ADVERTISEMENT

ಗ್ರಾ.ಪಂ. ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

ಮತಪತ್ರದ ಕ್ರಮಸಂಖ್ಯೆಗೆ ಕನ್ನಡ ವರ್ಣಮಾಲೆಯ ಮೊರೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 12:27 IST
Last Updated 14 ಡಿಸೆಂಬರ್ 2020, 12:27 IST

ಚಿತ್ರದುರ್ಗ: ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಿಗೆ ಸೋಮವಾರ ಚಿಹ್ನೆ ಹಂಚಿಕೆ ಮಾಡಲಾಯಿತು. ನಾಮಪತ್ರ ಹಿಂಪಡೆಯುವ ಅವಧಿ ಕೊನೆಗೊಂಡ ಬಳಿಕ ಚುನಾವಣಾ ಆಯೋಗ ನಿಗದಿಪಡಿಸಿದ ಚಿಹ್ನೆಗಳನ್ನು ನೀಡಲಾಯಿತು.

ಚಿಹ್ನೆ ಪಡೆದ ಅಭ್ಯರ್ಥಿಗಳು ಹರ್ಷಚಿತ್ತರಾಗಿ ಪ್ರಚಾರ ಕಾರ್ಯಕ್ಕೆ ಇಳಿದರು. ಇನ್ನೂ ಕೆಲವರು ಇಷ್ಟದ ಚಿಹ್ನೆ ಸಿಕ್ಕಿಲ್ಲವೆಂಬ ಬೇಸರದಲ್ಲಿಯೇ ಮತದಾರರ ಮನೆಬಾಗಿಲು ತಟ್ಟಲು ಸಜ್ಜಾದರು. ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಗೋಚರವಾಗಿದ್ದು, ರಾಜಕೀಯ ಲೆಕ್ಕಾಚಾರ ಇನ್ನಷ್ಟು ಪಕ್ಕಾ ಆಗುತ್ತಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ –1992 ಸೆಕ್ಷನ್‌ 7(2) ರಂತೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪಕ್ಷ ರಹಿತವಾಗಿ ನಡೆಸಲಾಗುತ್ತಿದೆ. ರಾಜಕೀಯ ಪಕ್ಷದ ಅಧಿಕೃತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇರುವುದಿಲ್ಲ. ಹೀಗಾಗಿ, ರಾಜ್ಯ ಚುನಾವಣಾ ಆಯೋಗ 197 ಮುಕ್ತ ಚಿಹ್ನೆಗಳನ್ನು ಗುರುತಿಸಿದೆ. ಇದರಲ್ಲಿ ಸೂಕ್ತ ಎನಿಸುವ ಚಿಹ್ನೆಯನ್ನು ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ಚಿಹ್ನೆಗಳು ಕುತೂಹಲ ಮೂಡಿಸುವಂತಿವೆ. ಕಳೆದ ಚುನಾವಣೆಯಲ್ಲಿ ಬಳಕೆಯಾದ ಚಿಹ್ನೆಗಳಿಗೆ ಆಯೋಗದ ಮುದ್ರೆ ಬಿದ್ದಿದೆ. ಬೇಬಿ ವಾಕರ್‌, ಅಲ್ಮೆರಾ, ಹವಾನಿಯಂತ್ರಕ (ಎ.ಸಿ), ಆಟೊ, ಬಲೂನ್‌, ಟಾರ್ಚ್‌, ಬ್ಯಾಟ್‌, ಹಾಯಿದೋಣಿ, ಬ್ರೆಡ್‌, ಲಕೋಟೆ, ಲಂಗ, ವಜ್ರ, ಡಿಶ್‌ ಆ್ಯಂಟೆನಾ, ಪಾದರಕ್ಷೆ, ಶೂ, ಕೋಟು, ಇಟ್ಟಿಗೆ, ಕ್ಯಾಮೆರಾ, ಬೆಂಡೆಕಾಯಿ, ಐಸ್‌ಕ್ರೀಂ, ದ್ರಾಕ್ಷಿಹಣ್ಣು, ಉಗುರು ಕತ್ತರಿಸುವ ಉಪಕರಣ, ಹಲ್ಲುಜ್ಜುವ ಪೇಸ್ಟ್‌ ಸೇರಿ ಹಲವು ಚಿಹ್ನೆಗಳು ಪಟ್ಟಿಯಲ್ಲಿವೆ.

‘ಚಿಹ್ನೆ ವಿತರಣೆಗೆ ಆಯೋಗ ನಿಯಮಾವಳಿಗಳನ್ನು ನಿಗದಿಪಡಿಸಿದೆ. ಮೊದಲು ನಾಮಪತ್ರ ಸಲ್ಲಿಸಿದವರು ಚಿಹ್ನೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಪಡೆಯುತ್ತಾರೆ. ಅವರು ಆಯ್ಕೆ ಮಾಡಿಕೊಂಡಿರುವುದನ್ನು ಬಿಟ್ಟು ಉಳಿದ ಚಿಹ್ನೆಗಳನ್ನು ಇತರ ಅಭ್ಯರ್ಥಿಗಳು ಪಡೆಯಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಚಿಹ್ನೆ ಒಬ್ಬರಿಗೆ ಮಾತ್ರ ಹಂಚಿಕೆಯಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಾಮಪತ್ರ ಸಲ್ಲಿಕೆ ಮಾಡಿದರೂ ಚಿಹ್ನೆ ಸಿಗದಿರುವುದರಿಂದ ಪ್ರಚಾರ ಬಿರುಸು ಪಡೆದಿರಲಿಲ್ಲ. ಚಿಹ್ನೆ ಲಭ್ಯವಾಗುತ್ತಿದ್ದಂತೆ ಅಭ್ಯರ್ಥಿಗಳಲ್ಲಿ ಹುಮ್ಮಸ್ಸು ಮೂಡಿದೆ. ಭಾವಚಿತ್ರ, ಚಿಹ್ನೆ ಹಾಗೂ ಕ್ರಮಸಂಖ್ಯೆಯನ್ನು ಹೊಂದಿದ ಕರಪತ್ರ, ಬ್ಯಾನರ್‌ ಮುದ್ರಣಕ್ಕೆ ಮುಂದಾದರು. ಅಭ್ಯರ್ಥಿಗಳು ಮಂಗಳವಾರದಿಂದ ಕರಪತ್ರದೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.

ಕನ್ನಡದ ವರ್ಣಮಾಲೆಗೆ ಒತ್ತು

ಮತಪತ್ರದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ ನೀಡಲು ಚುನಾವಣಾ ಆಯೋಗ ಕನ್ನಡ ವರ್ಣಮಾಲೆಯ ಮೊರೆಹೋಗಿದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಯ ಕನ್ನಡ ಅಕ್ಷರದ ಆಧಾರದ ಮೇಲೆ ಕ್ರಮಸಂಖ್ಯೆ ಲಭ್ಯವಾಗಲಿದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಜನರು ಸ್ಪರ್ಧಿಸುತ್ತಾರೆ. ಚೋಳಗಟ್ಟ ಗ್ರಾಮ ಪಂಚಾಯಿತಿಯ 16 ಸ್ಥಾನಗಳಿಗೆ 68 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪ್ರತಿ ವಾರ್ಡ್‌ಗೆ ಹತ್ತಾರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತಪತ್ರದಲ್ಲಿ ಮೊದಲು ಕಾಣಿಸಿಕೊಳ್ಳುವ ಉಮೇದು ಎಲ್ಲರಲ್ಲೂ ಇರುತ್ತದೆ. ಹೀಗಾಗಿ, ಆಯೋಗವು ಕನ್ನಡ ವರ್ಣಮಾಲೆಯ ನಿಯಮ ರೂಪಿಸಿದೆ.

ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಇಂಗ್ಲಿಷ್‌ ವರ್ಣಮಾಲೆಯ ಪ್ರಕಾರ ಮತಪತ್ರದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ ನಿಗದಿಯಾಗುತ್ತದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗೆ ಕನ್ನಡ ವರ್ಣಮಾಲೆಯ ಮಾನದಂಡ ನಿಗದಿಪಡಿಸಿದ್ದು ಹಲವರಲ್ಲಿ ಸಂತಸವುಂಟು ಮಾಡಿದೆ. ಕ್ರಮಸಂಖ್ಯೆ ನಿಗದಿಗೆ ಅನುಕೂಲವಾಗುವಂತೆ ಪ್ರತಿ ಚುನಾವಣಾಧಿಕಾರಿಗೆ ಕನ್ನಡ ವರ್ಣಮಾಲೆಯ ಪುಸ್ತಕ ನೀಡಲಾಗಿದೆ.

ಸಾಮಾನ್ಯ ಕ್ಷೇತ್ರಕ್ಕಿಲ್ಲ ನಾಮಪತ್ರ

ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಮೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಕ್ಷೇತ್ರಕ್ಕೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್‌, ಹೊಳಲ್ಕೆರೆ ತಾಲ್ಲೂಕಿನ ಗುಂಜನೂರು ಹಾಗೂ ದುಮ್ಮಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟವೆಂಬ ಕಾರಣಕ್ಕೆ ಅಭ್ಯರ್ಥಿಗಳು ಚಾಣಾಕ್ಷ ತಂತ್ರ ಅನುಸರಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಸಿಎಂ ‘ಎ’, ಬಿಸಿಎಂ ‘ಬಿ’ ಹಾಗೂ ಮಹಿಳಾ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಕೂಡ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗುವ ಅವಕಾಶ ಗ್ರಾಮ ಪಂಚಾಯಿತಿಯಲ್ಲಿದೆ. ಮೀಸಲು ಕ್ಷೇತ್ರದಲ್ಲಿ ಸೋಲುಕಂಡ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಮತ ಪಡೆದವರನ್ನು ಸಾಮಾನ್ಯ ಕ್ಷೇತ್ರಕ್ಕೆ ಪರಿಗಣಿಸಲಾಗುತ್ತದೆ. ಈ ಲೆಕ್ಕಾಚಾರದ ಮೇರೆಗೆ ಅಭ್ಯರ್ಥಿಗಳು ಸಾಮಾನ್ಯ ಕ್ಷೇತ್ರದ ಬದಲು ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.