ADVERTISEMENT

ವಿಧಾನಪರಿಷತ್‌ ಚುನಾವಣೆ: ಬಿಜೆಪಿಯಿಂದ ಜನ ವಿರೋಧಿ ನೀತಿ- ಆಂಜನೇಯ

ಕಾಂಗ್ರೆಸ್‌ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 7:24 IST
Last Updated 28 ನವೆಂಬರ್ 2021, 7:24 IST
ಹೊಸದುರ್ಗದಲ್ಲಿ ಶನಿವಾರ ನಡೆದ ವಿಧಾನಪರಿಷತ್‌ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ್‌ ಪರ ಪ್ರಚಾರ ಸಭೆಯನ್ನು ಮಾಜಿ ಸಚಿವ ಎಚ್‌.ಆಂಜನೇಯ ಉದ್ಘಾಟಿಸಿದರು.
ಹೊಸದುರ್ಗದಲ್ಲಿ ಶನಿವಾರ ನಡೆದ ವಿಧಾನಪರಿಷತ್‌ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ್‌ ಪರ ಪ್ರಚಾರ ಸಭೆಯನ್ನು ಮಾಜಿ ಸಚಿವ ಎಚ್‌.ಆಂಜನೇಯ ಉದ್ಘಾಟಿಸಿದರು.   

ಹೊಸದುರ್ಗ: ‘ಒಬ್ಬರಿಗೆ ಒಂದು ಮನೆ ಕೊಡುವ ಯೋಗ್ಯತೆ ಬಿಜೆಪಿಗಿಲ್ಲ. ಸರ್ಕಾರ ಪಾಪರ್‌, ದಿವಾಳಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಕೊಳಕು ರಾಜಕಾರಣ ನಡೆಯುತ್ತಿದೆ’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಶನಿವಾರ ನಡೆದ ವಿಧಾನಪರಿಷತ್‌ ಚುನಾವಣಾ ಕಾಂಗ್ರೆಸ್‌ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕ್ಷೇತ್ರದ ಹಿಂದಿನ ಶಾಸಕ ಬಿ.ಜಿ.ಗೋವಿಂದಪ್ಪ ಶ್ರಮದ ಫಲ. ಚಿತ್ರದುರ್ಗ ಕಾಂಗ್ರೆಸ್‌ನ ಭದ್ರಕೋಟೆ. ಕೆಲವು ಕಾರಣಗಳಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸಿದ್ದರಿಂದ ಅನುಭವಿಸಿದ ಕಷ್ಟದ ಅರಿವು ಜನರಿಗಾಗಿದೆ. ಈಗಿನ ಜನವಿರೋಧಿ ಬಿಜೆಪಿ ಸರ್ಕಾರವನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮನೆಗೆ ಕಳಿಸುವ ಎಚ್ಚರಿಕೆಯ ದಿಕ್ಸೂಚಿ ವಿಧಾನಪರಿಷತ್‌ ಚುನಾವಣೆ ಆಗಬೇಕು' ಎಂದು ಮನವಿ ಮಾಡಿದರು.

ADVERTISEMENT

ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ‘ಹಿಂದಿನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದವು. ಆದರೆ, ನಮ್ಮ ಜನಪರ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳದ ಬಿಜೆಪಿಯವರು ಇಲ್ಲ ಸಲ್ಲದ ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರ ಬಂದರು. ಬಿಜೆಪಿ ಸರ್ಕಾರ ಗ್ರಾಮ ಸಭೆ ಅಧಿಕಾರ ಮೊಟಕುಗೊಳಿಸುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ತಂದುಕೊಟ್ಟ, ಚೆಕ್‌ ಬರೆಯುವ ಅಧಿಕಾರವನ್ನು ಅಧ್ಯಕ್ಷರಿಗೆ ಕೊಟ್ಟಿರುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಬಿ.ಸೋಮಶೇಖರ್‌ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಬಿ. ಸೋಮಶೇಖರ್‌, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಉಮಾಪತಿ, ತಿಪ್ಪೇಸ್ವಾಮಿ ಮಾತನಾಡಿದರು. ವಿಧಾನಪರಿಷತ್‌ ಮಾಜಿ ಸದಸ್ಯೆ ಜಯಮ್ಮ ಬಾಲರಾಜು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್‌, ಕಾರ್ಯಾಧ್ಯಕ್ಷ ಹಾಲೇಶ್‌ ಯಾದವ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್‌, ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್‌, ಅಲ್ತಾಫ್‌ ಪಾಷಾ, ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್‌, ಕೆ.ಅನಂತ್‌, ಬಸವರಾಜು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.