ಚಿತ್ರದುರ್ಗದ ಲಕ್ಷ್ಮಿಬಜಾರ್‌ನಲ್ಲಿ ಅಚ್ಚು ಬಳಸಿ ತಯಾರಿಸಿದ ದೀಪಗಳನ್ನು ಮಾರಾಟ ಮಾಡುತ್ತಿರುವುದು
ಚಿತ್ರದುರ್ಗ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಹುಡುಕಿದರೂ ಮಣ್ಣಿನ ದೀಪ ದೊರೆಯುತ್ತಿಲ್ಲ. ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದ ಬಂದ, ಅಚ್ಚು ಬಳಸಿ ತಯಾರಿಸದ ದೀಪಗಳೇ ಮಾರುಕಟ್ಟೆಯಲ್ಲಿ ಆರ್ಭಟಿಸುತ್ತಿದ್ದು, ನೈಸರ್ಗಿಕ ದೀಪಗಳು ಇನ್ನಿಲ್ಲವಾಗುತ್ತಿವೆ.
ಬೇಡಿಕೆ ಇಲ್ಲ ಎಂಬ ಕಾರಣದಿಂದ ಕುಶಲಕರ್ಮಿಗಳು, ಕುಂಬಾರರು ಈ ಬಾರಿ ಮಣ್ಣಿನ ಹಣತೆಗಳನ್ನು ತಯಾರಿಸಿಲ್ಲ. ಅವರು ಕೂಡ ಅಚ್ಚುಗಳನ್ನು ಬಳಸಿ ತಯಾರಿಸಿದ ವಿವಿಧ ಮಾದರಿಯ ದೀಪಗಳನ್ನೇ ತರಿಸಿ ಮಾರಾಟ ಮಾಡುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕುಂಬಾರರಿಗೆ ಮಣ್ಣು ಹದ ಮಾಡಿಕೊಂಡು ಹಣತೆ ತಯಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರೂ ಅಚ್ಚು ದೀಪಗಳಿಗೆ ಮೊರೆ ಹೋಗಿದ್ದಾರೆ.
ನಗರದ ಗಾಂಧಿ ವೃತ್ತ, ಪೇಟೆ ಬೀದಿ, ಲಕ್ಷ್ಮಿ ಬಜಾರ್, ಜೆಸಿಆರ್ ಮುಖ್ಯರಸ್ತೆ ಸೇರಿ ವಿವಿಧೆಡೆ ವಿವಿಧ ಮಾದರಿಯ ದೀಪಗಳನ್ನು ಮಾರಾಟ ಮಾಡಲಾಗುತ್ತಿದೆ. ಅವೆಲ್ಲವೂ ಅಚ್ಚು ಹಾಗೂ ಯಂತ್ರ ಬಳಸಿ ತಯಾರಿಸಿದ ಪಿಂಗಾಣಿ ದೀಪಗಳೇ ಆಗಿವೆ. ಜೇಡಿ ಮಣ್ಣಿನಿಂದ ನೈಸರ್ಗಿಕ ವಿಧಾನದಿಂದ ತಯಾರಿಸಿದ ದೀಪಗಳಿಗಾಗಿ ಜನರು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರಪ್ರದೇಶದ ಕಲ್ಯಾಣ ದುರ್ಗ, ರಾಯದುರ್ಗ, ಬಳ್ಳಾರಿ ಕಡೆಯಿಂದ ತರಿಸಿ ದೀಪ ಮಾರಾಟ ಮಾಡಲಾಗುತ್ತಿದೆ.
ಮೊಳಕಾಲ್ಮುರು ಪಟ್ಟಣ ಸೇರಿದಂತೆ ತಾಲ್ಲೂಕಿನ ಸಂತೇಗುಡ್ಡ, ದೇವಸಮುದ್ರ, ನಾಗಸಮುದ್ರ, ಕೋನಸಾಗರ, ಬಿ.ಜಿ.ಕೆರೆಯಲ್ಲಿ ಈಗಲೂ ಕುಂಬಾರಿಕೆ ಮುಂದುವರಿಸಿಕೊಂಡು ಹೋಗುತ್ತಿರುವ ಕೆಲ ಕುಟುಂಬಗಳು ಇವೆ. ಮಣ್ಣಿನ ಮಡಿಕೆ ತಯಾರಿಕೆ ಹೆಚ್ಚಾಗಿ ಮಾಡುತ್ತಾರೆ. ದೀಪಾವಳಿ ಮಾಸದಲ್ಲಿ ಹಣತೆ ಮಾರಾಟ ಮಾಡುತ್ತಾರೆ.
ಈಗ ಆಧುನಿಕತೆಯ ಭರಾಟೆಯಲ್ಲಿ ಥರಾವರಿ ಹಣತೆಗಳು ಬಂದಿರುವ ಕಾರಣ ಮಣ್ಣಿನ ದೀಪಗಳನ್ನು ಅವರು ತಯಾರಿಸುತ್ತಿಲ್ಲ. ಹಾಕುವ ಬಂಡವಾಳವೂ ಕೈಸೇರದ ಕಾರಣ ಹಣತೆ ತಯಾರಿಸುವುದನ್ನು ಕೈಬಿಟ್ಟಿದ್ದೇವೆ ಎಂದು ಹೇಳುತ್ತಾರೆ. ಇತ್ತೀಚೆಗೆ ಪ್ಲಾಸ್ಟಿಕ್, ಪೇಪರ್, ಅಲ್ಯುಮಿನಿಯಂ ಹಣತೆಗಳು ಬಂದ ನಂತರ ಮಣ್ಣಿನ ಹಣತೆಗೆ ಬೇಡಿಕೆ ಕುಸಿದಿದೆ.
‘ಹಣತೆಯಾಗಲೀ, ಮಡಿಕೆಗಾಗಲೀ ಸ್ಥಳೀಯವಾಗಿ ತಯಾರಿಸಲು ಮಣ್ಣು ಸಿಗುವುದಿಲ್ಲ. ಬೇರೆ ಕಡೆಯಿಂದ ತಂದು ಸೋಸಿ ಹದ ಮಾಡಿ ಮಾಡಬೇಕು. ಭಟ್ಟಿ ಸುಡುವುದು ತುಸು ಹೆಚ್ಚಾದರೂ ಕೆಟ್ಟು ಹೋಗುತ್ತವೆ. ಅಕಾಲಿಕ ಮಳೆ ಈ ವರ್ಷ ಭಟ್ಟಿ ಹಾಕಲು ಬಿಟ್ಟಿಲ್ಲ. ಇದರಿಂದ ನಾವು ಬಳ್ಳಾರಿ, ಚಳ್ಳಕೆರೆ, ರಾಯದುರ್ಗ ದೀಪ ಮಡಕೆ ತರಿಸಿ ಮಾರುತ್ತಿದ್ದೇವೆ’ ಎಂದು ಹನುಮಾಪುರದ ಮಡಕೆ, ದೀಪ ತಯಾರಕರಾದ ಆಂಜಿನಪ್ಪ ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ಕುಂಬಾರ ವೃತ್ತಿ ಮಾಡುವ ಕೆ.ಎ.ಓಂಕಾರಪ್ಪ ವಂಶಪಾರಂಪರ್ಯವಾಗಿ ಬಂದಿರುವ ಕುಂಬಾರಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಬೇಡಿಕೆ ಕಡಿಮೆ ಇದ್ದರೂ ದೀಪಗಳನ್ನು ತಪ್ಪದೇ ತಯಾರಿಸುತ್ತಾರೆ.
‘ನಾನು ಲ್ಯಾಬ್ ಟೆಕ್ನಿಷಿಯನ್ ಡಿಪ್ಲೊಮಾ ಓದಿದ್ದೇನೆ. ಆದರೂ, ವಂಶಪಾರಂಪರ್ಯವಾಗಿ ಮಾಡಿಕೊಂಡು ಬಂದಿರುವ ವೃತ್ತಿ ಬಿಡಬಾರದು ಎಂದು ಕುಂಬಾರಿಕೆ ಮಾಡುತ್ತಿದ್ದೇನೆ. ಪ್ರತೀ ವರ್ಷ ಗಣಪತಿ ತಯಾರಿಸುವ ಜತೆಗೆ ದೀಪವನ್ನೂ ತಯಾರಿಸುತ್ತೇವೆ. ನಮ್ಮಲ್ಲಿ ವರ್ಷಪೂರ್ತಿ ದೀಪ ಸಿಗುತ್ತವೆ. ದೀಪಾವಳಿ ಸಂದರ್ಭದಲ್ಲಿ ಹೆಚ್ಚು ಮಾರಾಟ ಆಗುತ್ತವೆ. ಸಣ್ಣ ದೀಪಗಳಾದರೆ ₹10 ಕ್ಕೆ 2, ದೊಡ್ಡವಾದರೆ ₹15, ₹20ಕ್ಕೆ 1 ದೀಪ ಮಾರಾಟ ಮಾಡುತ್ತೇವೆ. ಮಹಿಳಾ ಸಂಘದವರು ನಮ್ಮಲ್ಲಿ ದೀಪ ಖರೀದಿಸಿ ಮಾರಾಟ ಮೇಳಗಳಿಗೆ ಕೊಂಡೊಯ್ಯುತ್ತಾರೆ’ ಎಂದು ಓಂಕಾರಪ್ಪ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ಕೋಟಿಗಾನಹಳ್ಳಿ, ಸಿದ್ದಾಪುರ, ದೊಡ್ಡೇರಿ, ಪಗಲಬಂಡೆ, ಬೆಳಗೆರೆ ನಾರಾಯಣಪುರ ಮುಂತಾದ ಗ್ರಾಮಗಳಲ್ಲಿ ಕುಂಬಾರಿಕೆ ವೃತ್ತಿಯವರು ಇತ್ತೀಚೆಗೆ ಮಣ್ಣಿನ ದೀಪ ತಯಾರಿಸುವುದನ್ನು ಕೈಬಿಟ್ಟಿದ್ದಾರೆ. ಹಬ್ಬ ಹರಿದಿನಗಳಲ್ಲಿ ಹೊರಗಿನಿಂದ ಅಚ್ಚು ದೀಪ ತರಿಸಿ ಮಾರಾಟ ಮಾಡುತ್ತಾರೆ. ಮೇಣದ ದೀಪ ಹಾಗೂ ಎಲೆಕ್ಟ್ರಿಕ್ ದೀಪದ ಬಳಕೆಯ ಪರಿಣಾಮ ಮಣ್ಣಿನ ದೀಪಕ್ಕೆ ಬೆಲೆ ಹಾಗೂ ಬೇಡಿಕೆ ಇಲ್ಲವಾಗಿದೆ.
‘ಕುಂಬಾರಿಕೆ ಮೂಲ ವೃತ್ತಿಯವರ ಬದಲಿಗೆ ಅರಿಶಿನ, ಕುಂಕುಮ, ಮಾರಾಟ ಮಾಡುವ ವರ್ತಕರು ಈಗೀಗ ದೀಪಗಳನ್ನೂ ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಕುಂಬಾರಿಕೆ ಮಾಡುವ ಜನರು ವೃತ್ತಿ ತೊರೆಯುತ್ತಿದ್ದಾರೆ’ ಎಂದು ಕುಂಬಾರಿಕೆ ವೃತ್ತಿ ನಿರತ ನಾರಾಯಣಪುರದ ತಿಪ್ಪೇಸ್ವಾಮಿ ಹೇಳಿದರು.
ಪೂರಕ ಮಾಹಿತಿ: ಕೊಂಡ್ಲಹಳ್ಳಿ ಜಯಪ್ರಕಾಶ್, ಶಿವಗಂಗಾ ಚಿತ್ತಯ್ಯ, ಸಾಂತೇನಹಳ್ಳಿ ಸಂದೇಶ್‌ಗೌಡ.
ಚಿಕ್ಕಜಾಜೂರು: ಮ್ಯಾಜಿಕ್ ದೀಪ ತಯಾರಿಸುವ ಪ್ರಭುದೇವ
ಸಮೀಪದ ಕಾಳಘಟ್ಟ ಗ್ರಾಮದ ಪ್ರಭುದೇವ ಮಣ್ಣಿನ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಅವರ ಕೈಯಿಂದ ತರಹೇವಾರಿ ದೀಪಗಳು ಮ್ಯಾಜಿಕ್ ಹ್ಯಾಂಗಿಂಗ್ ಹಣತೆಗಳು ಪಡಿಮೂಡುತ್ತವೆ. ಎಸ್‌ಎಸ್‌ಎಲ್‌ಸಿ ನಂತರ ಅವರು ರಾಮನಗರ ಹಾಗೂ ಶಿವಮೊಗ್ಗದಲ್ಲಿ ಕರಕುಶಲ ಕಲಾವಿದರ ಬಳಿ 14 ವರ್ಷ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ತರಬೇತಿ ಪಡೆದಿದ್ದರು. ನಂತರ ಸ್ವಗ್ರಾಮದಲ್ಲಿ ಕಾಯಕ ಮುಂದುವರಿಸಿದ್ದಾರೆ. ಪ್ರಭುದೇವ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯ ಅಲಂಕಾರಿಕ ವಿವಿಧ ವಿನ್ಯಾಸದ ಪ್ರಕೃತಿ ದೇವರುಗಳ ಕಲಾಕೃತಿಗಳು ಹಾಗೂ ಆರತಿ ತಟ್ಟೆ ಹಂಸ ನವಿಲು ಮಾದರಿಯ ದೀಪಗಳು ಅಡುಗೆ ಪಾತ್ರೆಗಳು ನೀರು ಕುಡಿಯುವ ಹಾಗೂ ಟೀ ಲೋಟಗಳು ನೀರಿನ ಬಾಟಲಿ ವಿಶೇಷವಾದ ಮ್ಯಾಜಿಕ್ ದೀಪಗಳನ್ನು ಹಾಗೂ ನೇತಾಡುವ (ಹ್ಯಾಂಗಿಗ್) ಮಾದರಿ ಸೇರಿದಂತೆ ವಿವಿಧ ಬಗೆಯ ದೀಪಗಳನ್ನು ತಯಾರಿಸುತ್ತಾರೆ. ‘ನಾವು ತಯಾರಿಸಿದ ವಸ್ತುಗಳಿಗೆ ಮೈಸೂರು ಬೆಂಗಳೂರು ಧಾರವಾಡ ಬೆಳಗಾವಿ ತುಮಕೂರು ಹುಬ್ಬಳ್ಳಿ ಅರಸಿಕೆರೆ ಕುಣಿಗಲ್ ಮೊದಲಾದ ಕಡೆಗಳಲ್ಲಿ ಬೇಡಿಕೆ ಇದ್ದು ನಮ್ಮ ಕಲಾಕೃತಿಗಳನ್ನು ಅಲ್ಲಿಗೆ ಕಳಿಸುತ್ತೇವೆ. ಅಲ್ಲದೆ ಕನ್ನಡ ಸಾಹಿತ್ಯ ಸಮ್ಮೇಳನ ಕೃಷಿ ಮೇಳ ಮತ್ತಿತರ ವಸ್ತು ಪ್ರದರ್ಶನಗಳಿಗೆ ನಾವು ತಯಾರಿಸುವ ಅಲಂಕಾರಿಕ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ. ದಸರಾ ದೀಪಾವಳಿ ಗೌರಿಹಬ್ಬ ಮೊದಲಾದ ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ವರ್ಷವಿಡೀ ತಯಾರಿಸಿ ಮಾರಾಟ ಮಾಡುತ್ತೇವೆ’ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಮೊ: 7483915091ಗೆ ಸಂಪರ್ಕಿಸಬಹುದು.
ವಿದ್ಯುತ್ ಬೆಳಗುವ ಹಣತೆ!
ಈಗ ದೀಪಕ್ಕೆ ಬತ್ತಿ ಹೊಸೆದು ಎಣ್ಣೆ ಹಾಕಿ ಹಚ್ಚಬೇಕಾಗಿಲ್ಲ. ಮಾಲ್‌ಗಳಲ್ಲಿ ಸಿಗುವ ಎಲೆಕ್ಟ್ರಿಕ್ ದೀಪಗಳನ್ನು ತಂದು ಪ್ಲಗ್ ಹಾಕಿದರೆ ಸಾಕು ಅವು ಹಾಳಾಗುವವರೆಗೂ ಉರಿಯುತ್ತಲೇ ಇರುತ್ತವೆ. ಕೆಲವರು ವಿದ್ಯುತ್ ದೀಪಾಲಂಕಾರದ ಮೂಲಕವೇ ದೀಪಾವಳಿ ಆಚರಣೆ ಮಾಡುತ್ತಿದ್ದಾರೆ. ಲೋಹ ಪಿಂಗಾಣಿ ದೀಪಗಳು ಈಗ ಎಲ್ಲೆಲ್ಲೂ ಮಾರಾಟವಾಗುತ್ತಿವೆ. ಬಹಳ ಕಡಿಮೆ ಬೆಲೆಗೆ ಆನ್‌ಲೈನ್‌ನಲ್ಲೂ ದೀಪಗಳು ಸಿಗುತ್ತಿವೆ. ಜೊತೆಗೆ ಸೂಪರ್ ಮಾರ್ಕೆಟ್ ಮಾಲ್‌ಗಳಲ್ಲಿ ಅಗ್ಗದ ದರಕ್ಕೆ ದೀಪಗಳು ದೊರೆಯುತ್ತಿರುವ ಕಾರಣ ಕುಂಬಾರರು ದೀಪ ತಯಾರಿಸುವುದನ್ನೇ ನಿಲ್ಲಿಸುವ ಹಂತಕ್ಕೆ ತಲುಪಿದ್ದಾರೆ. ‘ಏನೇ ಆಧುನಿಕತೆ ಬೆಳೆದಿದ್ದರೂ ಮಣ್ಣಿನ ದೀಪ ಹಚ್ಚಿ ಬೆಳಗುವಾಗ ಬರುವ ಭಕ್ತಿ ಯಾವ ವಿದ್ಯುತ್ ದೀಪಗಳಿಂದಲೂ ಬರುವುದಿಲ್ಲ. ಯುವಜನರು ನಮ್ಮ ಸಂಸ್ಕೃತಿ ಮರೆಯಬಾರದು. ಮತ್ತೆ ಮಣ್ಣಿನ ದೀಪಗಳತ್ತ ಹೊರಳಬೇಕು’ ಎಂದು ವಿದ್ಯಾನಗರದ ಗಂಗಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.