ಚಿತ್ರದುರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಮುರುಘಾರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಜ.18 ಮತ್ತು 19ರಂದು ಅಖಿಲ ಭಾರತ 13ನೇ ಶರಣ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬಸವಕಲ್ಯಾಣದ ಬಸವ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪರಿಷತ್ ಗೌರವಾಧ್ಯಕ್ಷರಾದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಸಮ್ಮೇಳನದ ಅಂಗವಾಗಿ ಶಾಂತವೀರ ಸ್ವಾಮೀಜಿಗಳ ಮಹಾದ್ವಾರ, ಬಿಚ್ಚುಗತ್ತಿ ಭರಮಣ್ಣನಾಯಕ ಮಹಾದ್ವಾರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾದ್ವಾರ, ಎಸ್.ನಿಜಲಿಂಗಪ್ಪ ಮಹಾದ್ವಾರ, ಜಯದೇವ ಮುರುಘರಾಜೇಂದ್ರ ವೇದಿಕೆ ರೂಪಿಸಲಾಗಿದೆ.
ದಾಸೋಹ ಹಾಗೂ ವಸತಿ ವ್ಯವಸ್ಥೆಯನ್ನು ಮುರುಘಾ ಮಠದ ಆಡಳಿತ ಮಂಡಳಿ ವಹಿಸಿಕೊಂಡಿದೆ. ಸಾಂಸ್ಕೃತಿಕ ನಾಯಕ ಬಸವಣ್ಣ, ಮಹಿಳಾ ಸಂವೇದನೆ, ಶರಣ ಸಾಹಿತ್ಯದತ್ತ ಯುವಜನ, ಶರಣರ ವೈಚಾರಿಕ ಪ್ರಜ್ಞೆ ಮುಂತಾದ ಗೋಷ್ಠಿಗಳು ನಡೆಯಲಿವೆ. ಬಹಿರಂಗ ಅಧಿವೇಶನ, 13ನೇ ಸಮ್ಮೇಳನದ ಅಂಗವಾಗಿ 13 ಮಂದಿ ಸಾಧಕ ಶರಣರಿಗೆ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವೂ ಜರುಗಲಿದೆ.
ರಾಜ್ಯ, ಹೊರರಾಜ್ಯಗಳಿಂದ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.