಗೂಡಲು ಪಂಚ ಪೀಠಾಧ್ಯಕ್ಷರು ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.
‘ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರು ಬುಕ್ಕಾಂಬುಧಿ ಬೆಟ್ಟಕ್ಕೆ ಕಾಲಿಟ್ಟು 100 ವರ್ಷ ತುಂಬಿದ ಪ್ರಯುಕ್ತ ಬೆಟ್ಟಕ್ಕೆ ಮಹಾದ್ವಾರ ಹಾಗೂ ಶ್ರೀಮದ್ ರಂಭಾಪುರಿ ಜಗದ್ಗುರು ವೀರಗಂಗಾಧರ ನಿವಾಸ ನಿರ್ಮಾಣ ಹರ್ಷ ತಂದಿದೆ. ಜನವರಿ 7ರಂದು ಜರುಗಲಿರುವ ಪುಣ್ಯ ಸ್ಮರಣೋತ್ಸವ ವೇಳೆ ಕ್ಷೇತ್ರದ ಅಭಿವೃದ್ಧಿಗೆ ಹಲವು ಕ್ರಿಯಾ ಯೋಜನೆ ರೂಪಿಸಲಾಗುವುದು’ ಎಂದರು.
ಪ್ರಶಾಂತ ರಿಪ್ಪನ್‌ಪೇಟೆ ನುಡಿ ನಮನ ಸಲ್ಲಿಸಿದರು. ಹರಪನಹಳ್ಳಿಯ ಶಾಂತವೀರಯ್ಯ ರಚಿತ ‘ಪರಮ ತಪಸ್ವಿ ಯುಗಪುರುಷ ಲಿಂ.ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಜೀವನ ದರ್ಶನ’ ಕೃತಿಯನ್ನು ಹುಲಿಕೆರೆ ವಿರೂಪಾಕ್ಷ ಶಿವಾಚಾರ್ಯರು ಬಿಡುಗಡೆಗೊಳಿಸಿದರು.
ಎಡೆಯೂರು ರೇಣುಕ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಬಿಳಿಕಿ ರಾಚೋಟೇಶ್ವರ ಶಿವಾ ಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ, ನಂದಿಪುರ ನಂದೀಶ್ವರ ಶಿವಾಚಾರ್ಯರಿಗೆ ಗುರುರಕ್ಷೆ ನೀಡಲಾಯಿತು.
ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಮಳಲಿಮಠದ ನಾಗಭೂಷಣ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು, ತೊಗರ್ಸಿ ಮಹಾಂತ ಶಿವಾಚಾರ್ಯರು, ತೊಗರ್ಸಿ ಚನ್ನವೀರ ಶಿವಾಚಾರ್ಯರು, ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಂತ ಶಿವಾಚಾರ್ಯರು, ಟ್ರಸ್ಟ್ ಉಪಾಧ್ಯಕ್ಷ ಎಸ್.ಎಂ.ವೀರಭದ್ರಪ್ಪ, ಕಾರ್ಯದರ್ಶಿ ಎಚ್.ಪಿ.ಸುರೇಶ್, ಕೆ.ಆರ್.ಆನಂದ, ಬಿ.ಜಿ.ವಿಕಾಸ, ಚೆನ್ನಾಪುರ ಸಿದ್ಧೇಗೌಡ, ಎಚ್.ಪಿ.ಮಲ್ಲಿಕಾರ್ಜುನ, ಶಾಂಭವಿ ಮಹಿಳಾ ಮಂಡಳಿ ಸದಸ್ಯರು ಇದ್ದರು.
‘ಜೀವ ಸಂರಕ್ಷಣೆ ಪ್ರಮುಖ ಆದ್ಯತೆ’
‘ಜೀವ ಸಂರಕ್ಷಣೆ ಅರಣ್ಯ ಇಲಾಖೆಯ ಪ್ರಮುಖ ಆದ್ಯತೆ' ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ತಾಲ್ಲೂಕಿನ ಬುಕ್ಕಾಂಬುದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತರೀಕೆರೆ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ 5 ವರ್ಷದ ಮಗು ಬಲಿಯಾಗಿರುವುದು ದುಃಖ ತಂದಿದೆ. ಜೀವ ಅಮೂಲ್ಯ. ಹಣ ಕೊಟ್ಟರೂ ಬರಲಾಗದು. ಇಲಾಖೆ ವನ್ಯ ಜೀವಿಗಳಿಂದ ಮನುಷ್ಯ ರಕ್ಷಣೆಗೆ ಕಟಿಬದ್ದವಾಗಿದೆ. ಆನೆ, ಹುಲಿ, ಚಿರತೆ ಕಾರ್ಯಪಡೆ ರಚಿಸಿದೆ. ನಾಡಿನತ್ತ ಮುಖ ಮಾಡುವ ವನ್ಯಜೀವಿಗಳ ಮೇಲೆ ನಿಗಾ ವಹಿಸಿ, ಅವುಗಳನ್ನು ಸೆರೆಹಿಡಿಯಲು ನಿರಂತರ ಶ್ರಮಿಸುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾನವ ಪ್ರಾಣಿ ಸಂಘರ್ಷ ಅನಾದಿಕಾಲದಿಂದ ಇದೆ. ಪ್ರಕೃತಿ ಪರಿಸರ ಸಮತೋಲನಕ್ಕೆ ವನ್ಯಜೀವಿ ಕಾಯ್ದೆ ಜಾರಿಯಾದ ಬಳಿಕ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. 2022ರ ಗಣತಿ ಪ್ರಕಾರ ರಾಜ್ಯದಲ್ಲಿ 6,395 ಆನೆ, 563 ಹುಲಿ ಹೆಚ್ಚಿನ ಸಂಖ್ಯೆಯ ಚಿರತೆಗಳು ಇವೆ ಎಂದರು.
ಅಭಿವೃದ್ಧಿಯ ಹೆಸರಲ್ಲಿ ಅರಣ್ಯ ಭೂಮಿಯನ್ನು ಬಳಸಲಾಗುತ್ತಿದೆ. ಈ ಮೂಲಕ ಅರಣ್ಯ ಭೂಮಿ ಕ್ಷೀಣಿಸುತ್ತಿದೆ, ಆದರೆ ವನ್ಯಜೀವಿಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಹೀಗಾಗಿ ವನ್ಯಜೀವಿಗಳು ನಾಡಿನ ಕಡೆಗೆ ಬರುತ್ತಿವೆ. ಜೀವ ಹಾನಿ ಮಾಡುತ್ತಿವೆ. ಇಲಾಖೆ ಆನೆ ಕಾರಿಡಾರ್, ಕಂದಕ ನಿರ್ಮಾಣದ ಮೂಲಕ ನಾಡಿಗೆ ಬರುವ ವನ್ಯಜೀವಿಗಳನ್ನು ತಡೆಯುವ ಪ್ರಯತ್ನ ನಡೆಸುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.