ADVERTISEMENT

ಕಲ್ಲೆಸದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಸಂಬಂಧವಿಲ್ಲ: ಟಿ.ರಂಗನಾಥ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:14 IST
Last Updated 22 ಫೆಬ್ರುವರಿ 2026, 2:14 IST
ಟಿ.ರಂಗನಾಥ್
ಟಿ.ರಂಗನಾಥ್   

ಚಿಕ್ಕಮಗಳೂರು: ‘ನಗರದ ವಿಜಯಪುರ ಬಡಾವಣೆಯ ಮಹಿಳೆಯೊಬ್ಬರ ಮನೆಯ ಮೇಲೆ ಕೆಲ್ಲೆಸೆದ ಪ್ರಕರಣಕ್ಕೂ ವಿಶ್ವ ಹಿಂದೂ ಪರಿಷತ್ತಿಗೂ ಯಾವುದೇ ಸಂಬಂಧ ಇಲ್ಲ. ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಪರಿಷತ್ ಮಾಡುವುದಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ತಿಳಿಸಿದರು.

ಎಸ್‌ಡಿಪಿಐ ಮುಖಂಡರೊಬ್ಬರು ವಿಶ್ವ ಹಿಂದೂ ಪರಿಷತ್ ಮೇಲೆ ಆರೋಪ ಮಾಡಿದ್ದು, ಅದು ಸತ್ಯಕ್ಕೆ ದೂರವಾದ ವಿಷಯ. ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳ ಹಿಂದೆ ನಗರದಲ್ಲಿ ಶಾಂತಿ ಕದಡುವ ಮತ್ತು ಕೋಮು ಸಂಘರ್ಷ ಸೃಷ್ಟಿಸುವ ಪ್ರಯತ್ನ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.

ಕೆಲವು ತಿಂಗಳಿಂದ ನಗರದಲ್ಲಿ ವಿಕೃತ ಹಾಗೂ ಪುಂಡಾಟಿಕೆ ಘಟನೆಗಳು ನಡೆಯುತ್ತಿವೆ. ಇದರ ಹಿಂದೆ ಕೆಲವು ಸೀಮಿತ ವ್ಯಕ್ತಿಗಳು ಇದ್ದಾರೆ. ವಿಜಯಪುರ ಬಡಾವಣೆಯಲ್ಲಿ ದಲಿತ ಕುಟುಂಬದ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಪಕ್ಕದ ಮನೆಯ ಮುಸ್ಲಿಂ ವ್ಯಕ್ತಿ ಕಲ್ಲು ತೂರಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕಾರಣಕ್ಕೆ ಸಂತೋಷ್ ಕೋಟ್ಯಾನ್ ಮತ್ತು ಶ್ಯಾಮ್ ವಿ.ಗೌಡ ಅವರ ವಿರುದ್ಧ ಕಾರಣವಿಲ್ಲದೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.

ADVERTISEMENT

ಆರೋಪಿತರನ್ನು ಸಮರ್ಥನೆ ಮಾಡಲು ಒಂದು ಗುಂಪು ಕಾರ್ಯನಿರ್ವಹಿಸುತ್ತಿದೆ. ನಗರದಲ್ಲಿ ನಡೆಯುತ್ತಿರುವ ಅನೇಕ ಘಟನೆಗಳಿಗೆ ಕೆಲವು ವ್ಯಕ್ತಿಗಳು ನಿರಂತರ ಸಹಕಾರ ನೀಡುತ್ತಿದ್ದಾರೆ. ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು. ಕುಟುಂಬದ ನೆರವಿಗೆ ಹೋದವರ ಮೇಲೆ ದಾಖಲಿಸಿರುವ ಪ್ರಕರಣ ಕೈಬಿಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಮುಖಂಡರಾದ ಪ್ರದೀಪ್, ಆಟೊ ಶಿವಣ್ಣ, ದಿಲೀಪ್ ಶೆಟ್ಟಿ, ಸುಮಂತ್, ಗುರುಕಿರಣ್, ವಿನೂತಾ, ಮೇಘ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.