ADVERTISEMENT

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ನಮನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 13:03 IST
Last Updated 14 ಏಪ್ರಿಲ್ 2020, 13:03 IST
ಚಿತ್ರದುರ್ಗದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಗೌರವ ಸಲ್ಲಿಸಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಇದ್ದಾರೆ.
ಚಿತ್ರದುರ್ಗದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಗೌರವ ಸಲ್ಲಿಸಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಇದ್ದಾರೆ.   

ಚಿತ್ರದುರ್ಗ: ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಲಾಕ್‌ಡೌನ್ ನಡುವೆಯೂ ಜಿಲ್ಲೆಯ ಹಲವೆಡೆ ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಭೋವಿ ಗುರುಪೀಠದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, 'ಅಂಬೇಡ್ಕರ್ ರಾಷ್ಟ್ರೀಯತಾವಾದಿಯಾಗಿದ್ದರು. ಕಾನೂನು ತಜ್ಞರಾಗಿ, ರಾಜಕೀಯ ನೇತಾರರಾಗಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಅವರು ದೇಶದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಇಂಥ ಒಬ್ಬ ಚಿಂತಕನ ಆದರ್ಶವನ್ನು ಯುವಸಮೂಹ ಮೈಗೂಡಿಸಿಕೊಳ್ಳುವ ಅಗತ್ಯವಿದೆ' ಎಂದು ಸಲಹೆ ನೀಡಿದರು.

'ಜಾತ್ಯಾತೀತ ಮೌಲ್ಯಗಳುಳ್ಳ, ಜೀವಂತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಬೇಕಾದ ಚಳವಳಿಯ ವಿಸ್ತಾರವನ್ನು ಪಡೆಯಲು ಅವರ ಸಮಗ್ರ ಚಿಂತನೆಯ ಮರುಮಂಥನ ನಡೆಯಬೇಕಿದೆ. ಸಮಸಮಾಜ ಕಟ್ಟಲು ನಾವು ಪರಿಣಾಮಕಾರಿ ಪರಿವರ್ತನವಾದಿ ಆಗಬೇಕು' ಎಂದರು.

ADVERTISEMENT

ಮಡಿವಾಳ ಮಾಚಿದೇವ ಗುರುಪೀಠದಲ್ಲಿ ನಡೆದ ಸಮಾರಂಭದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ,'ಸಮಸಮಾಜದ ಮಾರ್ಗದರ್ಶಕ, ಜಾತಿ ಅಳಿಸಲು ಜ್ಞಾನ ಜ್ಯೋತಿ ನೀಡಿದ ಅಪರಿಮಿತ ಜ್ಞಾನಿ ಅಂಬೇಡ್ಕರ್‌.ದಿಕ್ಕೆಟ್ಟವರ ದಿಕ್ಸೂಚಕ, ಶ್ರಮಿಕ ವರ್ಗದ ಆಸ್ಮಿತೆ, ದನಿಯಿಲ್ಲದವರ ಬಾಳಿನ ಆಶಾಕಿರಣ ಆಗಿದ್ದಾರೆ. ವೈಜ್ಞಾನಿಕ-ವೈಚಾರಿಕತೆಯ ಪ್ರವರ್ತಕ ಅಂಬೇಡ್ಕರ್ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಹಾಗೂ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ನೇತೃತ್ವದಲ್ಲಿ ಅಂಬೇಡ್ಕರ್‌ ಜಯಂತಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.