
ಚಿಕ್ಕಮಗಳೂರು: ಮುಂಗಾರು ಪೂರ್ವದಿಂದ ಆರಂಭವಾಗಿರುವ ಮಳೆ ನಿರಂತರವಾಗಿ ಬಿಟ್ಟು ಬಿಡದೆ ಸುರಿಯುತ್ತಿದೆ. ಅಕ್ಟೋಬರ್ ಮಳೆಯಂತೂ ರೈತರ ಪಾಲಿಗೆ ಆಘಾತವನ್ನೇ ತಂದಿದೆ.
ಸೆಪ್ಟೆಂಬರ್ ವೇಳೆಗೆ ಕಡಿಮೆಯಾಗುತ್ತಿದ್ದ ಮಳೆ ಈ ಬಾರಿ ಅಕ್ಟೋಬರ್ ಅಂತ್ಯದ ತನಕ ಸುರಿದಿದೆ. ಗುಡುಗು ಸಹಿತ ಸುರಿದ ಅಬ್ಬರದ ಮಳೆ ಹಲವು ಬೆಳೆಗಳಿಗೆ ಕಂಟವಾಗಿ ಕಾಡಿದೆ.
ಮಲೆನಾಡಿನಲ್ಲಿ ಕಾಫಿ, ಮೆಣಸು, ಭತ್ತದ ಬೆಳೆದ ಬೆಳೆಗಳಿಗೆ ಸಮಸ್ಯೆಯಾಗಿದ್ದರೆ, ಬಯಲು ಸೀಮೆಯಲ್ಲಿ ಜೋಳ, ರಾಗಿ ಸೇರಿ ತರಕಾರಿ ಬೆಳೆಗಳನ್ನು ಹಾಳು ಮಾಡಿದೆ.
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಲಕ್ಯಾ, ಕಳಸಾಪುರ, ಮಾಗಡಿ ಸುತ್ತಮುತ್ತ ತರಕಾರಿ ಬೆಳೆಗಳನ್ನು ಎತೇಚ್ಚವಾಗಿ ಬೆಳೆಯಲಾಗುತ್ತದೆ. ಮುಂಗಾರಿನಲ್ಲಿ ಮಳೆ ಕೊರತೆಯಿಂದ ತೊಂದರೆ ಅನುಭವಿಸಿದ ಈ ಭಾಗದ ರೈತರು, ಈಗ ಆಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಕಂಗಾಲಾಗಿದ್ದಾರೆ.
ಜೋಳ, ರಾಗಿ, ಸೌತೆಕಾಯಿ, ಬೀನ್ಸ್, ಟೊಮೊಟೊ ಬೆಳೆಗಳು ಹೊಲದಲ್ಲಿ ನಿಂತಿರುವ ನೀರಿನಲ್ಲಿ ಮುಳುಗಿದವು. ಈರುಳ್ಳಿ ಬೆಳೆದಿದ್ದ ರೈತರಂತೂ ಇನ್ನಿಲ್ಲದ ತೊಂದರೆ ಅನುಭವಿಸಿದರು. ನೆಲದಿಂದ ಮೇಲೆ ತೆಗೆದು ರಾಶಿ ಹಾಕಿದ್ದ ಈರುಳ್ಳಿ, ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಹಲವು ರೈತರು ನಷ್ಟಕ್ಕೆ ಸಿಲುಕಿದ್ದಾರೆ.
ಮಳೆಯಿಂದ ತರಕಾರಿ ಬೆಳೆಗಳು ಸಂಪೂರ್ಣ ಹಾನಿಗೆ ಈಡಾಗಿರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಜಾಸ್ತಿಯಾಗಿದೆ. ಬೆಳೆಯನ್ನೇ ನಂಬಿದ್ದ ರೈತರು, ನಷ್ಟದ ಸುಳಿಯಿಂದ ಮೇಲೆ ಬರುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ.
ಅಡಿಕೆ ಕಾಳುಮೆಣಸಿಗೆ ಕುತ್ತು
ಕಳಸ: ಕಳೆದ ಮೇ 15ರಿಂದ ಸುರಿಯುತ್ತಿರುವ ಮಳೆ ಈಗಾಗಲೇ 150ಕ್ಕೂ ಹೆಚ್ಚು ದಿನ ಮಳೆ ಸುರಿಸಿದೆ. ಮಳೆಯಿಂದ ಏರಿದ ತೇವಾಂಶ ಕಾಫಿ ಅಡಿಕೆ ಕಾಳುಮೆಣಸಿನ ವಾಣಿಜ್ಯ ಕೃಷಿಗೆ ಅಡ್ಡಗಾಲು ಹಾಕುತ್ತಿದೆ. ಈ ವರ್ಷ ಹಿಂದಿನ ಎಲ್ಲ ವರ್ಷಗಳಿಗಿಂತ ಕಾಫಿ ಅಡಿಕೆ ಕಾಳುಮೆಣಸಿಗೆ ಹೆಚ್ಚಿನ ರೋಗ ಸಮಸ್ಯೆಗಳು ಕಂಡು ಬರುತ್ತಿದೆ. ಮಳೆಗಾಲದ ನಡುವಿನಲ್ಲೇ ಕಾಫಿ ಅಡಿಕೆಗೆ ಕೊಳೆರೋಗದಿಂದ ಫಸಲಿನ ದೊಡ್ಡ ಪ್ರಮಾಣ ನೆಲಕ್ಕೆ ಉದುರಿತ್ತು. ಇದೀಗ ಅಕ್ಟೋಬರ್ ತಿಂಗಳಲ್ಲೂ ಮಳೆ ಮುಂದುವರಿದು ಕಾಫಿ ಅಡಿಕೆ ಕೊಯ್ಲಿಗೆ ಅಡ್ಡಿ ಆಗಿದೆ. ‘ಅಡಿಕೆ ಮರದಲ್ಲಿ ಒಂದೊಂದು ಗೊನೆ ಗೋಟು ಆಗಿ ಉದುರಿದೆ. ಅಡಿಕೆ ಮರಗಳ ಎಲೆಗಳು ಹಳದಿಬಣ್ಣಕ್ಕೆ ತಿರುಗಿದ್ದು ಎಲೆಚುಕ್ಕಿ ರೋಗ ಹರಡುತ್ತಿದೆ. ಮುಂದಿನ 5-6 ವರ್ಷಗಳಲ್ಲಿ ಅಡಿಕೆ ಕೃಷಿ ಅತ್ಯಂತ ಕಷ್ಟಕರ ಸ್ಥಿತಿಗೆ ತಲುಪಬಹುದು’ ಎಂದು ಹೆಬ್ಬಳೂರು ಧರಣೇಂದ್ರ ಹೇಳುತ್ತಾರೆ. ಹಸಿ ಅಡಿಕೆಗೆ ಕೆಜಿಗೆ ₹75-₹80 ಧಾರಣೆ ಇದೆ. ಆದರೆ ಮಳೆಯಿಂದಾಗಿ ಅಡಿಕೆ ಕೊಯ್ಲು ಮಾಡಲಾಗದೆ ಬೆಳೆಗಾರರಿಗೆ ಬೇಸರ ಆಗಿದೆ. ಅರೇಬಿಕಾ ಕಾಫಿ ಕೂಡ ಅಲ್ಲಲ್ಲಿ ಹಣ್ಣಾಗಿದ್ದು ನೆಲಕ್ಕೆ ಉದುರುತ್ತಿದೆ. ಕಾಫಿ ಮತ್ತು ಅಡಿಕೆ ತೋಟದಲ್ಲಿರುವ ಕಾಳುಮೆಣಸಿನ ಬಳ್ಳಿಗಳಿಗೆ ಸತತ ಮಳೆಯು ವಿವಿಧ ಸಮಸ್ಯೆ ತಂದೊಡ್ಡಿದೆ. ಕೊಳೆ ರೋಗದಿಂದ ಕೆಲ ಬಳ್ಳಿಗಳು ಈಗಾಲೇ ಸಾವಿಗೀಡಾಗಿವೆ. ಮಿಲಿಬಗ್ ಕೀಟದ ಹಾವಳಿಯಿಂದ ಉಳಿದ ಬಳ್ಳಿಯಲ್ಲೂ ಫಸಲು ಉದುರುತ್ತಿದೆ. ಫ್ಯುಸೇರಿಯಂ ಎಂಬ ಶಿಲೀಂಧ್ರ ಕೂಡ ಮೆಣಸಿನ ಬಳ್ಳಿಗಳ ಕಾಂಡಕ್ಕೆ ಸೋಂಕು ತಗುಲಿಸಿ ಬಳ್ಳಿಗಳ ಆಯಸ್ಸು ಮುಗಿಸುತ್ತಿವೆ.ಅತಿಯಾದ ಮಳೆಯಿಂದಾಗಿ ತೋಟಗಳಲ್ಲಿ ಮಣ್ಣು ಆಮ್ಲೀಯವಾಗಿದ್ದು ಮಣ್ಣಿನ ಸಂರಚನೆ ಬದಲಾಗಿದೆ. ಮಣ್ಣಿನ ಗುಣಮಟ್ಟ ಹೆಚ್ಚಿಸಲು ಕೂಡ ಬೆಳೆಗಾರರು ಹಣ ವೆಚ್ಚಮಾಡಬೇಕಾದ ಸ್ಥಿತಿ ಎದುರಾಗಿದೆ.
ಬಿರಿಯುತ್ತಿರುವ ಅರೇಬಿಕಾ
ಕಾಫಿ: ಬೆಳೆಗಾರರು ಹೈರಾಣ ಮೂಡಿಗೆರೆ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಈಗಾಗಲೇ ಅರೇಬಿಕಾ ಕಾಫಿ ಸಂಪೂರ್ಣ ಹಣ್ಣಾಗಿದ್ದು ಮಳೆಯಿಂದ ಕೊಯ್ಲು ಮಾಡಲು ಅಡ್ಡಿಯಾಗಿದೆ. ಗಿಡದಲ್ಲಿಯೇ ಕಾಫಿ ಹಣ್ಣು ಒಡೆಯುತ್ತಿರುವುದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ರೋಬಾಸ್ಟಾ ಕಾಫಿಗೆ ತುರ್ತಾಗಿ ಗೊಬ್ಬರ ನೀಡಬೇಕಿದ್ದು ಮಳೆಯಿಂದ ಗೊಬ್ಬರ ಹಾಕಲು ಕಳೆ ಹೊಡೆಯಲು ಅಡ್ಡಿಯಾಗಿದೆ. ಹದಿನೈದು– ಇಪ್ಪತ್ತು ದಿನಗಳಲ್ಲಿ ರೋಬಾಸ್ಟಾ ಹಣ್ಣಾಗುವುದರಿಂದ ಮಳೆಯು ರೋಬಾಸ್ಟಾ ಕಾಫಿಗೂ ಹೊಡೆತ ನೀಡಿದೆ. ನಿರಂತರ ಮಳೆಯಿಂದ ಕಾಳು ಮೆಣಸಿನ ತೆನೆಗಳು ನೆಲಕಚ್ಚುತ್ತಿರುವುದಲ್ಲದೇ ಕಾಳು ಮೆಣಸಿಗೆ ಶೀತ ಹೆಚ್ಚಳವಾಗಿ ಇಡೀ ಗಿಡವೇ ರೋಗಕ್ಕೆ ತುತ್ತಾಗುತ್ತಿದೆ. ಗಿಡಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಪರದಾಡುತ್ತಿದ್ದಾರೆ. ಅಡಿಕೆ ಬೆಳೆಗೂ ಮಳೆ ಹಾನಿ ಉಂಟು ಮಾಡಿದ್ದು ಬಲಿಯುತ್ತಿರುವ ಅಡಿಕೆ ಶೀತದಿಂದ ಉದುರುತ್ತಿದೆ. ಔಷಧಿ ಸಿಂಪಡಣೆಗೂ ಮಳೆ ಬಿಡುವು ನೀಡದ ಕಾರಣ ರೈತರು ನಷ್ಟ ಎದುರಿಸುವಂತಾಗಿದೆ. ತಾಲ್ಲೂಕಿನ ವಿಶೇಷ ಬೆಳೆಯಾದ ಏಲಕ್ಕಿಗೂ ಈ ಬಾರಿ ಮಳೆ ಸಂಚಾಕಾರ ತಂದಿದೆ. ಏಲಕ್ಕಿ ಹೂವಾಗುವ ಸಂದರ್ಭದಲ್ಲಿ ಮಳೆಯಾಗುತ್ತಿರುವುದರಿಂದ ಕಾಯಿ ಕಟ್ಟದೇ ಜೊಳ್ಳಾಗುತ್ತಿದ್ದು ಇಳುವರಿಯ ಮೇಲೆ ಪರಿಣಾಮ ಬೀರಿದೆ. ‘ಈ ಬಾರಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ. ಮೇ ತಿಂಗಳಿನಿಂದ ಪ್ರಾರಂಭವಾದ ಮಳೆ ಅಕ್ಟೋಬರ್ ತನಕವೂ ಬಿಡದೆ ಸುರಿದಿದೆ. ಹಿಂಗಾರಿನ ಅಡ್ಡ ಮಳೆಗಳು ಕೂಡ ಮುಂಗಾರಿನಂತೆ ಆರ್ಭಟಿಸಿದ್ದರಿಂದ ತೋಟಗಳಲ್ಲಿ ಶೀತ ಹೆಚ್ಚಳಕ್ಕೆ ಕಾರಣವಾಗಿದೆ. ಮಳೆಯಿಂದ ಈ ಬಾರಿ ಬೆಳೆ ಮಾತ್ರ ಹಾನಿಯಾಗದೇ ಗಿಡಗಳಿಗೇ ಆಪತ್ತು ಬಂದಿರುವುದರಿಂದ ಬೆಳೆಗಾರರು ಹಿಂದೆಂದಿಗಿಂತಲೂ ಹೆಚ್ಚು ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಕಾಫಿ ಬೆಳೆಗಾರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣ ಬಾಳೂರು.
ಐದು ಪಟ್ಟು ಹೆಚ್ಚು ಮಳೆ
ಕಡೂರು: ತಾಲೂಕಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಗಿಂತ 5 ಪಟ್ಟು ಹೆಚ್ಚು ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಹಳ್ಳಕೊಳ್ಳ ಕೆರೆಗಳು ತುಂಬಿ ಹರಿದು ಸಾಕಷ್ಟು ಕಡೆ ಜಮೀನುಗಳಿಗೆ ನುಗ್ಗಿದೆ. ತೋಟಗಳನ್ನು ಜಲಾವೃತಗೊಳಿಸಿದೆ. ನೀರು ತುಂಬಿ ಜಮೀನುಗಳಿಗೆ ನುಗ್ಗಿದ ಜಿಗಣೆಹಳ್ಳಿ ಹಡಗಲು ಭಾಗಗಳಲ್ಲಿ ಬಿತ್ತನೆಯಾಗಿರುವ ರಾಗಿ ಜೋಳ ಕಡಲೆ ಕಾಳು ಮೆಣಸಿನ ಗಿಡಗಳು ಕೊಚ್ಚಿ ಹೋಗಿದ್ದರೆ ಬೀರೂರು ಭಾಗದಲ್ಲಿ ಜಮೀನಿನ ಮೇಲಿದ್ದ ಈರುಳ್ಳಿ ಬೆಳೆ ನೀರು ನಿಂತು ಫಸಲು ಹಾಳಾಗಿದೆ. ಚೀಲದಲ್ಲಿ ತುಂಬಿ ವರ್ತಕರಿಗಾಗಿ ಕಾಯುತ್ತಿದ್ದ ರೈತರಿಗೂ ಫಸಲು ಮಾರಾಟ ಮಾಡಲಾಗದ ಸ್ಥಿತಿ ಎದುರಾಗಿ ತುಂಬಿಸಿಟ್ಟಿದ್ದ ಫಸಲನ್ನು ಸ್ಥಳಾಂತರಿಸಬೇಕಾದ ಸನ್ನಿವೇಶ ಎದುರಾಗಿದೆ. ಅಡಿಕೆ ಮತ್ತು ತೆಂಗಿನ ತೋಟಗಳು ಕೆಲವೆಡೆ ಜಲಾವೃತವಾಗಿದ್ದರೂ ಕಳೆದ ತಿಂಗಳಿನಲ್ಲಿ ತೆಂಗು ಕಟಾವಾಗಿದ್ದು ಅಡಿಕೆ ಕೊಯ್ಲು ಕೂಡ ಶೇ 50ರಷ್ಟು ಮುಕ್ತಾಯಗೊಂಡಿದೆ. ಆದ್ದರಿಂದ ತೋಟಗಳಿಗೆ ನೀರು ನುಗ್ಗಿದರೂ ಅಂತಹ ಬೆಳೆಹಾನಿ ಸಂಭವಿಸಿಲ್ಲ.
ವಾಣಿಜ್ಯ ಬೆಳೆಗಳಿಗೆ ಮಾರಕವಾದ ನಿರಂತರ ಮಳೆ
ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಲವು ವಾಣಿಜ್ಯ ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದೆ ಆರಂಭವಾಗಿದ್ದ ಅಡಿಕೆ ಕೊಯ್ಲು ಕಾರ್ಯ ಮಳೆಯಿಂದ ನಿಂತಿದೆ. ಕೊಯ್ಲು ಮಾಡಿದವರಿಗೆ ಸಂಸ್ಕರಣೆ ಮಾಡಲು ಮಳೆ ಅಡ್ಡಿಯಾಗಿದೆ. ನಿರಂತರ ಮಳೆಯಿಂದ ಅಡಿಕೆಗೆ ಕೊಳೆ ರೋಗ ತಗುಲಿದ್ದು ಕಾಯಿ ಗಾತ್ರ ಚಿಕ್ಕದಾಗಿದೆ. ಕೆಲವು ರೈತರು ಕೊಳೆ ರೋಗ ನಿಯಂತ್ರಣಕ್ಕೆ ನಾಲ್ಕು ಬಾರಿ ಬ್ರೋಡೊ ಸಿಂಪರಣೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇನ್ನೊಂದು ಬಾರಿ ಬ್ರೋಡೊ ಸಿಂಪರಣೆ ಮಾಡಲು ಸೂಕ್ತ ವಾತಾವರಣವಿಲ್ಲ. ಮಳೆ ಅತಿಯಾಗಿರುವುದರಿಂದ ಬೂದಿ ಕೊಳೆ ರೋಗ ಬರುವ ಆತಂಕ ರೈತರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಅನುಭವಿ ಇರುವ ರೈತರು ಬೂದಿ ಕೊಳೆ ರೋಗ ಗುರುತಿಸುತ್ತಾರೆ. ಆದರೆ ಕೆಲವರು ಇದನ್ನು ಗುರುತಿಸಲು ವಿಫಲವಾದರೆ ಅಡಿಕೆ ಕೊಯ್ಲಿಗೆ ಹೋದಾಗ ರೋಗ ಕಾಣಿಸುತ್ತದೆ. ಬೂದಿಕೊಳೆ ರೋಗ ಬಂದರೆ ಇಡಿ ಬೆಳೆ ನೆಲಕಚ್ಚುತ್ತದೆ. ಪ್ರಸ್ತುತ ಅಡಿಕೆಗೆ ಉತ್ತಮ ಧಾರಣೆಯಿದ್ದು ಫಸಲು ಕಡಿಮೆ ಇದೆ ಎನ್ನುತ್ತಾರೆ ರೈತರು. ಶುಂಠಿಗೆ ಉತ್ತಮ ಧಾರಣೆಯಿದ್ದರೂ ನಿರಂತರ ಮಳೆಯಿಂದ ಬೆಳೆ ನಾಶವಾಗಿದೆ. ಇದೇ ರೀತಿ ಮಳೆ ಬಂದರೆ ಅಳಿದುಳಿದ ಬೆಳೆಯು ಕೈತಪ್ಪುವ ಆತಂಕ ರೈತರಲ್ಲಿದೆ. ಭತ್ತದ ಬೆಳೆಯು ಹೂವಿನ ಸಂದರ್ಭದಲ್ಲಿದ್ದು ಮಳೆ ಸುರಿದರೆ ಉದುರಿ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೊಳೆ ರೋಗದಿಂದ ಫಸಲು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 5 ಸಾವಿರ ಹೆಕ್ಟೇರ್ ಅಡಿಕೆ ಹಾಗೂ 2 ಸಾವಿರ ಹೆಕ್ಟೇರ್ ಕಾಳು ಮೆಣಸು ಬೆಳೆ ಸೇರಿದೆ. ಕೊಳೆ ರೋಗಕ್ಕೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಳೆಯಿಂದ ಅಡಿಕೆ ಮರ ಬಿದ್ದರೆ ಒಂದು ಮರಕ್ಕೆ ಕನಿಷ್ಠ ₹2500ಸಾವಿರ ಪರಿಹಾರ ಕೊಡಲು ಅವಕಾಶವಿದೆ. ಒಂದು ಎಕರೆಗೆ ₹9 ಸಾವಿರ ಪರಿಹಾರ ಕೊಡಲಾಗುವುದು ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ತಿಳಿಸಿದರು. ತಾಲ್ಲೂಕಿನ ವ್ಯಾಪ್ತಿಯಲ್ಲಿ 2080 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಮಳೆಯಿಂದ ಭತ್ತದ ಬೆಳೆ ಹಾನಿಯಾಗಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಭತ್ತದ ಕಟಾವು ಆರಂಭವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ತಿಳಿಸಿದರು. ಪ್ರಕೃತಿದತ್ತವಾಗಿ ಅಧಿಕವಾಗಿ ಸುರಿದ ಮಳೆಯಿಂದ ಎಲ್ಲಾ ರೀತಿಯ ಅಡ್ಡ ಪರಿಣಾಮ ಬೆಳೆಗಳ ಮೇಲೆ ಉಂಟಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಮುಳುಗಿದ ರಸ್ತೆ ತೋಟಗಳು
ತರೀಕೆರೆ: ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಅಡಿಕೆ ತೆಂಗಿನ ತೋಟಗಳು ಜಲಾವೃತವಾಗಿದ್ದರೆ ಮುಸುಕಿನ ಜೋಳ ರಾಗಿ ಸೇರಿದಂತೆ ಮಳೆಯಾಶ್ರಿತ ಬೆಳೆಗಳು ನೀರು ಪಾಲಾಗಿವೆ. ಅಡಿಕೆ ತೋಟಗಳಿಗೆ ಕೊಳೆ ರೋಗ ಆವರಿಸಿಕೊಂಡು ಗೊನೆಗಳಲಿದ್ದ ಅಡಿಕೆ ನೆಲಕ್ಕೆ ಉದುರಿತ್ತಿರುವುದರಿಂದ ಈ ಭಾಗದ ತೋಟದ ಬೆಳೆಗಾರರುಗಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಈ ಮಳೆಯಿಂದಾಗಿ ಸುಮಾರು ಮನೆಗಳು ಕೊಟ್ಟಿಗೆ ಮನೆಗಳು ಬಿದ್ದು ಜಾವುವಾರುಗಳು ಮೃತಪಟ್ಟಿವೆ. ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಕೆಸರು ನೀರು ಹರಿಯುತ್ತಿದೆ. ಕೆಮ್ಮಣ್ಣುಗುಂಡಿ ಕಲ್ಲತ್ತಿಗಿರಿ ಹೆಬ್ಬೆ ಜಲಪಾತಕ್ಕೆ ತೆರಳುವ ಪ್ರವಾಸಿಗರು ಮತ್ತು ತಣಿಗೆಬೈಲು ನಂದಿಬಟ್ಟಲು ದೂಪದಖಾನ್ ಗ್ರಾಮಗಳು ಸೇರಿ ಕಾಫಿ ತೋಟಗಳಿಗೆ ಸಂಚರಿಸುವ ಪ್ರಯಾಣಿಕರುಗಳಿಗೂ ತೊಂದರೆಯಾಗಿದೆ. ಅಡಿಕೆ ಸೇರಿದಂತೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರು ಮನವಿ.
ಕಾಫಿ ಕಾಳು ಮೆಣಸು ಭತ್ತಕ್ಕೆ ಹಾನಿ
ಕೊಪ್ಪ: ತಾಲ್ಲೂಕಿನಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ಅಡಿಕೆ ಕಾಫಿ ಭತ್ತ ಕಾಳು ಮೆಣಸು ಬೆಳೆಗೆ ಹಾನಿಯಾಗಿದೆ. ಸಾಮಾನ್ಯವಾಗಿ ಆಗಸ್ಟ್ ಅಂತ್ಯ ಇಲ್ಲವೇ ಸೆಪ್ಟೆಂಬರ್ ವೇಳೆಗೆ ಮಳೆ ಸಂಪೂರ್ಣ ಇಳಿಮುಖವಾಗುತ್ತಿತ್ತು. ಈ ಬಾರಿ ಅಕ್ಟೋಬರ್ ಅಂತ್ಯ ಸಮೀಪಿಸಿದರೂ ಮಳೆ ನಿಲ್ಲದ ಕಾರಣ ಬೆಳೆಗಳಿಗೆ ಹಾನಿಯಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ಬಂದಿದ್ದರಿಂದ ಕೃಷಿ ಚಟುವಟಿಕೆ ಬೇಗ ಶುರುವಾಯಿತು. ಭತ್ತ ಬಿತ್ತನೆ ಮಾಡಿ ಬೇಗ ಸಸಿ ನಾಟಿ ಮಾಡಿದ್ದ ಕಡೆಗಳಲ್ಲಿ ಈಗಾಗಲೇ ತೆನೆ ಹೂ ಬಂದಿದೆ. ಭತ್ತ ಬಲಿಯುವ ಸಮಯದಲ್ಲಿ ಮಳೆ ಸುರಿಯುತ್ತಿದ್ದು ಜೊಳ್ಳಾಗುವ ಸಾಧ್ಯತೆ ಹೆಚ್ಚು. ಈ ಭಾಗದಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿ ಗುರುತಿಸಿಕೊಂಡಿದೆ. ಎರಡು ಮೂರು ಬಾರಿ ಔಷಧ ಸಿಂಪರಣೆ ಮಾಡಿದ್ದರೂ ಕೊಳೆ ರೋಗದಿಂದ ಕಾಯಿ ಉದುರುವುದು ನಿಂತಿಲ್ಲ. ಅಡಿಕೆ ನೆಚ್ಚಿಕೊಂಡಿರುವ ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ. ಕೆಲವು ಕಡೆ ಕಾಫಿ ಹಣ್ಣಾಗಿದೆ. ಕೊಯ್ಲು ಮಾಡಲು ಬಿಸಿಲಿನ ಸಮಸ್ಯೆ ಎದುರಾಗಿದೆ. ಏಲಕ್ಕಿ ಕಾಳು ಮೆಣಸು ಕೂಡ ಮಳೆ ಕಾರಣಕ್ಕೆ ಉದುರಿದೆ.
ಕೈಗೆ ಬಂದ ಬೆಳೆಯೂ ನೀರುಪಾಲು
ಶೃಂಗೇರಿ: ತಾಲ್ಲೂಕಿನಲ್ಲಿ ಅಕ್ಟೋಬರ್ ಮಳೆ ಜಾಸ್ತಿಯಾದ ಕಾರಣ ರೈತರು ಬೆಳೆದ ಬೆಳೆಗಳ ಕೈಗೆ ಸಿಗುವುದು ಕಷ್ಟ ಎಂದು ರೈತರು ಆತಂಕದಲ್ಲಿದ್ದಾರೆ. ಮೇ ತಿಂಗಳಿಂದ ತಾಲ್ಲೂಕಿನಲ್ಲಿ ಅತಿಯಾದ ಮಳೆ ಬಂದು ಅತಿವೃಷ್ಟಿ ಸಂಭವಿಸಿ ಕಾಫಿ ಕಾಳು ಮೆಣಸು ಅಡಿಕೆ ನೆಲ ಕಚ್ಚಿದೆ. ಸ್ವಲ್ಪವಾದರೂ ಬೆಳೆ ಉಳಿಸಿಕೊಂಡು ಅಡಿಕೆ ಕೊಯ್ಲು ಮಾಡುವ ಸಂದರ್ಭದಲ್ಲಿ ಮಳೆ ಜಾಸ್ತಿಯಾಗಿ ಬೆಳೆ ಕೈಗೆ ಸಿಗದಂತಾಗಿದೆ. ಅಕ್ಟೋಬರ್‌ನಲ್ಲಿ ಅಡಿಕೆ ಕೊಯ್ಲು ಮಾಡುವ ಸಂದರ್ಭ. ಹೀಗೆ ಮಳೆ ಬರುವ ಕಾರಣ ಮರ ಹತ್ತಿ ಅಡಿಕೆ ಕೊನೆ ತೆಗೆಯಲು ಆಗುತ್ತಿಲ್ಲ. ಒಂದು ವೇಳೆ ಕೊನೆ ತೆಗೆದರೂ ಒಣಗಿಸಲು ಸಾದ್ಯವಿಲ್ಲ. ಮಳೆಯಿಂದ ಗದ್ದೆಯಲ್ಲಿ ನೀರು ಆವೃತಗೊಂಡು ಭತ್ತದ ತೆನೆ ಕೊಳೆಯಲಾರಂಭಿಸಿದೆ. ಮಳೆಗಾಲ ಮುಗಿದರೂ ಅಡಿಕೆ ಕೊಯ್ಲು ಮಾಡುವ ಸಂದರ್ಭದಲ್ಲಿ ಈ ರೀತಿ ಮಳೆ ಬಂದರೆ ಕೊನೆ ತೆಗೆದು ಒಣಗಿಸಲು ಸಾದ್ಯವಿಲ್ಲ. ಶೃಂಗೇರಿ ತಾಲ್ಲೂಕನ್ನು ಅತಿವೃಷ್ಟಿ ಪ್ರದೇಶದ ಪಟ್ಟಿಗೆ ಸೇರಿಸಿ ವಿಶೇಷ ಪರಿಹಾರ ನೀಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೊಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಪೂರಕ ಮಾಹಿತಿ: ಎನ್.ಸೋಮಶೇಖರ್, ಕೆ.ವಿ.ನಾಗರಾಜ್, ರವಿ ಕೆಳಂಗಡಿ, ಕೆ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಕೆ.ಎನ್.ರಾಘವೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.