
ಚಿಕ್ಕಮಗಳೂರು: ಮಾತೆ ಸಾವಿತ್ರಿಬಾಯಿ ಪುಲೆ ಅವರು ಮೌಢ್ಯ, ಕಂದಚಾರಗಳ ವಿರುದ್ದ ಹೋರಾಡಿದ ಧೀಮಂತ ಮಹಿಳೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದಿಂದ ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹೆಣ್ಣು ಮಕ್ಕಳು ಶಿಕ್ಷಣ ಕಲಿಯಬಾರದು ಎಂದು ಕೆಲವರು ಸಮಾಜದಲ್ಲಿ ನಿರ್ಬಂಧ ಹೇರಿದ್ದರು. ಇದನ್ನು ಮೀರಿ ಅಂದಿನ ದಿನಗಳಲ್ಲಿ ಜ್ಯೊತಿ ಬಾ ಪುಲೆ ಅವರ ಸಹಕಾರದೊಂದಿಗೆ ಮಹಿಳೆಯರಿಗೆ ಶಿಕ್ಷಣವನ್ನು ಸಾವಿತ್ರಿ ಬಾಯಿ ಪುಲೆ ಕಲಿಸಿದರು. 150 ವರ್ಷಗಳ ಹಿಂದೆ ಮಹಿಳೆಯರಿಗೆ ವಿದ್ಯಾದಾನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಭಾರತದ ಮೊದಲ ಶಿಕ್ಷಕಿ. ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ’ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ‘ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕು. ಆ ಮೂಲಕ ಒಳ್ಳೆಯ ಮಾರ್ಗ ತೋರಿಸಬೇಕು’ ಎಂದು ತಿಳಿಸಿದರು.
ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ರೇಖಾ ನಾಗರಾಜ್, ಬಾಗಿ ಬಾಯಿ, ಸುಮನಾ, ಲಕ್ಷ್ಮಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.