
ತರೀಕೆರೆ: ಗ್ರಾಮದಲ್ಲಿರುವ ಪ್ರತಿಯೊಬ್ಬರನ್ನು ಒಗ್ಗೂಡಿಸುವ ಕೇಂದ್ರಗಳೇ ದೇವಸ್ಥಾನಗಳು ಎಂದು ಶಿವಮೊಗ್ಗದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯ ನಂದಸ್ವಾಮೀಜಿ ಹೇಳಿದರು.
ಕೆಂಚಿಕೊಪ್ಪ ಗ್ರಾಮದ ಶ್ರೀರಾಮ ಹಾಗೂ ನೆಲಗದ್ದೆ ಶ್ರೀ ರಂಗನಾಥಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ನೆರವೇರಿದ ಬಳಿಕ ನಡೆದ ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಂಗನಾಥಸ್ವಾಮಿ ಬಹಳ ಹಿಂದಿನಿಂದಲೂ ಇಲ್ಲಿ ನೆಲೆಸಿದ್ದಾನೆ. ದೇವಸ್ಥಾನ ನಿರ್ಮಾಣವು ಕೇವಲ 1 ವರ್ಷ 8 ತಿಂಗಳಲ್ಲಿಯೇ ₹80 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಪೂರ್ಣಗೊಂಡಿರುವುದು ಭಗವಂತನ ಸಾನ್ನಿಧ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಕನಕದಾಸ, ಪುರಂದರದಾಸ, ಶಂಕರಾಚಾರ್ಯ ಮೊದಲಾದ ದಾರ್ಶನಿಕರು ನಮ್ಮೊಳಗೆ ಉಳಿಸಿ ಹೋಗಿರುವ ಆದರ್ಶಗಳನ್ನು ಮಕ್ಕಳಿಗೆ ತಿಳಿಸಬೇಕು. ಅಹಂಕಾರ ತ್ಯಜಿಸಿದಾಗ ಭಕ್ತಿ ಪರಿಪೂರ್ಣವಾಗುತ್ತದೆ. ಪುಣ್ಯಕ್ಷೇತ್ರಗಳ ದರ್ಶನದಿಂದ ಪಾಪಕರ್ಮ ನಿವಾರಣೆಯಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಕೆ.ಎಸ್. ರಮೇಶ್, ದೇವಸ್ಥಾನ ನಿರ್ಮಾಣ ಶೂನ್ಯ ಬಂಡವಾಳದಿಂದ ಆರಂಭವಾಗಿದ್ದರಿಂದ ಆರಂಭದಲ್ಲಿ ಆತಂಕವಿತ್ತು. ಬಳಿಕ ಭಗವಂತನ ಕೃಪೆ ಹಾಗೂ ಸಮಾಜದ ಎಲ್ಲ ವರ್ಗಗಳ ಸಹಕಾರದಿಂದ ಕಾರ್ಯ ಯಶಸ್ವಿಯಾಗಿದೆ ಎಂದರು.
ಮಡಬೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ. ದಿವಾಕರ್ ಹಾಗೂ ಸಮುದಾಯ ಭವನದ ಅಧ್ಯಕ್ಷ ಕೆ.ಎನ್. ಮಾಧವ ಮಾತನಾಡಿದರು.
ಸಮಿತಿಯ ಉಪಾಧ್ಯಕ್ಷ ಎಲ್.ಸಿ. ನಂದಕುಮಾರ್ ಸ್ವಾಗತಿಸಿದರು. ರಾಜೇಶ್ವರಿ ನಂದಕುಮಾರ್ ನಿರೂಪಿಸಿದರು. ಸಭೆಗೆ ಮುನ್ನ ಬೆಳಿಗ್ಗೆ ಭದ್ರಾನದಿಯ ಹಳೆ ಲಕ್ಕವಳ್ಳಿ ಸಮೀಪದಿಂದ ಗಂಗೆ ತರಲಾಯಿತು. ಬಳಿಕ ಮೀನ ಲಗ್ನದಲ್ಲಿ ಶ್ರೀರಾಮ ಹಾಗೂ ನೆಲಗದ್ದೆ ಶ್ರೀ ರಂಗನಾಥಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪನೆ, ಅಷ್ಟಬಂಧ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯಿತು. ಭದ್ರಗಿರಿಯ ಶ್ರೀಮುರುಗೇಶಸ್ವಾಮಿ ಹಾಗೂ ಶ್ರೀನಾದಮಯ ನಂದಸ್ವಾಮೀಜಿ ಅವರ ಅಮೃತಹಸ್ತದಿಂದ ನೂತನ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.