
ಕಡೂರು: ತಾಲ್ಲೂಕಿನ ಐತಿಹಾಸಿಕ ಸಖರಾಯಪಟ್ಟಣದ ಶ್ರೀಶಕುನ ರಂಗನಾಥ ಸ್ವಾಮಿ ರಥೋತ್ಸವವು ಶನಿವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಗುರುವಾರದಿಂದ ಧ್ವಜಾರೋಹಣ, ಕಂಕಣ ಬಂಧನ, ಸ್ವಾಮಿಯವರಿಗೆ ನಿತ್ಯ ಅಭಿಷೇಕ, ಅರ್ಚನೆ, ಉತ್ಸವಗಳು ಜರುಗಿದವು. ರಥೋತ್ಸವದ ದಿನವಾದ ಶನಿವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪಂಚಸೂಕ್ತಗಳಿಂದ ಅಭಿಷೇಕ, ಅರ್ಚನೆ, ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಮೂಲಮೂರ್ತಿ ಹಾಗೂ ಇಡೀ ದೇವಾಲಯವನ್ನು ಪುಷ್ಪಗಳಿಂದ ಅಲಂಕರಿಸಿದ್ದರೆ, ಗರ್ಭಗುಡಿಯ ಮುಂಭಾಗದಲ್ಲಿ ಬೃಹತ್ ಹಣ್ಣಿನ ಹಾರವನ್ನು ತೂಗುಹಾಕಲಾಗಿತ್ತು.
ಶನಿವಾರ ಮಧ್ಯಾಹ್ನ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಬಿಡದಿಮನೆ ಆವರಣಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ರಾತ್ರಿ 8 ಗಂಟೆಗೆ ದೇವಾಲಯದಿಂದ ಶ್ರೀದೇವಿ ಮತ್ತು ಭೂದೇವಿಯನ್ನು ಅರಳಿಮರದ ಸಮೀಪ ಮೆರವಣಿಗೆಯಲ್ಲಿ ತಂದು ಕಲ್ಯಾಣೋತ್ಸವ ಮಾಡಿಸಲಾಯಿತು. ಕಲ್ಯಾಣೋತ್ಸವದ ನಂತರ ಶ್ರೀದೇವಿ ಭೂದೇವಿ ಸಹಿತ ರಂಗನಾಥಸ್ವಾಮಿ ಉತ್ಸವಮೂರ್ತಿಯನ್ನು ರಥಾರೋಹಣ ನಡೆಸಲಾಯಿತು. ಅಲಂಕಾರಗೊಂಡ ರಥದಲ್ಲಿ ರಾತ್ರಿ 10.30ರ ವೇಳೆಗೆ ರಂಗನಾಥಸ್ವಾಮಿ ಮತ್ತು ದೇವಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಬಳಿಕ ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ ಮತ್ತು ಸದಸ್ಯರು, ಶಾಸಕರಾದ ಎಚ್.ಡಿ.ತಮ್ಮಯ್ಯ, ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್.ಡಿ.ಸೋನಾಲ್‌ಗೌಡ, ತರೀಕೆರೆ ಉಪವಿಭಾಗಾಧಿಕಾರಿ ಎನ್.ವಿ.ನಟೇಶ್, ಕಡೂರು ತಹಶೀಲ್ದಾರ್ ಸಿ.ಎಸ್..ಪೂರ್ಣಿಮಾ, ದೇವಾಲಯ ಸಮಿತಿಯ ಲೋಕೇಶ್, ನಾಯಕ್ ಸಚ್ಚಿದಾನಂದ, ದೇವರಾಜು, ಡಿವೈಎಸ್ಪಿ ಪರಶುರಾಮಪ್ಪ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಕಂದಾಯಾಧಿಕಾರಿಗಳು, ಗ್ರಾಮಸ್ಥರು ರಥಕ್ಕೆ ಪೂಜೆ ಸಲ್ಲಿಸಿದರು.
ನಂತರ ಭಕ್ತರು ಗೋವಿಂದಾ...ಗೋವಿಂದ... ರಂಗನಾಥಸ್ವಾಮಿ ಪಾದಕ್ಕೆ ಗೋವಿಂದಾ...ಗೋವಿಂದ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು. ನೆರೆದಿದ್ದವರು ರಥಕ್ಕೆ ಬಾಳೆಹಣ್ಣು ಎಸೆದು ಇಷ್ಟಾರ್ಥಗಳ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವದ ಬಳಿಕ ಭಕ್ತರು ಕೆಂಚರಾಯಸ್ವಾಮಿ ಸನ್ನಿಧಿಗೆ ತೆರಳಲು ಅಣಿಯಾಗುತ್ತಿದ್ದರು. ಭಾನುವಾರ ಕೆಂಚರಾಯಸ್ವಾಮಿ ಸೇವೆ ಬಳಿಕ ರಂಗನಾಥಸ್ವಾಮಿಯವರ ಪರ್ಶೆ ಉತ್ಸವ ನಡೆಯಿತು.
ರಾಜ್ಯ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಸರತಿಯಲ್ಲಿ ನಿಂತು ಮೂಲ ಮೂರ್ತಿಯ ದರ್ಶನ ಪಡೆದರೆ, ಜಾತ್ರಾ ಪ್ರಯುಕ್ತ ಡಾ.ಬಿ.ಆರ್. ಅಂಬೇಡ್ಕರ್ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಭಕ್ತರಿಗೆ ಪಾನಕ ಮತ್ತು ಫಲಹಾರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.