ಕಡೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಾಂಶುಪಾಲರು ಮತ್ತು ನಿಲಯದ ಮೇಲ್ವಿಚಾರಕರನ್ನು ಕಾಯಂ ಆಗಿ ನಿಯೋಜಿಸುವಂತೆ ಆಗ್ರಹಿಸಿ ಕಾಮನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಆಲ್ದೂರಿನಿಂದ ನಿಯೋಜನೆ ಮೇಲೆ ಬಂದಿರುವ ನಿಲಯದ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಶುಚಿ, ರುಚಿಯಾದ ಊಟ ನೀಡುವ ಜತೆಗೆ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಯಾವುದೋ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ. ಆದರೆ, ವಿಷಯ ಶಿಕ್ಷಕರಿಗೆ ನಿಲಯ ಮೇಲ್ವಿಚಾರಣೆ ಉಸ್ತುವಾರಿ ನೀಡಲು ಮುಂದಾಗಿದ್ದಾರೆ. ಮಕ್ಕಳಿಗೆ ನೀಡುವ ಊಟ ರುಚಿಯಾಗಿರುವುದಿಲ್ಲ. ಮಕ್ಕಳು ಕಡಿಮೆ ಊಟ ಮಾಡಲಿ ಎನ್ನುವ ಕಾರಣಕ್ಕೆ ರುಚಿಯಾಗಿ ಅಡುಗೆ ಮಾಡುತ್ತಿಲ್ಲ ಎಂದು ದೂರಿದರು.
ಕೆಲವು ದಿನಗಳ ಹಿಂದೆ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರು ಭೇಟಿ ನೀಡಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ನಿಲಯದ ಸಿಬ್ಬಂದಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರಾದರೂ ಶಾಲೆಗೆ ಭೇಟಿ ನೀಡುತ್ತಾರೆ ಎಂದಾಗ ಮಾತ್ರ ಶುಚಿ, ರುಚಿಯಾಗಿ ಅಡುಗೆ ಮಾಡಲಾಗುತ್ತದೆ ಎಂದು ಆರೋಪಿಸಿದರು.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ವಸತಿ ಶಾಲೆಗೆ ಬಂದು ಭರವಸೆ ನೀಡಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ಊಟ ಮಾಡದೆ ಪ್ರತಿಭಟನೆ ನಡೆಸಿದರು.
ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಂಯೋಜಕಿ ಶೈಲಾ ಮಾತನಾಡಿ, ಇಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು. ಶಾಲೆಗೆ ವಿದ್ಯಾರ್ಥಿಗಳ ಬೇಡಿಕೆಯಂತೆ ಕಾಯಂ ಮೇಲ್ವಿಚಾರಕರು ಮತ್ತು ಪ್ರಾಂಶುಪಾಲರನ್ನು ನೇಮಕಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮಕ್ಕಳ ಪರವಾಗಿ ಮನವಿಮಾಡಲಾಗುವುದು ಎಂದರು.
ವಸತಿ ನಿಲಯದ ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಾತ್ಕಾಲಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯದ ಗೀತಾ ಎಂಬುವವರನ್ನು ಕಾಮನಕರೆ ವಸತಿ ಶಾಲೆಗೆ ಮೇಲ್ವಿಚಾರಕಿಯಾಗಿ ಹಾಗೂ ಚೌಳಹಿರಿಯೂರಿನ ವಸತಿ ಶಾಲೆಯ ಪ್ರಾಂಶುಪಾಲ ಧನರಾಜ್ ಅವರನ್ನು ಹೆಚ್ಚುವರಿಯಾಗಿ ಕಾಮನಕೆರೆ ವಸತಿ ಶಾಲೆಗೆ ನಿಯೋಜಿಸಲಾಗಿದೆ.
ಈ ಹಿಂದೆ ಮೇಲ್ವಿಚಾರಕ ಹುದ್ದೆಯಲ್ಲಿದ್ದ ಯಲ್ಲಪ್ಪ ಎಂಬುವವರನ್ನು ಕೊಪ್ಪ ತಾಲ್ಲೂಕಿನ ಹರಂದೂರಿನ ವಸತಿ ಶಾಲೆಗೆ ವರ್ಗಾಯಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜ್, ಸಂತೋಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.