ಡಾ.ಅಶ್ವತ್ಥಬಾಬು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯ ಜತೆಗೆ ಶೀತಗಾಳಿ ಹೆಚ್ಚಾಗಿದ್ದು, ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಾಗಿದೆ.
ಸರ್ಕಾರಿ ಅಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರ ಕೊಠಡಿಗಳ ಮುಂದೆ ಪೋಷಕರು ಮಕ್ಕಳೊಂದಿಗೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಮಳೆಯ ಜತೆಗೆ ಶೀತಗಾಳಿ ಹೆಚ್ಚಾಗಿದ್ದರಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ. ಇದು ಜನರಲ್ಲಿ ಶೀತ, ನೆಗಡಿ, ಕೆಮ್ಮು, ಗಂಟಲು ನೋವು ಸೇರಿ ಸಾಂಕ್ರಾಮಿಕ ಜ್ವರ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ. ಅದರಲ್ಲೂ ಮಕ್ಕಳಲ್ಲಿ ಜ್ವರ ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
ಮಕ್ಕಳು ಶಾಲೆಗೆ ಹೋಗುತ್ತಿರುವುದರಿಂದ ಒಬ್ಬರಿಂದ ಒಬ್ಬರಿಗೆ ಜ್ವರ ಹರಡುವುದು ಹೆಚ್ಚಾಗುತ್ತಿದೆ. ಕೆಲವರು ವಾರ ಗಟ್ಟಲೆ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಇರಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಮಲೆನಾಡು ಪ್ರದೇಶದಲ್ಲಿ ನಿರಂತರ ಶೀತಗಾಳಿ ಜತೆಗೆ ತುಂತುರು ಮಳೆ ಮುಂದುವರಿದಿದೆ. ಬಯಲು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಆಗಾಗ ಬಿಸಿಲು ಮುಖ ತೋರಿಸಿ ಮಾಯವಾಗುತ್ತಿದೆ. ವಾತಾವರಣದಲ್ಲಿ ಆಗುತ್ತಿರುವ ಈ ಬದಲಾವಣೆಯ ಕಾರಣ ವೈರಲ್ ಫ್ಲೂ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯರು ಹೇಳುತ್ತಾರೆ.
ಜ್ವರದಿಂದ ಬಳಲಿ ಆಸ್ಪತ್ರೆಗೆ ಬರುವ ಮಕ್ಕಳ ಸಂಖ್ಯೆ ಕಳೆದ ಒಂದು ವಾರದಲ್ಲಿ ಶೇ 20 ರಿಂದ 30ರಷ್ಟು ಹೆಚ್ಚಾಗಿದೆ. ಬಿಸಿಲು ಬಾರದ ಕಾರಣ ವಾತಾವರಣದ ಸಮತೋಲನ ತಪ್ಪಿದೆ. ಅನಾರೋಗ್ಯ ತರುವ ವೈರಾಣುಗಳು ಉಲ್ಬಣಗೊಂಡಿವೆ. ಸೇವಿಸುವ ಗಾಳಿ, ನೀರು ಹಾಗೂ ಆಹಾರದಲ್ಲಿ ವೈರಸ್ ಸೇರಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಉಂಟು ಮಾಡುತ್ತಿದೆ ಎಂದು ವಿವರಿಸುತ್ತಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆ–ಕ್ಲಿನಿಕ್‌ಗಳಲ್ಲಿ ಹೊರರೋಗಿಗಳ ವಿಭಾಗದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಆಸ್ಪತ್ರೆಗಳ ಎದುರು ಪೋಷಕರು ಮಕ್ಕಳನ್ನು ಕರೆದುಕೊಂಡು ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವರಲ್ಲಿ ವಾರವೀಡಿ ಜ್ವರ ತಗ್ಗದೇ, ಆಸ್ಪತ್ರೆಗೆ ದಾಖಲಿಸುವ ಸ್ಥಿತಿ ಕೂಡ ಬಂದಿದೆ.
‘ಮಕ್ಕಳಿಗೆ ಬಿಸಿನೀರು ಕುಡಿಸುವುದು, ತಂಪಾದ ಆಹಾರ–ಪಾನೀಯಗಳನ್ನು ತಪ್ಪಿಸುವುದು, ಸ್ವಚ್ಛತೆ ಕಾಪಾಡುವುದು ಅಗತ್ಯ. ಜ್ವರ, ಕೆಮ್ಮು, ಗಂಟಲು ನೋವು ದೀರ್ಘಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಅವರು ಸಲಹೆ ನೀಡಿದರು.
ಸ್ವಲ್ಪ ಹೆಚ್ಚಾಗಿದೆ: ಭಯ ಬೇಡ
ಜಿಲ್ಲೆಯಲ್ಲಿ ಶೀತಗಾಳಿಯಿಂದ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಸ್ವಲ್ಪ ಹೆಚ್ಚಾಗಿದೆ. ಗಾಬರಿಯಾಗುವ ಸ್ಥಿತಿ ಇಲ್ಲ. ಜ್ವರ ಹೆಚ್ಚಾಗಿರುವುದು ಮತ್ತು ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಚಿಕಿತ್ಸೆ ಬಗ್ಗೆ ಕಣ್ಗಾವಲು ವಹಿಸಲಾಗಿದೆ. ಜ್ವರ ಬರುತ್ತದೆ, ಹೋಗುತ್ತದೆ. ವಿಶೇಷ ಏನೂ ಇಲ್ಲ. ಬೇರೆ ಸಂದರ್ಭದಲ್ಲಿ ಜ್ವರ ಬಂದಾಗ ವಹಿಸುವ ಎಚ್ಚರಿಕೆಗಳನ್ನು ವಹಿಸಿದರೆ ಸಾಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ ಬಾಬು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.