ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯ ವ್ಯವಸಾಯೋತ್ಪನ್ನ ಸಹಕಾರ ಬ್ಯಾಂಕ್ ( ವಿಎಸ್‌ಎಸ್‌ಎನ್ ಬ್ಯಾಂಕ್)ನಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ಜನ ಕಟ್ಟಿರುವ ಪಿಗ್ಮಿ ಹಣವನ್ನು ಬಿಟ್ಟುಕೊಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
2 ವರ್ಷಗಳಿಂದ ಪಿಗ್ಮಿ ಹಣ ವಾಪಸ್ ಕೇಳಿದರೆ ಇಂದು, ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ. ಬ್ಯಾಂಕ್‌ನ ಕೆಲ ಸಿಬ್ಬಂದಿ ಹಣವನ್ನು ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ. ಕೆಲ ಸಿಬ್ಬಂದಿ ಬ್ಯಾಂಕ್ ತೊರೆದು ಹೊರ ಹೋಗಿರುವುದು ಸಮಸ್ಯೆ ಹೆಚ್ಚು ಮಾಡಿದೆ ಎಂದು ದೂರಿದರು.
ಸಿಬ್ಬಂದಿ ಸಾಲವನ್ನು ತಮಗೆ ಬೇಕಾದವರ ಹೆಸರಿಗೆ ತೆಗೆದುಕೊಂಡು ಮರು ಪಾವತಿ ಮಾಡಿಲ್ಲ. ಇದರಿಂದ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿನಲ್ಲಿದ್ದು ಮರುಪಾವತಿ ನಿಲ್ಲಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ, ಬ್ಯಾಂಕ್ ಆಡಳಿತ ಮಂಡಳಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.
ಅವ್ಯವಹಾರ ಗಮನಕ್ಕೆ ಬಂದಿದ್ದು, ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ತನಿಖೆ ನಂತರ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ, ತನಿಖೆ ವಿಳಂಬವಾಗುತ್ತಿದೆ. ಇದರಿಂದ ಗ್ರಾಹಕರಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಮಲ್ಲೇಶಪ್ಪ ಹೇಳಿದರು.
ದಿನಗೂಲಿ ಮಾಡಿ ಉಳಿತಾಯಕ್ಕಾಗಿ ಬ್ಯಾಂಕ್‌ಗೆ ಹಣ ಕಟ್ಟಿದರೆ ಈ ಸ್ಥಿತಿ ಎದುರಾಗಿದೆ. ನಮ್ಮ ಸಮಸ್ಯೆಯನ್ನು ಯಾರೂ ಆಲಿಸುತ್ತಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ. ಒಂದೆರೆಡು ದಿನ ನೋಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಹಣ ವಾಪಾಸ್ ನೀಡುವ ತನಕ ವಾಪಾಸ್ ಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ತಿಪ್ಪೇಸ್ವಾಮಿ, ತಿಪ್ಪಕ್ಜ, ಮಂಜಮ್ಮ, ಜಯಮ್ಮ, ಸುವರ್ಣಮ್ಮ, ಸೌಜನ್ಯ, ರುಕ್ಷ್ಮಿಣಮ್ಮ ರೇಣುಕಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.