ADVERTISEMENT

ಭರವಸೆಯಲ್ಲಿ ಜನರನ್ನು ಮುಳುಗಿಸಿದ ಬಿಜೆಪಿ: ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 9:17 IST
Last Updated 28 ಸೆಪ್ಟೆಂಬರ್ 2020, 9:17 IST
ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿದರು
ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿದರು   

ಮೊಳಕಾಲ್ಮುರು: ಅಧಿಕಾರಕ್ಕಾಗಿ ಇಲ್ಲಸಲ್ಲದ ಭರವಸೆಗಳನ್ನು ನೀಡಿ, ನಿರಂತರವಾಗಿ ಬಿಜೆಪಿ ಜನರಿಗೆ ಮೋಸ ಮಾಡುತ್ತಾ ಬಂದಿದೆ. ಇನ್ನಾದರೂ ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಕಿವಿಮಾತು ಹೇಳಿದರು.

ತಾಲ್ಲೂಕಿನ ರಾಯಪುರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನೂರಾರು ಜನ ಕಾಂಗ್ರೆಸ್‌ನಲ್ಲಿ ಇದ್ದಾರೆ. ಆದರೆ, ಬಿಜೆಪಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೇ ಬರೀ ದೇಶಪ್ರೇಮ ಎಂದು ಸುಳ್ಳು ಸುಳ್ಳಾಗಿ ಬಿಂಬಿಸುವ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿದೆ. ಇದನ್ನು ಚುನಾವಣೆ ಅಸ್ತ್ರವಾಗಿ ಮಾಡಿಕೊಂಡಿದೆ ಎಂದು ದೂರಿದರು.

ADVERTISEMENT

‘ನಾನು ಹಿಂದಿನ ಅವಧಿಯಲ್ಲಿ ಈ ಕ್ಷೇತ್ರದ ಶಾಸಕನಾಗಿದ್ದಾಗ ಮಂಜೂರು ಮಾಡಿಸಿದ್ದ ತುಂಗಭದ್ರಾ ಹಿನ್ನೀರು ಯೋಜನೆ, ಮಿನಿ ವಿಧಾನಸೌಧ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆ ತುಂಬಿಸುವುದು, ಸರ್ಕಾರಿ ವಸತಿಶಾಲೆ, ಐಟಿಐ ಕಾಲೇಜು ಕಾರ್ಯಗಳನ್ನು ಈಗಿನ ಶಾಸಕರಾದ ಬಿ.ಶ್ರೀರಾಮುಲು ತಮ್ಮ ಶ್ರಮದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಕಾರ್ಯಕರ್ತರು ಜನರಲ್ಲಿ ಮನವರಿಕೆ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಗಟ್ಟಿಗೊಳಿಸಲು ಸಹಕಾರ ನೀಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಯೋಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಟೇಲ್ ಪಾಪನಾಯಕ, ಮಾಜಿ ಸದಸ್ಯ ಕೆ.ಜಗಳೂರಯ್ಯ, ಮುಖಂಡ ವೈ.ಡಿ.ಬಸವರಾಜ್ ಮಾತನಾಡಿದರು.

ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸಿ.ಭಕ್ತಪ್ರಹ್ಲಾದ್, ಜಿ.ಎನ್.ಜಗದೀಶ್, ಜಿ.ಪಿ.ಸುರೇಶ್, ಶರಣಪ್ಪ, ವೇಮಣ್ಣ, ಮಲ್ಲಿಕಾರ್ಜುನ್ ಇದ್ದರು. 80ಕ್ಕೂ ಹೆಚ್ಚು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.