
ಚಿಕ್ಕಮಗಳೂರು: ತಾಲ್ಲೂಕಿನ ಸೀತಾಳಯ್ಯನ ಗಿರಿಯಲ್ಲಿ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ, ಮುಳ್ಳಪ್ಪಸ್ವಾಮಿ ಅಡ್ಡ ಪಲ್ಲಕ್ಕಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಐದು ದಿನಗಳ ಜಾತ್ರೆ ಆಚರಣೆಯಲ್ಲಿ ನಾಲ್ಕನೇ ದಿನ ರಥೋತ್ಸವ ನಡೆಯುವುದು ಸಂಪ್ರದಾಯ. ಅದರಂತೆ ಮಂಗಳವಾರ ಸೀತಾಳಯ್ಯನ ಗಿರಿಯಲ್ಲಿ ಸಡಗರ– ಸಂಭ್ರಮ ಮೇಳೈಸಿತ್ತು. ಸೀತಾಳ ಮಲ್ಲಿಕಾರ್ಜುನಸ್ವಾಮಿ ದೇಗುಲದಲ್ಲಿ ಬೆಳಿಗ್ಗೆಯಿಂದ ಪೂಜಾ ಕೈಂಕರ್ಯಗಳು ನಡೆದವು.
ಮುಳ್ಳಪ್ಪನ ಅಡ್ಡ ಪಲ್ಲಕ್ಕಿಯೂ ಸೀತಾಳ ಮಲ್ಲಿಕಾರ್ಜುನಸ್ವಾಮಿ ದೇಗುಲದ ಬಳಿಯ ಮಂಟಪಕ್ಕೆ ಬಂದಿತ್ತು. ಮೂರು ನಾಡಿನ ಜನ ಹೋಗಿ ಮಳ್ಳಪ್ಪನ ಅಡ್ಡಿಯನ್ನು ಕರೆತಂದರು. ಬಳಿಕ ಸೀತಾಳ ಮಲ್ಲಿಕಾರ್ಜುನಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಅಡ್ಡಪಲ್ಲಕ್ಕಿ ಉತ್ಸವ ಮುಂದೆ ಸಾಗಿದರೆ ಅದರ ಹಿಂದೆ ತೇರು ಸಾಗಿತು. ರಥ ಹೊರಟ ಕೂಡಲೇ ಸುತ್ತ ಸೇರಿದ್ದ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಭಕ್ತರು ತೇರನ್ನು ಎಳೆದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು.
ಬಳಿಕ ಭಕ್ತರು ದೇಗುಲಕ್ಕೆ ತೆರಳಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ಹಣ್ಣು–ಕಾಯಿ ಮಾಡಿಸಿದರು. ಇಷ್ಟಾರ್ಥ ಪ್ರಾಪ್ತಿಗೆ ಪ್ರಾರ್ಥಿಸಿದರು. ಗಿರಿ ಭಾಗದ ಗ್ರಾಮಗಳ ಗ್ರಾಮಸ್ಥರು, ಜಿಲ್ಲೆಯ ವಿವಿಧ ಊರುಗಳ ಜನರು ಪಾಲ್ಗೊಂಡಿದ್ದರು. ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡರು.
ನಾಲ್ಕು ದಿನ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಮಂಗಳವಾರ ರಥೋತ್ಸವ ಪೂರ್ಣಗೊಂಡಿದೆ. ಬುಧವಾರ ಓಕಳಿ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದರು.
‘ಯಾವುದೇ ಊರಿನಲ್ಲಿದ್ದರೂ ಪ್ರತಿವರ್ಷ ಜಾತ್ರೆಯಲ್ಲಿ ಭಾಗವಹಿಸುವುದನ್ನು ತಪ್ಪಿಸುವುದಿಲ್ಲ. ಮನೆ ದೇವರು ಕೂಡ ಆಗಿರುವುದರಿಂದ ಕೈಮುಗಿದು ಹೋದರೆ ಇಷ್ಟಾರ್ಥಿ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಕುಟುಂಬ ಸಮೇತ ಬಂದಿದ್ದೇವೆ’ ಎಂದು ಶಿವಮೊಗ್ಗದ ಶ್ವೇತಾ ಹೇಳಿದರು.
ಮುಳ್ಳಪ್ಪನ ಸ್ವಾಮಿಯ ಅಡ್ಡ ಪಲ್ಲಕ್ಕಿ ಉತ್ಸವ ದಟ್ಟಣೆಯಲ್ಲಿ ಸಿಲುಕಿ ಪರದಾಡಿದ ಜನ
ರಥೋತ್ಸವ ಮುಗಿದರೂ ಗಿರಿ ಮುಟ್ಟಲಿಲ್ಲ ಜಾತ್ರೆ ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಕಿರಿದಾದ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಮೂರು ಕಿ.ಮೀ ಹಿಂದಿನಿಂದಲೇ ವಾಹನಗಳು ಸಾಲಗಟ್ಟಿ ನಿಂತಿದ್ದವು. ಎರಡೂ ಕಡೆ ವಾಹನ ನಿಲುಗಡೆ ಮಾಡಿದ್ದರಿಂದ ಯಾವುದೇ ವಾಹನ ಮುಂದೆ ಸಾಗದ ಸ್ಥಿತಿ ಇತ್ತು. ಕೆಲವು ಬಸ್‌ಗನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿತ್ತು. ಬೇರೆ ವಾಹನಗಳ ಸಂಚಾರವೇ ಕಷ್ಟವಾಗಿತ್ತು. ದಟ್ಟಣೆಯಲ್ಲಿ ಸಿಲುಕಿ ಸುಸ್ತಾದವರಲ್ಲಿ ಕೆಲವರು ಕಾಡುದಾರಿ ಹಿಡಿದು ಬೆಟ್ಟ ಹತ್ತಿ ಸೀತಾಳಯ್ಯನಗಿರಿ ಏರಿದರು. ನಡೆದು ಸಾಗಲು ಸಾಧ್ಯವಾಗದವರು ರಥೋತ್ಸವ ಮುಗಿದರೂ ದೇಗಲ ತಲುಪಲು ಸಾಧ್ಯವಾಗಲಿಲ್ಲ. ಶಾಸಕ ಎಚ್.ಡಿ.ತಮ್ಮಯ್ಯ ಅವರ ವಾಹನ ಕೂಡ ದಟ್ಟಣೆಯಲ್ಲಿ ಸಿಲುಕಿತು. ಸ್ವಲ್ಪ ದೂರ ನಡೆದು ಬಂದ ಅವರನ್ನು ಪೊಲೀಸರು ಬೈಕ್ ಒಂದರಲ್ಲಿ ಕೂರಿಸಿ ದೇಗುಲ ತಲುಪಿಸಿದರು. ವಾಹನ ನಿಲುಗಡೆಯನ್ನು ರಸ್ತೆಯ ಒಂದು ಭಾಗದಲ್ಲಿ ಮಾಡಿದ ಕಾರಣ ಜನ ತೊಂದರೆ ಅನುಭವಿಸಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ರಥೋತ್ಸವ ಮುಗಿದ ಕೂಡಲೇ ವಾಹನಗಳು ಗಿರಿಯಿಂದ ಕೆಳಭಾಗಕ್ಕೆ ಹೊರಟಿದ್ದರಿಂದ ಮತ್ತೆ ಗಂಟೆ ಗಟ್ಟಲೆ ದಟ್ಟಣೆಯಲ್ಲಿ ಸಿಲುಕಿ ಜನ ಪರದಾಡಿದರು. ಈ ಸಂದರ್ಭದಲ್ಲಿ ದಟ್ಟಣೆ ಸರಿಪಡಿಸಲು ಪೊಲೀಸರು ಕಾಣಿಸಲಿಲ್ಲ. ಇದ್ದ ಗೃಹ ರಕ್ಷಕ ಸಿಬ್ಬಂದಿ ಅಸಹಾಯಕರಾಗಿದ್ದರು. ವಾಹನ ಚಾಲಕರೇ ಇಳಿದು ಒಂದೊಂದೇ ವಾಹನ ಹೋಗುವಂತೆ ಮಾರ್ಗದರ್ಶನ ನೀಡಿ ದಟ್ಟಣೆ ನಿಯಂತ್ರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.