
ಚಿತ್ರದುರ್ಗ: ‘ರಾಜ್ಯದಲ್ಲೇ 2ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನ ಭೀಮಸಮುದ್ರ ಕೆರೆ ಅಕ್ರಮ ಮಣ್ಣು ದಂಧೆಯಿಂದ ನಲುಗುತ್ತಿದೆ. ಎಲ್ಲೆಂದರಲ್ಲಿ ಕೆರೆಯ ಒಡಲು ಬಗೆದು ಜಿಲ್ಲೆ, ಹೊರ ಜಿಲ್ಲೆಗಳಿಗೆ ಮಣ್ಣು ಸಾಗಿಸುತ್ತಿರುವುದು ಕೆರೆಯ ಪರಿಸರವನ್ನು ಹಾಳುಗೆಡುವುತ್ತಿದೆ’ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಸೂಳೆಕೆರೆ ದೇಶದಲ್ಲೇ ಅತಿದೊಡ್ಡ ಕೆರೆ ಎಂಬ ಪ್ರಸಿದ್ಧಿ ಪಡೆದಿದೆ. ಇದರ ನಂತರದ ಸ್ಥಾನದಲ್ಲಿರುವ ಭೀಮಸಮುದ್ರ ಕೆರೆ 4,500 ಎಕರೆ ವಿಸ್ತೀರ್ಣ ಹೊಂದಿದೆ. ಭೀಮಸಮುದ್ರದಿಂದ ಅಮೃತಪುರ ಗ್ರಾಮದವರೆಗೂ ವ್ಯಾಪಿಸಿರುವ ಕೆರೆಯಂಗಳ 8 ಕಿ.ಮೀ ವ್ಯಾಪ್ತಿ ಹೊಂದಿದೆ. ಕೆರೆಯ ಬಹುಭಾಗದಲ್ಲಿ ನೀರು ತುಂಬಿದ್ದು ಖಾಲಿ ಇರುವ ಭಾಗದಲ್ಲಿ ಅನಧಿಕೃತವಾಗಿ ಮಣ್ಣು ಸಾಗಿಸುತ್ತಿರುವುದು ರೈತರನ್ನು ಕಂಗೆಡಿಸಿದೆ.
ಕಳೆದೆರಡು ವರ್ಷಗಳಿಂದ ಜೆಸಿಬಿ, ಹಿಟಾಚಿ ಬಳಸಿ ಮಣ್ಣು ಬಗೆದು ನೂರಾರು ಲಾರಿ, ಟಿಪ್ಪರ್‌ಗಳಲ್ಲಿ ಮಣ್ಣು ಸಾಗಿಸಲಾಗುತ್ತಿದೆ. ಪ್ರತಿ ಟಿಪ್ಪರ್‌ನಲ್ಲಿ 40–50 ಟನ್ ಮಣ್ಣು ಹೊರಗೆ ಹೋಗುತ್ತಿದೆ. ಭೀಮಸಮುದ್ರ ಗ್ರಾಮಸ್ಥರು ಈಗಾಗಲೇ ಗಣಿ ಲಾರಿಗಳ ದೂಳಿನಿಂದ ಕಂಗಾಲಾಗಿದ್ದಾರೆ. ಇತ್ತೀಚೆಗೆ ಮಣ್ಣು ತುಂಬಿದ ಲಾರಿಗಳ ಓಡಾಟವೂ ಹೆಚ್ಚಾಗುತ್ತಿದ್ದು ಸ್ಥಳೀಯರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ದೂಳು ಜನರ ಶ್ವಾಸಕೋಶ ಸೇರುತ್ತಿದೆ.
‘ರೈತರು ತಮ್ಮ ಜಮೀನಿಗೆ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಕೊಂಡೊಯ್ದರೆ ನಮಗೆ ಯಾವುದೇ ಅಡ್ಡಿ ಇಲ್ಲ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೆರೆಯ ಮಣ್ಣನ್ನು ಹೊರಜಿಲ್ಲೆಗಳಿಗೆ ಮಾರಿಕೊಳ್ಳುತ್ತಿವೆ. ಬೆಂಗಳೂರು, ರಾಣೆಬೆನ್ನೂರುವರೆಗೂ ನಮ್ಮ ಕೆರೆಯ ಮಣ್ಣು ಹೋಗುತ್ತಿದೆ. ಇದಕ್ಕೆ ಯಾರ ಅನುಮತಿಯನ್ನೂ ಪಡೆದಿಲ್ಲ. ಅಧಿಕಾರಿಗಳೂ ಶಾಮೀಲಾಗಿರುವ ಅನುಮಾನವಿದೆ. ಎಲ್ಲೆಂದರಲ್ಲಿ ಆಳವಾದ ಗುಂಡಿ ಮಾಡಿರುವ ಕಾರಣ ಕೆರೆ ಪರಿಸರ ಹಾಳಾಗುತ್ತಿದೆ’ ಎಂದು ಭೀಮಸಮುದ್ರ ಗ್ರಾಮಸ್ಥರು ಆರೋಪಿಸಿದರು.
ಕ್ರಮ ಕೈಗೊಳ್ಳದ ಅಧಿಕಾರಿಗಳು: ಕೆಲ ಕಿಡಿಗೇಡಿಗಳು ಭೀಮಸಮುದ್ರ ಕೆರೆ ಮಣ್ಣು ಮಾರಾಟವನ್ನು ದಂಧೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ರೈತಸಂಘದ ಭೀಮಸಮುದ್ರ ಗ್ರಾಮ ಘಟಕದ ಪದಾಧಿಕಾರಿಗಳು ದೂರು ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ, ತಹಶೀಲ್ದಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ. ಆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಅನುಮಾನ ಮೂಡಿಸಿದೆ.
ಕೆರೆಯು ಬೃಹತ್ ವ್ಯಾಪ್ತಿ ಹೊಂದಿರುವ ಕಾರಣ ಕರ್ನಾಟಕ ನೀರಾವರಿ ನಿಗಮದ (ಕೆಎನ್‌ಎನ್‌ಎಲ್) ವ್ಯಾಪ್ತಿಗೆ ಸೇರಿದೆ. ರೈತಸಂಘದ ಪದಾಧಿಕಾರಿಗಳು ನಿಗಮದ ಅಧಿಕಾರಿಗಳಿಗೂ ದೂರು ನೀಡಿದ್ದಾರೆ. ಭೀಮಸಮುದ್ರದ ಸುತ್ತಮುತ್ತ ಹಲವು ಗಣಿ ಕಂಪನಿಗಳು ಕಬ್ಬಿಣದ ಅದಿರು ತೆಗೆಯುತ್ತಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೂ ಈ ಭಾಗದ ಕಡೆಗೆ ನಿಗಾ ವಹಿಸಿದ್ದಾರೆ. ರೈತರು ಹಲವು ಬಾರಿ ಮನವಿ ಸಲ್ಲಿಸಿದರೂ ಗಣಿ ಅಧಿಕಾರಿಗಳು ಕೆರೆ ಪರಿಶೀಲನೆ ಮಾಡಿಲ್ಲ.
‘ಹೊರಜಿಲ್ಲೆಗಳ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನವಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಕೆರೆಯೊಳಗೆ ವಿವಿಧೆಡೆ ದಾರಿ ಮಾಡಿಕೊಂಡಿರುವ ಕಾರಣ ಇಡೀ ಕೆರೆಯ ಪರಿಸರ ಹಾಳಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಭೀಮಸಮುದ್ರ ಕೆರೆ ಉಳಿಸಬೇಕು’ ಎಂದು ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಶಂಕರ ಮೂರ್ತಿ ಒತ್ತಾಯಿಸಿದರು.
ಭೀಮಸಮುದ್ರ ಕೆರೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅಕ್ರಮವಾಗಿ ಮಣ್ಣು ತೆಗೆದಿದ್ದರೆ ಕ್ರಮ ಜರುಗಿಸಲಾಗುವುದುಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಎಫ್‌ಐಆರ್ ದಾಖಲು ಮಾಡಲು ಆಗ್ರಹ
‘ಭೀಮಸಮುದ್ರ ಕೆರೆಯಲ್ಲಿ ಅನಧಿಕೃತವಾಗಿ ಮಣ್ಣು ತೆಗೆದು ಮಾರಾಟ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ವಾರದೊಳಗೆ ಮಣ್ಣು ತೆಗೆಯುವುದನ್ನು ತಡೆಯದಿದ್ದರೆ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ ಎಚ್ಚರಿಕೆ ನೀಡಿದರು. ‘ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಣ್ಣು ತೆಗೆಯುತ್ತಿರುವ ಜೆಸಿಬಿ ಸೇರಿದಂತೆ ವಿವಿಧ ಯಂತ್ರೋಪಕರಣಗಳು ಲಾರಿ ಟಿಪ್ಪರ್‌ಗಳನ್ನು ಜಪ್ತಿ ಮಾಡಬೇಕು’ ಎಂದು ರೈತ ಮುಖಂಡ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.