ADVERTISEMENT

ಅಲೆಮಾರಿ ಸಮುದಾಯಕ್ಕೆ ಆಹಾರ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 12:25 IST
Last Updated 4 ಏಪ್ರಿಲ್ 2020, 12:25 IST
ಅಲೆಮಾರಿ ಸಮುದಾಯದವರಿಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಹಾರದ ಕಿಟ್ ವಿತರಿಸುತ್ತಿರುವುದು
ಅಲೆಮಾರಿ ಸಮುದಾಯದವರಿಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಹಾರದ ಕಿಟ್ ವಿತರಿಸುತ್ತಿರುವುದು   

ಚಿತ್ರದುರ್ಗ: ಲಾಕ್‌ಡೌನ್ ಪರಿಣಾಮ ತೊಂದರೆಗೆ ಸಿಲುಕಿರುವ ಅಲೆಮಾರಿ, ಅರೆ ಅಲೆಮಾರಿ, ಕಿನ್ನರಜೋಗಿ, ಬುಡಕಟ್ಟು ಸಮುದಾಯದವರಿಗೆ ಭೋವಿ ಗುರುಪೀಠದಿಂದ ಶನಿವಾರ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಕೊರೊನಾ ವೈರಸ್ ಸೋಂಕು ಉಲ್ಬಣವಾಗುವುದನ್ನು ತಡೆಯಲು ಏ. 14ರ ವರೆಗೂ ಲಾಕ್‌ಡೌನ್ ಜಾರಿಯಲ್ಲಿದೆ. ಇದನ್ನು ಮನಗಂಡ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕಾತ್ರಾಳ್ ಕ್ರಾಸ್ ಬಳಿ ಸಮುದಾಯಗಳಿಗೆ ಅಕ್ಕಿ, ಬೇಳೆ, ಎಣ್ಣೆ ಇರುವ ಆಹಾರ ಕಿಟ್‌ ಅನ್ನು ವಿತರಿಸಿದರು.

‘ಕೊರೊನಾ ಭಯಾನಕ ಕಾಯಿಲೆಯಾಗಿದೆ. ಇದರಿಂದ ಸ್ವಯಂ ರಕ್ಷಿಸಿಕೊಳ್ಳಲು ನಾವೆಲ್ಲರೂ ಸರ್ಕಾರ ಸೂಚಿಸಿರುವ ಮಾರ್ಗ ಸೂಚಿಗಳನ್ನು ತಪ್ಪದೇ ಪಾಲಿಸಬೇಕಿದೆ. ಶೀತ, ಕೆಮ್ಮು, ಜ್ವರದ ಲಕ್ಷಣ ಕಂಡು ಬಂದಲ್ಲಿ ನಿರ್ಲಕ್ಷ್ಯೆ ಮಾಡದೇ ಸಮೀಪದ ಅಸ್ಪತ್ರೆಗೆ ಭೇಟಿ ನೀಡಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ಅಲೆಮಾರಿ, ಕಿನ್ನರಿ ಜೋಗಿಗಳು ಈಗಾಗಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಕುಡಿಯುವ ನೀರು ಸೇರಿ ಮೂಲಸೌಕರ್ಯ ಕೊರತೆ ಕಂಡು ಬರುತ್ತಿದೆ. ಆದ್ದರಿಂದ ತುರ್ತಾಗಿ ಸಮಸ್ಯೆ ಪರಿಹರಿಸಲು ಮುಂದಾಗಿ’ ಎಂದು ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಪಿಡಿಒಗೆ ಸೂಚನೆ ನೀಡಿದರು.

ಶಾಂತಿ ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕ ಆರ್. ವಿಶ್ವಸಾಗರ್, ಸಂಯೋಜಕ ಕುಮಾರ್, ಟಿ. ಅರಣ್ಯಸಾಗರ್, ಆಯುಷ್ ವೈದ್ಯ ಡಾ. ಶಿವಣ್ಣ ಮಾಸ್ಟರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.