ADVERTISEMENT

ಚಿತ್ರದುರ್ಗ: 97 ಜನರಿಗೆ ಕೋವಿಡ್‌ ದೃಢ, ವೈದ್ಯ ಸೇರಿ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 15:13 IST
Last Updated 9 ಆಗಸ್ಟ್ 2020, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಜಿಲ್ಲೆಯಲ್ಲಿ ಭಾನುವಾರ 97 ಜನರಿಗೆ ಕೋವಿಡ್‌ ದೃಢವಾಗಿದ್ದು, ಈವರೆಗೆ 24 ಗಂಟೆಯಲ್ಲಿ ವರದಿಯಾದ ಗರಿಷ್ಠ ಪ್ರಕರಣ ಇದಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 1,120ಕ್ಕೆ ಏರಿಕೆಯಾಗಿದೆ.

ಕೊರೊನಾ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸಿದ ವೈದ್ಯ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಜನರು ಗುಣಮುಖರಾಗಿದ್ದಾರೆ.

ಭಾನುವಾರ 1,037 ಜನರ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಚಿತ್ರದುರ್ಗ ತಾಲ್ಲೂಕಿನಲ್ಲಿ 18, ಹೊಳಲ್ಕೆರೆ 1, ಹಿರಿಯೂರು 26, ಚಳ್ಳಕೆರೆ 34, ಹೊಸದುರ್ಗ 10 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 8 ಪ್ರಕರಣಗಳು ದೃಢಪಟ್ಟಿವೆ.

ADVERTISEMENT

ಜಿಲ್ಲೆಯಲ್ಲಿ 569 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪೈಕಿ ಈಗಾಗಲೇ 533 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 302 ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ.

ಇಬ್ಬರ ಸಾವು:ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 42 ವರ್ಷದ ವೈದ್ಯ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಮೃತಪಟ್ಟಿದ್ದಾರೆ. ಇವರು ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್‌ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

ವಾರದ ಹಿಂದೆಯಷ್ಟೇ ಇವರಿಗೆ ಸೋಂಕು ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 61 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಚಳ್ಳಕೆರೆ ನಿವಾಸಿಯಾಗಿರುವ ಇವರಿಗೆ ಆ.5ರಂದು ಸೋಂಕು ಕಾಣಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.