
ಚಿಕ್ಕಮಗಳೂರು: ಜನರ ಆರೋಗ್ಯ, ಅಭ್ಯುದಯದ ಬಗ್ಗೆ ಚಿಂತನೆ ಮಾಡಬೇಕಾದ ಸರ್ಕಾರ, ಅದಕ್ಕೆ ವಿರುದ್ಧವಾದ ಕಾನೂನುಗಳನ್ನು ಮಾಡಿಕೊಳ್ಳುತ್ತಿದೆ ಎಂದು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ನಗರದಲ್ಲಿ ಬಸವತತ್ವ ಪೀಠದಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಬಸವತತ್ವ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಹೊಸದಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲಾಗುತ್ತಿದೆ. ಅದಕ್ಕಾಗಿ ಕೆಲ ನಿಯಮಗಳನ್ನು ಮಾಡಿಕೊಳ್ಳಲಾಗಿದೆ. ಇದು ಸಂವಿಧಾನಕ್ಕೆ ವಿರುದ್ಧವಾದ ನಡೆ’ ಎಂದರು.
‘ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ನೀಡಿ ಇನ್ನೊಂದೆಡೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮೂಲಕ ಮರಳಿ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ ಬಂದಾಗ ಎಷ್ಟು ಬಾರ್ ಆ್ಯಂಡ್ ರೆಸ್ಟೋರೆಂಟ್ ಇದ್ದವು. ಈಗ ಎಷ್ಟಿವೆ ಎಂಬುದನ್ನು ಸಮೀಕ್ಷೆ ಮಾಡಿಸಲಿ’ ಎಂದರು.
ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ವ್ಯಕ್ತಿ ಆತ್ಮ ಕಲ್ಯಾಣದ ಜತೆ ಜತೆಗೆ ಲೋಕ ಕಲ್ಯಾಣದ ಆಲೋಚನೆ ಮಾಡಬೇಕು. ಅತ್ಮ ಕಲ್ಯಾಣ ಮಾಡಿಕೊಂಡು ಲೋಕ ಕಲ್ಯಾಣ ಮರೆಯಬಾರದು. ನಾವೆಲ್ಲರೂ ಆತ್ಮಕಲ್ಯಾಣದ ಜತೆಗೆ ಲೋಕ ಕಲ್ಯಾಣದ ಮಾರ್ಗ ಹಿಡಿಯುವ ಸಂಕಲ್ಪ ಮಾಡಬೇಕು. ಹಾಗೆ ಮಾಡಿದರೆ ದೇಶ ಮತ್ತು ಸಮಾಜದ ಉದ್ಧಾರ ಸಾಧ್ಯ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ವೀರಶೈವ ಮಠಮಾನ್ಯಗಳು ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ನಾಡು ಕಟ್ಟುವ ಕೆಲಸ ಮಾಡುತ್ತಿವೆ. ರಾಜ್ಯಕ್ಕೆ ಮಠಗಳು ನೀಡಿದ ಕೊಡುಗೆ ಅಪಾರ. ಇದನ್ನು ಮುಂದಿನ ಪೀಳಿಗೆಗೆ ತಿಳಿಸಲು ಮಠ– ಮಾನ್ಯಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು. ಪುಷ್ಪಗಿರಿ ಸಂಸ್ಥಾನದ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ವಚನಗಳಲ್ಲಿ ರಾಷ್ಟ್ರೀಯ ಮೌಲ್ಯಗಳು ಕುರಿತು ಉಪನ್ಯಾಸಕ ಕುಮಾರಚಲ್ಯ ಉಪನ್ಯಾಸ ನೀಡಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಕೆಪೆಕ್ ಅಧ್ಯಕ್ಷ ಬಿ.ಎಚ್. ಹರೀಶ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಮಹಡಿಮನೆ ಸತೀಶ್, ಎಚ್.ಸಿ. ಕಲ್ಮರುಡಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.