ADVERTISEMENT

₹ 50 ಲಕ್ಷ ವಿಮಾ ಸೌಲಭ್ಯಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 11:17 IST
Last Updated 7 ಆಗಸ್ಟ್ 2020, 11:17 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಕೊರೊನಾ ವಾರಿಯರ್ಸ್‌ ಮೃತಪಟ್ಟರೆ ಅವರ ಕುಟುಂಬಕ್ಕೆ ₹ 50 ಲಕ್ಷ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಧಾರದ ವಿರುದ್ಧ ಧಿಕ್ಕಾರ ಕೂಗಿದರು. ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ರವಾನಿಸಿದರು.

ಯೋಜನಾ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ಮಾಸಿಕ ₹ 21 ಸಾವಿರ ಕನಿಷ್ಠ ವೇತನ ನೀಡಬೇಕು. ನಿವೃತ್ತಿ ನಂತರ ಮಾಸಿಕ ಪಿಂಚಣಿಯಾಗಿ ₹ 10 ಸಾವಿರ ನಿಗದಿಪಡಿಸಬೇಕು. ಎಲ್ಲಾ ಕಾರ್ಮಿಕರಿಗೂ ಇಎಸ್ಐ, ಪಿಎಫ್ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಎಲ್ಲ ಬಡ ಕುಟುಂಬಗಳಿಗೆ ಮುಂದಿನ 6 ತಿಂಗಳವರೆಗೆ ಮಾಸಿಕ ₹ 7,500 ಸಹಾಯಧನ ನೀಡಬೇಕು. ಉಚಿತ ಪಡಿತರದ ಜತೆಗೆ ಕೆಲಸ ಮತ್ತು ಆದಾಯ ಖಾತ್ರಿಗೊಳಿಸಬೇಕು. ಬಿಸಿಯೂಟ ನೌಕರರ ಬಾಕಿ ವೇತನ ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಕಾರ್ಯಕರ್ತರು, ಮಧ್ಯಾಹ್ನದ ಬಿಸಿಯೂಟ ಸಿಬ್ಬಂದಿ ಸೇವೆಗಳನ್ನು ಖಾಸಗಿಕರಣಗೊಳಿಸುವ ಪ್ರಸ್ತಾವ ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗಿಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕೋವಿಡ್ ಕರ್ತವ್ಯನಿರತ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸುರಕ್ಷತಾ ಸಾಧನ ನೀಡಬೇಕು. ಕಂಟೈನ್‌ಮೆಂಟ್ ವಲಯದಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್ ನೀಡಬೇಕು. ಇವರೆಲ್ಲರ ಆರೋಗ್ಯ ತಪಾಸಣೆಯನ್ನು ಆಗಿಂದಾಗ್ಗೆ ಉಚಿತವಾಗಿ ಮಾಡಿಸಬೇಕು. ಆರೋಗ್ಯ ಸಮಸ್ಯೆ ಹಾಗೂ 60 ವರ್ಷದವರಿಗೆ ಕೊರೊನಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಐವರು ಅಂಗನವಾಡಿ, ಇಬ್ಬರು ಆಶಾ ಕಾರ್ಯಕರ್ತೆಯರು ಈಗಾಗಲೇ ಮೃತಪಟ್ಟಿದ್ದಾರೆ. ಸುಮಾರು 35 ಜನರು ಸೋಂಕಿತರಾಗಿದ್ದಾರೆ. ಕೆಲಸದ ಒತ್ತಡದಿಂದ 23 ಜನ ನೌಕರರು ನಿಧನರಾಗಿದ್ದಾರೆ. ಇವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿದರು.

ಸಂಘಟನೆಯ ಮುಖ್ಯಸ್ಥರಾದ ಎಸ್.ವರಲಕ್ಷ್ಮಿ, ಎಂ.ಜಯಮ್ಮ, ಜಿ.ಶಿವಶಂಕರ್, ನಾಗಲಕ್ಷ್ಮಿ, ಮಾಲಿನಿ ಮೇಸ್ತಾ, ಎನ್.ಶಿವಣ್ಣ, ನಾಗರತ್ನ, ರಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.