ಚಿಕ್ಕಮಗಳೂರು: ಅನಿಮಲ್ ಪ್ರೊಟೆಕ್ಷನ್ ಅಂಡ್ ವೆಲ್‌ಫೇರ್ ಸೊಸೈಟಿ ಸಂಘಟನೆಯು ನಗರದ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಿ, ಮೂರು ದಿನ ಆರೈಕೆ ಮಾಡಿ ಮತ್ತೆ ಅದೇ ಸ್ಥಳಕ್ಕೆ ಬಿಡುತ್ತಿದೆ. ಈವರೆಗೆ 108 ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲಾಗಿದೆ.
ನಗರಸಭೆಯು ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಹೊಣೆಯನ್ನು ಮಹಾರಾಷ್ಟ್ರದ ಅನಿಮಲ್ ಪ್ರೊಟೆಕ್ಷನ್ ಅಂಡ್ ವೆಲ್‌ಫೇರ್ ಸೊಸೈಟಿ ಸಂಘಟನೆಗೆ ವಹಿಸಿದೆ. ಸಂಘಟನೆಯ ಪಶುವೈದ್ಯ ಡಾ.ವಿಜಯ್ ಕಾಂಬ್ಳೆ ಸಹಿತ ಏಳು ಮಂದಿ ತಂಡ ಕಾರ್ಯ ನಿರ್ವಹಿಸುತ್ತಿದೆ. ನಾಯಿ ಹಿಡಿದು ಶಸ್ತ್ರಚಿಕಿತ್ಸೆ ನಡೆಸಿ 72 ಗಂಟೆ ಆರೈಕೆ ಮಾಡಿ ಮತ್ತೆ ಅದೇ ಸ್ಥಳಕ್ಕೆ ಬಿಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಕಾರ್ಯಕ್ಕೆ ಒಂದು ನಾಯಿಗೆ ₹1,400 ದರ ನಿಗದಿಪಡಿಸಲಾಗಿದೆ.
ನಗರದ ಹೊರವಲಯದ ಇಂದಾವರದ ಕಸ ವಿಲೇವಾರಿ ಘಟಕದ ಆವರಣದಲ್ಲಿ ಇದೇ 6ರಿಂದ ಚಿಕಿತ್ಸೆ ಕಾರ್ಯ ಆರಂಭವಾಗಿದೆ. ತಂಡದ ನಾಲ್ವರು ನಗರದ ಬಡಾವಣೆಗಳಲ್ಲಿ ಸಂಚರಿಸಿ ಬಲೆಯಲ್ಲಿ ನಾಯಿಗಳನ್ನು ಹಿಡಿದು ವಾಹನದಲ್ಲಿ ಒಯ್ಯುತ್ತಾರೆ. ನಾಯಿ ಹಿಡಿದ ಜಾಗದ ವಿಳಾಸ ದಾಖಲಿಸಿಕೊಳ್ಳುತ್ತಾರೆ. ನಿತ್ಯ 20ರಿಂದ 25 ನಾಯಿಗಳನ್ನು ಹಿಡಿದೊಯ್ದು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.
ಡಾ.ವಿಜಯ ಕಾಂಬ್ಳೆ ಶಸ್ತ್ರ ಚಿಕಿತ್ಸೆ ನಡೆಸುತ್ತಾರೆ. ಶಸ್ತ್ರಚಿಕಿತ್ಸೆ ನಂತರ ನಾಯಿಗಳನ್ನು ಪ್ರತ್ಯೇಕ ಕೋಣೆಯಲ್ಲಿ ಬಿಡುತ್ತಾರೆ. ಅಲ್ಲಿ ಆಹಾರ, ನೀರು, ಆರೈಕೆ ವ್ಯವಸ್ಥೆ ಮಾಡಿದ್ದಾರೆ. ತಂಡದ ಮೂವರು ಈ ಕಾರ್ಯನಿರ್ವಹಿಸುತ್ತಾರೆ.
‘ಸಾಮಾನ್ಯವಾಗಿ ನಾಯಿಗಳು ವರ್ಷದಲ್ಲಿ ಎರಡು ಬಾರಿ ಬೆದೆಗೆ ಬರುತ್ತವೆ. ಒಂದು ಹೆಣ್ಣುನಾಯಿ ಒಮ್ಮೆಗೆ ನಾಲ್ಕರಿಂದ ಹತ್ತು ಮರಿಗಳಿಗೆ ಜನ್ಮ ನೀಡುತ್ತದೆ. ಈ ಚಿಕಿತ್ಸೆಯಿಂದ ಸಂತಾನೋತ್ಪತ್ತಿ ನಿಯಂತ್ರಣವಾಗುತ್ತದೆ’ ಎಂದು ಡಾ.ವಿಜಯ್ ಕಾಂಬ್ಳೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಘಟನೆಯಿಂದ ಬೆಂಗಳೂರು, ಉಡುಪಿ, ಗೋಕರ್ಣ ಇತರೆಡೆಗಳಲ್ಲಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ. ಚಿಕ್ಕಮಗಳೂರಿನಲ್ಲಿ ಒಂದು ವರ್ಷಕ್ಕೆ ಗುತ್ತಿಗೆ ಪಡೆದಿದ್ದೇವೆ. ಎರಡು ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಗುರಿ ಇಟ್ಟುಕೊಂಡಿದ್ದೇವೆ. ಶಸ್ತ್ರಚಿಕಿತ್ಸೆ ನಡೆಸಿದ ನಾಯಿ ಕಿವಿಗೆ ಕ್ಲಿಪ್ಪಿಂಗ್ ಮಾಡುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.