ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್‌ ಅವ್ಯವಸ್ಥೆ: ವಾಹನಗಳ ಸಂಚಾರಕ್ಕೆ ಸಮಸ್ಯೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್

ದಾದಾಪೀರ್
Published 24 ಅಕ್ಟೋಬರ್ 2020, 4:27 IST
Last Updated 24 ಅಕ್ಟೋಬರ್ 2020, 4:27 IST
ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ವಾಹನಗಳ ಬೇಕಾ ಬಿಟ್ಟಿ ನಿಲ್ಲುವ ಮೂಲಕ ಸುರಕ್ಷಿತ ಸಂಚಾರಕ್ಕೆ ಸಮಸ್ಯೆ ಒಡ್ಡಿರುವುದು.
ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ವಾಹನಗಳ ಬೇಕಾ ಬಿಟ್ಟಿ ನಿಲ್ಲುವ ಮೂಲಕ ಸುರಕ್ಷಿತ ಸಂಚಾರಕ್ಕೆ ಸಮಸ್ಯೆ ಒಡ್ಡಿರುವುದು.   

ತರೀಕೆರೆ: ಕೋವಿಡ್ -19 ತಲ್ಲಣಗಳ ಮಧ್ಯೆಯೇ ಜನರ ಬದುಕು ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಕಾರಣ ತರೀಕೆರೆ ಪಟ್ಟಣದಲ್ಲಿ ಜನದಟ್ಟಣೆ ಹಾಗೂ ವಾಹನ ಸಂಚಾರ ಹೆಚ್ಚುತ್ತಿದೆ. ಸಂಚಾರ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲದ ಸ್ಥಿತಿ ಎದುರಾಗಿದೆ.

‘ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ವಾಹನಗಳ ಬೇಕಾಬಿಟ್ಟಿ ತಿರುಗಾಟ, ನಿಲುಗಡೆ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಜನರು ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಸಂಚರಿಸುವಂತಾಗಿದೆ’ ಎಂದು ನಾಗರೀಕರು ದೂರಿದ್ದಾರೆ.

ಸದಾ ಗಿಜಿಗುಡುವ ಈ ರಸ್ತೆಯನ್ನು ಸುತ್ತಮುತ್ತಲಿನ ಗ್ರಾಮಗಳ ಹಾಗೂ ಪಟ್ಟಣದ ನಾಗರಿಕರು ಅವಲಂಬಿಸಿದ್ದಾರೆ. ವಾಣಿಜ್ಯ ಕಟ್ಟಡಗಳು ಹಾಗೂ ಸರ್ಕಾರಿ ಕಚೇರಿಗಳು, ಹತ್ತಾರು ಬ್ಯಾಂಕ್ ಕಚೇರಿಗಳು, ಪ್ರಾರ್ಥನ ಮಂದಿರಗಳು, ಬಸ್ ಹಾಗೂ ರೈಲು ನಿಲ್ದಾಣ, ಆಸ್ಪತ್ರೆಗಳು ರಸ್ತೆಯನ್ನು ಆವರಿಸಿಕೊಂಡಿವೆ. ಹೀಗಾಗಿ, ಇದು ಜನಸಂದಣಿ ಹೆಚ್ಚಾಗಿರುವ ರಸ್ತೆಯಾಗಿದೆ. ರಸ್ತೆ ಅಭಿವೃದ್ಧಿಗೆ ಇನ್ನೂ ಕಾಲ ಕೂಡಿ ಬಂದಿಲ್ಲವಾದ್ದರಿಂದ ಇಲ್ಲಿ ಜನರು ಇನ್ನಷ್ಟು ದಿನ ತೊಂದರೆ ಅನುಭವಿಸಬೇಕಿದೆ.

ADVERTISEMENT

ರಸ್ತೆಯ ಎರಡು ಬದಿಗಳಲ್ಲಿ ಕಾರು, ಆಮ್ನಿ ಹಾಗೂ ಬೈಕ್ ಗಳು ಸದಾ ಕಾಲ ನಿಂತಿರುತ್ತವೆ. ವಾಹನಗಳ ಚಾಲಕರು ಎಲ್ಲಿ ಬೇಕೆಂದರಲ್ಲಿ ಯೂ ಟರ್ನ್ ತೆಗೆದುಕೊಳ್ಳುತ್ತಾರೆ. ಸಂಚಾರ ನಿಯಮಗಳು ಪಾಲನೆಯಾಗದ ಕಾರಣ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ವೃದ್ಧರು ಹಾಗೂ ಮಕ್ಕಳೊಂದಿಗೆ ಪೋಷಕರು ರಸ್ತೆಯಲ್ಲಿ ನಡೆದಾಡುವಂತಿಲ್ಲ.

ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೋಗಿಗಳನ್ನು ಹೊತ್ತ ಆಂಬುಲೆನ್ಸ್‌ಗಳು ಕ್ಷಣ ಕ್ಷಣಕ್ಕೂ ಈ ರಸ್ತೆಯಿಂದ ಮಣಿಪಾಲ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಂಚರಿಸುತ್ತವೆ. ಅವು ಈ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.