ADVERTISEMENT

ಮತ ಚಲಾಯಿಸಲು 1.5 ಕಿ.ಮೀ ನಡೆಯುವ ಸ್ಥಿತಿ

ಕಂಬದ ದೇವರಹಟ್ಟಿಯಲ್ಲಿ 400 ಮತಗಳಿದ್ದರೂ ಮತಗಟ್ಟೆ ಇಲ್ಲ, ಪರ ಊರಿಗೆ ಹೋಗುವ ಸ್ಥಿತಿ

ಸಾಂತೇನಹಳ್ಳಿ ಸಂದೇಶ ಗೌಡ
Published 20 ಡಿಸೆಂಬರ್ 2020, 3:53 IST
Last Updated 20 ಡಿಸೆಂಬರ್ 2020, 3:53 IST
ಹೊಳಲ್ಕೆರೆ ತಾಲ್ಲೂಕಿನ ಕಂಬದ ದೇವರಹಟ್ಟಿ ಗ್ರಾಮ
ಹೊಳಲ್ಕೆರೆ ತಾಲ್ಲೂಕಿನ ಕಂಬದ ದೇವರಹಟ್ಟಿ ಗ್ರಾಮ   

ಹೊಳಲ್ಕೆರೆ: ಇಲ್ಲಿ 400 ಮತದಾರಿದ್ದರೂ ಗ್ರಾಮದಲ್ಲಿ ಮತಗಟ್ಟೆ ಇಲ್ಲ. ಜನರು ಮತ ಚಲಾಯಿಸಲು ಸುಮಾರು 1.5 ಕಿ.ಮೀ ದೂರದ ಊರಿಗೆ ನಡೆದುಕೊಂಡು ಹೋಗಿ ಮತ ಚಲಾಯಿಸುವ ಸ್ಥಿತಿ. ವೃದ್ಧರು, ರೋಗಿಗಳು, ಅಂಗವಿಕಲರ ಪಾಡು ಹೇಳತೀರದು.

ತಾಲ್ಲೂಕಿನ ಕಂಬದ ದೇವರ ಹಟ್ಟಿ ಗ್ರಾಮದಲ್ಲಿ ಸ್ಥಿತಿ ಇದು.

ಗ್ರಾಮದಲ್ಲಿ 150 ಮನೆಗಳಿದ್ದು, ಒಂದು ಸಾವಿರ ಜನಸಂಖ್ಯೆ ಇದೆ. ಇಲ್ಲಿಂದ ಗ್ರಾಮ ಪಂಚಾಯಿತಿಗೆ ಒಬ್ಬ
ಸದಸ್ಯನ ಆಯ್ಕೆಮಾಡಬೇಕಿದ್ದು, ಮತ ಚಲಾಯಿಸಲು ದೂರದ ಚೀರನಹಳ್ಳಿಗ್ರಾಮಕ್ಕೆ ಹೋಗುವ ಪರಿಸ್ಥಿತಿ ಇದೆ.

ADVERTISEMENT

‘ನಾವು ಮತ ಚಲಾಯಿಸಲು 1.5 ಕಿ.ಮೀ ದೂರವಿರುವ ಚೀರನಹಳ್ಳಿ ಗ್ರಾಮಕ್ಕೆ ಹೋಗಬೇಕಿದೆ. ಎರಡೂ ಗ್ರಾಮಗಳಿಂದ ಒಂದು ಸಾವಿರಕ್ಕೂ ಹೆಚ್ಚು ಮತಗಳಿರುವುದರಿಂದ ಅಲ್ಲಿ 2 ಮತಗಟ್ಟೆ ಮಾಡಿದ್ದಾರೆ. ನಾವು ಅಲ್ಲಿನ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕಿದ್ದು, ಸ್ವಂತ ವಾಹನ ಇದ್ದವರಿಗೆ ಸಮಸ್ಯೆ ಇಲ್ಲ. ವಾಹನ ಇಲ್ಲದವರು ನಡೆದುಕೊಂಡು ಹೋಗಿ ಮತ ಚಲಾಯಿಸಬೇಕು’ ಎನ್ನುತ್ತಾರೆ ಗ್ರಾಮದ ಮುಖಂಡರಾದ ಚಿಕ್ಕಣ್ಣ, ರಾಮಕೃಷ್ಣಪ್ಪ, ದಾಸಪ್ಪ, ಕೃಷ್ಣಪ್ಪ.

‘ನಮ್ಮ ಊರಿಗೆ ಬಸ್ ವ್ಯವಸ್ಥೆ ಇಲ್ಲ. ಗ್ರಾಮಸ್ಥರು ಬೇರೆ ಕಡೆ ಹೋಗಲು ಬೈಕ್‌ಗಳನ್ನು ಬಳಸುತ್ತಾರೆ. ಬೈಕ್ ಇಲ್ಲದವರು ಆಟೊಗಳಿಗೆ ಮೊರೆ ಹೋಗುತ್ತಾರೆ. ಗ್ರಾಮದಲ್ಲಿ ಮೂರು ಆಟೊಗಳಿದ್ದು, ನಿತ್ಯ ಪಟ್ಟಣಕ್ಕೆ ಸಂಚರಿಸುತ್ತವೆ. ಜನ ಇದೇ ಆಟೊಗಳಲ್ಲಿ ಬಂದು ಮತ ಚಲಾಯಿಸಬೇಕು. ವೃದ್ಧರು, ಅಂಗವಿಕಲರು, ರೋಗಿಗಳು ಬೇರೆ ಊರಿಗೆ ಹೋಗಿ ಮತ ಚಲಾಯಿಸುವುದು ಕಷ್ಟ. ಚುನಾವಣಾ ಆಯೋಗದವರು ಮತದಾನ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ ಎಂದು ಜಾಗೃತಿ ಮೂಡಿಸುತ್ತಾರೆ. ಆದರೆ ಅಗತ್ಯ ಇರುವ ಕಡೆ ಮತಗಟ್ಟೆ ಸ್ಥಾಪಿಸಿದರೆ ಮಾತ್ರ ಹೆಚ್ಚು ಮತದಾನ ಆಗಲಿದೆ. ನಮ್ಮ ಊರಿಗೂ ಒಂದು ಮತಗಟ್ಟೆ ಸ್ಥಾಪಿಸಬೇಕು’ ಎಂದು ಆಗ್ರಹಿಸುತ್ತಾರೆ ಗ್ರಾಮದ ಯುವಕರಾದ ಎಸ್.ಧೋಮಪ್ಪ, ಮಂಜುನಾಥ, ಕೃಷ್ಣಮೂರ್ತಿ, ಮಲ್ಲಿಕಾರ್ಜುನ್, ನಾಗರಾಜ್.

‘ಮಳೆಗಾಲದಲ್ಲಿ ನೆನೆಯುತ್ತ, ಬೇಸಿಗೆಯಲ್ಲಿ ಬಿಸಿಲಿನಲ್ಲಿ ಮೈ ಸುಟ್ಟುಕೊಂಡು ಹೋಗಿ ಮತದಾನ ಮಾಡಬೇಕು. ಆದರೂ ನಮ್ಮೂರಿನ ಜನ ಕಷ್ಟಪಟ್ಟು ಹೋಗಿ ಮತದಾನ ಮಾಡುತ್ತಾರೆ. ನಮ್ಮ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಮತಗಟ್ಟೆ ಸ್ಥಾಪಿಸಲು ಎಲ್ಲಾ ಸೌಲಭ್ಯಗಳಿವೆ. ಬೇರೆ ಊರಿಗೆ ಹೋಗಿ ಮತ ಚಲಾಯಿಸಬೇಕಾಗಿರುವುದರಿಂದ ಕೆಲವರು ಮತದಾನದಿಂದ ವಂಚಿತವಾಗುವ ಸಂಭವ ಇದೆ’ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.