ADVERTISEMENT

ಬಾಳೆ ಬೆಳೆದು ಬದುಕು ಹಸನು ಮಾಡಿಕೊಂಡ ರೈತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 7:20 IST
Last Updated 19 ಮಾರ್ಚ್ 2025, 7:20 IST
ಹೊಸದುರ್ಗದ ಅತ್ತಿಘಟ್ಟದ ಗ್ರಾಮದ ಕೆ. ನಾಗರಾಜು ಅವರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಬಾಳೆ
ಹೊಸದುರ್ಗದ ಅತ್ತಿಘಟ್ಟದ ಗ್ರಾಮದ ಕೆ. ನಾಗರಾಜು ಅವರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಬಾಳೆ   

ಹೊಸದುರ್ಗ: ತಾಲ್ಲೂಕಿನ ಅತ್ತಿಘಟ್ಟ ಗ್ರಾಮದ ರೈತ ಕೆ. ನಾಗರಾಜು ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಅಡಿಕೆಯ ನಡುವೆ ಅಂತರಬೆಳೆಯಾಗಿ ಬೆಳೆದಿರುವ ಏಲಕ್ಕಿ ಬಾಳೆ, ಅಧಿಕ ಲಾಭ ತಂದಿಕೊಟ್ಟಿದ್ದು, ಉತ್ತಮ ಬದುಕು ಕಂಡುಕೊಂಡಿದ್ದಾರೆ.

9ನೇ ತರಗತಿ ಓದಿರುವ ಅವರಿಗೆ ಕೃಷಿಯಲ್ಲಿ ಅಪಾರ ಆಸಕ್ತಿ. ಹೀಗಾಗಿ ಕಳೆದ 30 ವರ್ಷಗಳಿಂದ ಬಾಳೆ ಬೆಳೆಯುತ್ತಿದ್ದಾರೆ. ವರ್ಷಕ್ಕೆ ₹1.5 ರಿಂದ ₹2 ಲಕ್ಷ ಖರ್ಚು ಮಾಡಿ, ₹7 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಇವರು ಬೆಳೆದ ಪ್ರತೀ ಬಾಳೆಗೊನೆ 10 ರಿಂದ 20 ಕೆ.ಜಿಯವರೆಗೂ ತೂಗುತ್ತವೆ. 

‘₹23ಕ್ಕೆ ಒಂದರಂತೆ 1,500 ಬಾಳೆ ಗಿಡಗಳನ್ನು ಖರೀದಿಸಿದ್ದೆ. ಎರಡು ಅಡಿ ಅಗಲ, ಎರಡು ಅಡಿ ಆಳಕ್ಕೆ ಗುಂಡಿ ತೆಗೆದು, ಪ್ರತಿ ಗುಂಡಿಗೆ ಕುರಿಗೊಬ್ಬರ ಹಾಕಿ ಮುಚ್ಚಿ, 20 ದಿನದ ನಂತರ ನೀರು ಹಾಯಿಸಿ ನಾಟಿ ಮಾಡಿದ್ದೆ. ಬಾಳೆಗಿಡ ದೊಡ್ಡದಾದ ನಂತರ ಉಳುಮೆ ಮಾಡಬಾರದು. ಫಸಲು ಬರುವ ವೇಳೆಗೆ ತಿಂಗಳಿಗೊಮ್ಮೆ ಗೊಬ್ಬರ ಹಾಕಬೇಕು. ಮೂರು ದಿನಗಳಿಗೊಮ್ಮೆ ನೀರು ಹಾಯಿಸಬೇಕು’ ಎಂದು ರೈತ ಕೆ. ನಾಗರಾಜು ಮಾಹಿತಿ ನೀಡಿದರು.

ADVERTISEMENT

‘9 ತಿಂಗಳಿಗೆ ಬಾಳೆಗಿಡ ಹೊಂಬಾಳೆ ಒಡೆಯುತ್ತದೆ. 11 ತಿಂಗಳಿಗೆ ಕಟಾವಿಗೆ ಬರುತ್ತದೆ. ಬಾಳೆಗಿಡಗಳು ಮುಂಗಾರಿನಲ್ಲಾಗುವ ಗುಡುಗು ಮಳೆಯಿಂದಾಗಿ ನೆಲಕ್ಕೆ ಬೀಳದಂತೆ ಹಗ್ಗದ ಸಹಾಯದಿಂದ ಮರದಿಂದ ಮರಕ್ಕೆ ಕಟ್ಟಬೇಕು. ಇತರೆ ಬೆಳೆ ಬೆಳೆದು ನಷ್ಟ ಅನುಭವಿಸುವುದಕಿಂತ ಒಮ್ಮೆ ಬಾಳೆ ಬೆಳೆದರೆ 3 ವರ್ಷ ಫಸಲು ಪಡೆಯಬಹುದು. ಹಾಸನ, ಶ್ರೀರಾಂಪುರ, ಹೊಸದುರ್ಗ ಹಾಗೂ ಬೆಂಗಳೂರಿನ ಅಕ್ಷಯ್‌ ಆರ್ಗಾನಿಕ್‌ ಕಂಪನಿಯವರು ಜಮೀನಿಗೆ ಬಂದು ಬಾಳೆ ಖರೀದಿಸುತ್ತಾರೆ. ಒಳ್ಳೆ ಮಾರುಕಟ್ಟೆ ವ್ಯವಸ್ಥೆ ದೊರೆತರೆ ಇನ್ನೂ ಹೆಚ್ಚು ಬೆಳೆಯಬಹುದು’ ಎಂದು ಅವರು ತಿಳಿಸಿದರು.

ಬಾಳೆಗೊನೆಗಳು

‘ಪ್ರತ್ಯೇಕ ಬಂಡವಾಳವಿಲ್ಲದೆ, ಒಂದೇ ಖರ್ಚಿನಲ್ಲಿ ಎರಡು ಬೆಳೆ ಪಡೆಯಬಹುದು. ಅಡಿಕೆ ಫಸಲಿಗೆ ಬರುವವರೆಗೂ ಬಾಳೆಯಿಂದ ಬರುವ ಆದಾಯದಲ್ಲಿ ಖರ್ಚು ನಿಭಾಯಿಸಬಹುದು. ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಬಾಳೆ ಉತ್ತಮ ಆದಾಯ ನೀಡುವ ಬೆಳೆ. ಬಾಳೆಕಂದು ಸಹ ವ್ಯಾಪಾರ ಆಗುತ್ತಿದೆ. ಚೆನ್ನಾಗಿ ನಿರ್ವಹಿಸಿದರೆ, ಬಾಳೆಯಿಂದ ಅಧಿಕ ಲಾಭಗಳಿಸಬಹುದು ಎಂದು ನಾಗರಾಜು ಅವರ ಪುತ್ರ ಯೋಗೇಶ್‌ ಎನ್‌. ಹೇಳಿದ್ದಾರೆ. 

ರೈತರು ಹಲವು ಬೆಳೆ ಬೆಳೆಯಲು ಮುಂದಾಗಬೇಕು. ಒಂದು ನಷ್ಟವಾದರೆ ಮತ್ತೊಂದು ಬೆಳೆಯಿಂದ ಲಾಭ ಪಡೆಯಬಹುದು. ಬೇರ ಕಡೆ ಉದ್ಯೋಗ ಹುಡುಕುವ ಬದಲು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು
ಕೆ. ನಾಗರಾಜು ರೈತ

ರೈತ ಕೆ. ನಾಗರಾಜು ಅವರ ಸಂಪರ್ಕ ಸಂಖ್ಯೆ: (9964565105)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.