ADVERTISEMENT

ತರೀಕೆರೆ ಟಿಎಪಿಸಿಎಂಎಸ್‌: ಎಂ. ನರೇಂದ್ರ ಅಧ್ಯಕ್ಷ, ಶರತ್ ಉ‍ಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:05 IST
Last Updated 6 ಜನವರಿ 2026, 6:05 IST
ತರೀಕೆರೆ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್‌ನ ಎಂ.ನರೇಂದ್ರ, ಉಪಾಧ್ಯಕ್ಷ ಬಿಜೆಪಿಯ ಶರತ್ ಅವರನ್ನು ಬಿಜೆಪಿ ಮತ್ತು ಜೆಡಿಎಸ್‍ ಪಕ್ಷದ ಮುಖಂಡರು ಅಭಿನಂದಿಸಿದರು 
ತರೀಕೆರೆ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್‌ನ ಎಂ.ನರೇಂದ್ರ, ಉಪಾಧ್ಯಕ್ಷ ಬಿಜೆಪಿಯ ಶರತ್ ಅವರನ್ನು ಬಿಜೆಪಿ ಮತ್ತು ಜೆಡಿಎಸ್‍ ಪಕ್ಷದ ಮುಖಂಡರು ಅಭಿನಂದಿಸಿದರು    

ತರೀಕೆರೆ:ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ (ಟಿಎಪಿಸಿಎಂಎಸ್) ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‌ನ ಎಂ.ನರೇಂದ್ರ, ಉಪಾಧ್ಯಕ್ಷರಾಗಿ ಬಿಜೆಪಿಯ ಶರತ್ ಆಯ್ಕೆಯಾಗಿದ್ದಾರೆ. 

ಒಟ್ಟು 14 ನಿರ್ದೇಶಕರ ಪೈಕಿ ಎ ವರ್ಗದಡಿ ಬಿಜೆಪಿ ಬೆಂಬಲಿತ 6, ಜೆಡಿಎಸ್‌ನ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 7 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‍ನ–ಕಾಂಗ್ರೆಸ್‍ ಮೈತ್ರಿಯೊಂದಿಗೆ ಕಾಂಗ್ರೆಸ್ 4 ಮತ್ತು ಜೆಡಿಎಸ್ 3 ಸ್ಥಾನಗಳಲ್ಲಿ ಜಯಗಳಿಸಿದ್ದರು.

ನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮತ್ತು ಬಿಜೆಪಿ ಜಿಲಾಧ್ಯಕ್ಷ ದೇವರಾಜ್‍ ಶೆಟ್ಟಿ, ಮಾಜಿ ಶಾಸಕ ಡಿ.ಎಸ್.ಸುರೇಶ್‍ ಅವರ ನೇತೃತ್ವದಲ್ಲಿ ನಡೆದ ಸುದೀರ್ಘ ಮಾತುಕತೆಯ ನಂತರ ಬಿಜೆಪಿ ಮತ್ತು ಜೆಡಿಎಸ್ ಟಿಎಪಿಸಿಎಂಎಸ್ ನ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ADVERTISEMENT

ನಾಮಪತ್ರ ಸಲ್ಲಿಸುವ ಮೊದಲು ಪಟ್ಟಣದ ಮಾಜಿ ಶಾಸಕ ಡಿ.ಎಸ್.ಸುರೇಶ್‍ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬೋಜೇಗೌಡ, ನಮ್ಮ ಪಕ್ಷ ಈಗಾಗಲೇ ಹಳ್ಳಿಯಿಂದ ದಿಲ್ಲಿಯವರೆಗೂ ಎನ್‌ಡಿಎ ಕೂಟದಲ್ಲಿದ್ದು, ಸಹಕಾರಿ ಕ್ಷೇತ್ರವೂ ಸೇರಿದಂತೆ ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಹೊಂದಾಣಿಕೆಯಲ್ಲಿ ನಡೆಸಲಿದ್ದೇವೆ. ಇದೇ ತಿಂಗಳ 17ರಂದು ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್‌ಗೆ 2 ಸ್ಥಾನ ಬಿಟ್ಟುಕೊಡಲು ಜಿಲ್ಲಾ ಮಟ್ಟದ ಕೋರ್‌ ಕಮಿಟಿ ಸಭೆಯಲ್ಲಿ ತೀರ್ಮಾನವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗರಗದಹಳ್ಳಿ ಪ್ರತಾಪ, ಕೆ.ಆರ್.ಆನಂದಪ್ಪ, ಗುಳ್ಳದಮನೆ ವಸಂತಕುಮಾರ್, ರೇಣುಕಪ್ಪ, ಶ್ರೇಯಸ್, ಉಮಾಶಂಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.