ADVERTISEMENT

ಹಿರಿಯೂರು: ಮಾರ್ಗ ಮಧ್ಯೆ ಮಳೆಹಾನಿ ಸಂತ್ರಸ್ತರ ಅಳಲು ಆಲಿಸಿದ ಬಿ.ಸಿ. ಪಾಟೀಲ್

ಮಳೆಹಾನಿ ಪರಿಶೀಲನೆ ನಿಮಿಷಗಳಲ್ಲಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:56 IST
Last Updated 7 ಸೆಪ್ಟೆಂಬರ್ 2022, 3:56 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹಿರಿಯೂರು: ವೇದಾವತಿ ನದಿ ಪ್ರವಾಹ ಸಂತ್ರಸ್ತರ ಅಳಲು ಆಲಿಸಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಪ್ರವಾಸ ಅಧಿಕಾರಿಗಳ ಭೇಟಿಗೆ ಸೀಮಿತವಾಯಿತು. ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಕೆಲ ಮನೆಗಳಿಗೆ ಭೇಟಿ ನೀಡಿ ಪ್ರಯಾಣ ಮುಂದುವರಿಸಿದರು.

ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಚಿವರು, ಮಂಗಳವಾರ ರಾತ್ರಿ ಹಿರಿಯೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮುಂದಾದರು. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಧಾವಿಸಿದ್ದರು.

ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಕೆಲ ಹೊತ್ತು ಚರ್ಚಿಸಿದರು. ಸೇತುವೆ ಸಮೀಪ ಜಲಾವೃತಗೊಂಡಿದ್ದ ಕೆಲ ಮನೆಗಳಿಗೆ ತೆರಳಿದರು. ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವಂತೆ ನಿವಾಸಿಗಳಿಗೆ ಸೂಚಿಸಿದರು. ಮಳೆಯಲ್ಲಿ ಕೆಲ ಹೊತ್ತು ಜನರ ಸಮಸ್ಯೆ ಆಲಿಸಿದರು. ಈ ವೇಳೆ ಶಾಸಕಿ ಕೆ.ಪೂರ್ಣಿಮಾ ಇದ್ದರು.

ADVERTISEMENT

50,136 ಹೆಕ್ಟೇರ್ ಬೆಳೆ ಹಾನಿ: ‘ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಐದು ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, 32 ಮನೆಗಳು ತೀವ್ರತರವಾಗಿ ಹಾನಿಗೊಳಗಾಗಿವೆ. ಹಾನಿಗೊಳಗಾದ ಮನೆಗಳಿಗೆ ಈಗಾಗಲೇ ₹ 2.7 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ‌. 8 ಜಾನುವಾರುಗಳಿಗೆ ಜೀವಹಾನಿಯಾಗಿದೆ. ಈ ಸಂಬಂಧ ಈಗಾಗಲೇ ಪರಿಹಾರ ನೀಡಲಾಗಿದೆ. ವಿ.ವಿ. ಸಾಗರ ಜಲಾಶಯ 89 ವರ್ಷಗಳ ನಂತರ ಗರಿಷ್ಠ ಮಟ್ಟ ತಲುಪಿದೆ. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈ ಪ್ರದೇಶದ ಜನರಿಗೆ ಕಾಳಜಿ ಕೇಂದ್ರ ಪ್ರಾರಂಭ ಮಾಡಿ ಆಶ್ರಯ ನೀಡಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ 50,136 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ. ಈಗಾಗಲೇ ಜಂಟಿ ಸಮೀಕ್ಷೆ ಮುಕ್ತಾಯವಾಗಿದ್ದು, ಪರಿಹಾರಕ್ಕೆ ನೋಂದಣಿ ಮಾಡಿ ಸೆ.12 ರೊಳಗೆ ಪರಿಹಾರ ಬಿಡುಗಡೆ ಮಾಡಲಾಗುವುದು. ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಜಿಲ್ಲೆಗೆ ಸೆ.7 ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್ ಕುಮಾರ್, ಹಿರಿಯೂರು ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.