ADVERTISEMENT

ಶೃಂಗೇರಿ ಶಾರದಾ ಪೀಠ: ಸ್ತೋತ್ರ ತ್ರಿವೇಣಿ ಕಾರ್ಯಕ್ರಮ ಇಂದು 

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 23:30 IST
Last Updated 10 ಜನವರಿ 2025, 23:30 IST
ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ
ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ   

ಶೃಂಗೇರಿ (ಚಿಕ್ಕಮಗಳೂರು): ಶಾರದಾ ಪೀಠದ 36ನೇ ಗುರು ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆಯನ್ನು ‘ಸುವರ್ಣ ಭಾರತೀ’ ಹೆಸರಿನಲ್ಲಿ ಇದೇ 11ರಂದು ಆಚರಿಸಲಾಗುತ್ತಿದ್ದು, ಅದಕ್ಕಾಗಿ ಸ್ತೋತ್ರ ತ್ರಿವೇಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಾಮೂಹಿಕ ಸ್ತೋತ್ರ ಸಮರ್ಪಣೆ ನಂತರ ಗುರುಗಳ ಆಶೀರ್ವಚನ ನಡೆಯಲಿದೆ. ಮಠದ ಕಿರಿಯ ಗುರು ವಿಧುಶೇಖರ ಭಾರತೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಶಾರದಾ ಮಠದ ಗುರು ನಿವಾಸದ ಪಕ್ಕದಲ್ಲಿ ನರಸಿಂಹವನದ ಭಾರತೀತೀರ್ಥ ನಗರದ 20 ಎಕರೆ ಜಾಗದಲ್ಲಿ ಭವ್ಯ ವೇದಿಕೆ ಸಜ್ಜಾಗಿದೆ. 50 ಸಾವಿರ ಭಕ್ತರು ಸೇರಿ ಆದಿ ಶಂಕರಚಾರ್ಯ ವಿರಚಿತ ಮೂರು ಸ್ತೋತ್ರವನ್ನು ಪಠಿಸಿ ಸಮರ್ಪಿಸಲಿದ್ದಾರೆ.

ADVERTISEMENT

ವಿವಿಧ ಕಡೆಗಳಿಂದ ಭಕ್ತರನ್ನು ಕರೆತರಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ 700 ಬಸ್‍ಗಳನ್ನು ಕಾಯ್ದಿರಿಸಲಾಗಿದೆ. 5 ಸಾವಿರಕ್ಕೂ ಅಧಿಕ ಖಾಸಗಿ ವಾಹನಗಳು ಬರುವ ನಿರೀಕ್ಷೆ ಇದೆ. ವಾಹನ ನಿಲುಗಡೆ ಸ್ಥಳ, ಉಪಾಹಾರ ಮತ್ತು ಭೋಜನ ವ್ಯವಸ್ಥೆಗಾಗಿ 25 ವಿಭಾಗದಲ್ಲಿ 3 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸಿದ್ಧತೆ ನಡೆಸಿದ್ದಾರೆ.

ರಾಜ್ಯದ ವಿವಿಧ ಭಾಗದ 9 ಮಠದ ಪೀಠಾಧಿಪತಿಗಳು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಅಧಿಕಾರಿಗಳು  ಭಾಗವಹಿಸುವರು.

ಕಲ್ಯಾಣ ವೃಷ್ಠಿ ಸ್ತವ ಮಹಾಭಿಯಾನ:

 ‘ಶಂಕರಾಚಾರ್ಯರ ಸ್ತೋತ್ರವನ್ನು ಜನ ಸಾಮಾನ್ಯರು ಪಠಿಸುವಂತೆ ಮಾಡುವ ಬೃಹತ್ ಆಂದೋಲನವೇ ‘ಕಲ್ಯಾಣ ವೃಷ್ಠಿ ಸ್ತವ ಮಹಾಭಿಯಾನ. ಈ ಬೃಹತ್ ಆಂದೋಲನವೇ ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣಾ ಕಾರ್ಯಕ್ರಮವಾಗಿದೆ’ ಎಂದು ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ. ಮುರುಳಿ  ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.