ADVERTISEMENT

ಚಿಕ್ಕಜಾಜೂರು: ಅಡಿಕೆ ಗಿಡಗಳಿಗೆ ಸುಣ್ಣ; ಹೆಚ್ಚಿದ ಬೇಡಿಕೆ

ಚಿಕ್ಕಜಾಜೂರು: ವಾರದ ಸಂತೆಯಲ್ಲಿ ಸುಣ್ಣ ಮಾರಾಟ

ಜೆ.ತಿಮ್ಮಪ್ಪ
Published 8 ಜನವರಿ 2026, 6:31 IST
Last Updated 8 ಜನವರಿ 2026, 6:31 IST
ಚಿಕ್ಕಜಾಜೂರಿನ ಸಂತೆ ಮೈದಾನದ ಮಾರ್ಗದ ರಸ್ತೆ ಬದಿಯಲ್ಲಿ ಸುಣ್ಣವನ್ನು ಮಾರಾಟ ಮಾಡುವ ವ್ಯಾಪಾರಿಗಳಿಂದ ಸುಣ್ಣದ ಚೀಲಗಳನ್ನು ಖರೀದಿಸುತ್ತಿರುವ ಗ್ರಾಹಕರು 
ಚಿಕ್ಕಜಾಜೂರಿನ ಸಂತೆ ಮೈದಾನದ ಮಾರ್ಗದ ರಸ್ತೆ ಬದಿಯಲ್ಲಿ ಸುಣ್ಣವನ್ನು ಮಾರಾಟ ಮಾಡುವ ವ್ಯಾಪಾರಿಗಳಿಂದ ಸುಣ್ಣದ ಚೀಲಗಳನ್ನು ಖರೀದಿಸುತ್ತಿರುವ ಗ್ರಾಹಕರು    

ಚಿಕ್ಕಜಾಜೂರು: ನವೆಂಬರ್‌ ಹಾಗೂ ಡಿಸೆಂಬರ್‌ ಬಂತೆಂದರೆ, ಅಡಿಕೆ ಬೆಳೆಗಾರರು ಅಡಿಕೆ ಗಿಡಗಳಿಗೆ ಸುಣ್ಣ ಬಳಿಯುವುದರಿಂದ ಸುಣ್ಣಕ್ಕಾಗಿ ಬೇಡಿಕೆ ಹೆಚ್ಚಿದೆ.

ಚಳಿಗಾಲ ಬಂತೆಂದರೆ ಎಲ್ಲ ಗಿಡ– ಮರಗಳಿಗೂ ಸೂಡರು ಆವರಿಸುತ್ತದೆ. ಎರಡು ವರ್ಷಗಳಿಂದ ಹಿಡಿದು 10 ವರ್ಷಗಳ ಅಡಿಕೆ ಗಿಡಗಳು ಈ ಸಮಯದಲ್ಲಿ ಬಿರುಕು ಕಾಣಿಸಿಕೊಂಡು, ಮುಂದೊಂದು ದಿನ ಆ ಗಿಡ ಗೊರಲು (ಬಿರುಕು) ಬಂದು ನಾಶವಾಗುತ್ತದೆ. ಚಳಿಗಾಲದಲ್ಲಿ ಅಡಿಕೆ ಗಿಡಗಳಿಗೆ ಎಷ್ಟೇ ನೀರುಣಿಸಿದರೂ, ಗಾಳಿಯ ಹೊಡೆತ ಹಾಗೂ ಬಿಸಿಲಿನ ತಾಪಕ್ಕೆ ಅಡಿಕೆ ಗಿಡಗಳ ಬುಡದಿಂದ ಮೇಲಿನವರೆಗೆ ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ.

ಆದ್ದರಿಂದ, ಅದರ ನಿಯಂತ್ರಣಕ್ಕೆ ರೈತರು ಅಡಿಕೆ ಗಿಡಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ರೈತರು ಕಲ್ಲು ಸುಣ್ಣವನ್ನು ಖರೀದಿಸಿ, ನೀರು ಹಾಕಿ ಕಲಸಿ, ಅದಕ್ಕೆ ಮೈದಾಹಿಟ್ಟು, ಬೆಲ್ಲ ಬೆರೆಸಿ ಗಿಡಗಳ ಬುಡದಿಂದ ಸುಮಾರು ಐದಾರು ಅಡಿಯವರೆಗೂ ಬಳಿಯುತ್ತಾರೆ. ಈ ರೀತಿ ಮಾಡುವುದರಿಂದ ಕಾಂಡಗಳಿಗೆ ಬಿಸಿಲಿನ ತಾಪವನ್ನು ಸಹಿಸುವ ಶಕ್ತಿಬರುತ್ತದೆ.

ADVERTISEMENT

ಎರಡು ತಿಂಗಳಿಂದ ಪ್ರತಿ ಸೋಮವಾರ ಚಿಕ್ಕಜಾಜೂರಿನ ವಾರದ ಸಂತೆಯಲ್ಲಿ ಸುಣ್ಣದ ಮಾರಾಟ ಜೋರಾಗಿ ನಡೆಯುತ್ತದೆ. ಸಮೀಪದ ದುಮ್ಮಿ ಗ್ರಾಮದ ಹತ್ತಾರು ವ್ಯಾಪಾರಿಗಳು ತಾವು ತಯಾರಿಸಿದ ಸುಣ್ಣವನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಗ್ರಾಮಸ್ಥರಷ್ಟೇ ಅಲ್ಲದೆ, ತಾಲ್ಲೂಕಿನ ವಿವಿಧ ಕಡೆಗಳಿಂದ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶಿವನಿ ಸುತ್ತಮುತ್ತಲಿನ ಗ್ರಾಮಗಳ ಅಡಿಕೆ ಬೆಳೆಗಾರರು ಬಂದು ಕಲ್ಲು ಸುಣ್ಣ ಖರೀದಿಸುತ್ತಿದ್ದಾರೆ.

ಅಡಿಕೆ ಬೆಳೆಗಾರರೇ ಆಸರೆ:

14ರಿಂದ 16 ಕೆ.ಜಿ ಸುಣ್ಣದ ಚೀಲಕ್ಕೆ ₹ 250ರಿಂದ ₹ 300ರ ದರ ಇದೆ. ದಶಕಗಳ ಹಿಂದೆ, ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಕಾರ್ಯಕ್ರಮಗಳು ನಡೆದರೆ ಪ್ರತಿ ಮನೆಯವರೂ, ದೇವಸ್ಥಾನದವರು ಸುಣ್ಣ  ಖರೀದಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ, ಆರ್‌ಸಿಸಿ ಮನೆಗಳಾಗಿರುವುದರಿಂದ ಸುಣ್ಣದ ಗೋಡೆಗಳೇ ಇಲ್ಲದಂತಾಗಿದೆ. ಅಲ್ಲದೆ, ದೇವಸ್ಥಾನಗಳಿಗೂ ಸುಣ್ಣವನ್ನು ಬಳಸುತ್ತಿಲ್ಲ. ಅಂತೆಯೇ ಸುಣ್ಣಕ್ಕೆ ಬೇಡಿಕೆ ಕಡಿಮೆಯಾಗಿದೆ. ಈಗ ಅಡಿಕೆ ಗಿಡಗಳಿಗೆ ಮಾತ್ರ ಸುಣ್ಣಕ್ಕೆ ಬೇಡಿಕೆ ಇದೆ ಎಂದು ಸುಣ್ಣಗಾರರು ಹೇಳುತ್ತಾರೆ.

ತಾಲ್ಲೂಕಿನ ದುಮ್ಮಿ ಗ್ರಾಮದ ಹೊರವಲಯದಲ್ಲಿ ಸುಣ್ಣ ತಯಾರಿಸುವ ಹಲವು ಕುಟುಂಬಗಳಿವೆ. ‘ಬೇರೆ ಕಡೆ ಖರೀದಿಸಿ ತಂದ ಕಲ್ಲನ್ನು, ಗುಮ್ಮಿನಲ್ಲಿ ಹಾಕಿ ಸುಡುತ್ತೇವೆ. ನಂತರ, ಗುಮ್ಮಿನಿಂದ ಸುಣ್ಣವನ್ನು ತೆಗೆದು ಸಂತೆಗಳಿಗೆ ತಂದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಒಂದು ವೇಳೆ ಅಡಿಕೆ ಬೆಳೆಗಾರರು ಸುಣ್ಣವನ್ನು ಖರೀದಿಸದಿದ್ದರೆ, ನಾವು ಬೇರೆ ವೃತ್ತಿಯನ್ನು ಅವಲಂಬಿಸಬೇಕಾಗಿತ್ತು’ ಎನ್ನುತ್ತಾರೆ ಸುಣ್ಣದ ತಯಾರಕರು ಹಾಗೂ ವ್ಯಾಪಾರಿಗಳಾದ ದುಮ್ಮಿ ಗ್ರಾಮದ ದೇವಣ್ಣ, ವಿಜಯಕುಮಾರ್‌.

ಚಿಕ್ಕಜಾಜೂರು ಸಮೀಪದ ಕಡೂರು ಗ್ರಾಮದ ನಿವೃತ್ತ ಶಿಕ್ಷಕ ರುದ್ರಪ್ಪ ಅವರು ತಮ್ಮ ತೋಟದ ಅಡಿಕೆ ಗಿಡಗಳಿಗೆ ಸುಣ್ಣ ಬಳಿಯುತ್ತಿರುವುದು  
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸುಣ್ಣ ಬಳಿಯುವುದರಿಂದ ಅಡಿಕೆ ಗಿಡಗಳು ಯಾವುದೇ ರೋಗ ಬಾರದೆ ಉತ್ತಮ ಬೆಳವಣಿಗೆ ಹೊಂದುತ್ತವೆ. ಜೊತೆಗೆ ಗಿಡಗಳ ಕಾಂಡ ಸದೃಢವಾಗಿ ಧೀರ್ಘ ಕಾಲದವರೆಗೆ ಬದುಕುತ್ತವೆ
ಜೆ. ಈಶ್ವರಪ್ಪ ಆಮ್ನಾಳ್ ಅಡಿಕೆ ಬೆಳೆಗಾರರು ಚಿಕ್ಕಜಾಜೂರು 

ಕ್ಲೋರೋ ಪೈರಿಪಸ್ ದ್ರಾವಣ ಬೆರೆಸಿ

ಚಳಿಗಾಲದಲ್ಲಿ ಅಡಿಕೆ ಮರಗಳಿಗೆ ಮಧ್ಯಾಹ್ನ 3 ಗಂಟೆ ನಂತರದಲ್ಲಿ ಸೂರ್ಯನ ಕಿರಣಗಳು ಬೀಳುವುದರಿಂದ ಗಿಡಗಳ ಕಾಂಡ ಕೆಂಪು ಬಣ್ಣಕ್ಕೆ ತಿರುಗಿ ಗಿಡಗಳು ಬಿರುಕು ಬಿಡುತ್ತವೆ. ಇದನ್ನು ತಡೆಗಟ್ಟಲು ಸುಣ್ಣದ ಜೊತೆಗೆ ಕ್ಲೋರೋ ಪೈರಿಪಸ್ ದ್ರಾವಣವನ್ನು ಲೀಟರ್ ಸುಣ್ಣದ ನೀರಿಗೆ 0.2 ಮಿಲಿ ಲೀಟರ್‌ನಷ್ಟು ಮಿಶ್ರಣ ಮಾಡಿ ಬಳಿದರೆ ಕಾಂಡಕೊರಕ ಕೀಟಗಳ ಬಾಧೆಯನ್ನು ತಡೆಗಟ್ಟಬಹುದು. – ಸಿ.ಟಿ. ಸಾಗರ್ ಸಹಾಯಕ ತೋಟಗಾರಿಕಾ ಅಧಿಕಾರಿ ಹೊಳಲ್ಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.