
ಹೊಳಲ್ಕೆರೆ: ಕ್ಷೇತ್ರದ ಗಡಿ ಗ್ರಾಮಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇನೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಮಂಗಳವಾರ ಆಂಜನೇಯಸ್ವಾಮಿಯ ನೂತನ ರಜತ ವಿಗ್ರಹ ಪ್ರತಿಷ್ಠಾಪನೆ ಹಾಗೂ ಪನರ್ ನವೀಕರಣಗಂಡ ಐತಿಹಾಸಿಕ ಕನ್ನಿಕೆಯರ ಕಲ್ಯಾಣಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮದಲ್ಲಿ ಅವಸಾನದ ಅಂಚಿನಲ್ಲಿದ್ದ ಪುಷ್ಕರಣಿಯನ್ನು 14 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಹಾಳು ಬಾವಿಯಂತಿದ್ದ ಕಲ್ಯಾಣಿಗೆ ಕಾಯಕಲ್ಪ ನೀಡಲಾಗಿದ್ದು, ಸುಂದರವಾಗಿ ಕಂಗೊಳಿಸುತ್ತಿದೆ. ಈ ಭಾಗ ತಾಲ್ಲೂಕು ಕೇಂದ್ರದಿಂದ ದೂರವಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಆದ್ದರಿಂದ ಪಕ್ಕದ ಎನ್.ಜಿ. ಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿ, ಸುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಉಚಿತ ಬಸ್ ನೀಡಲಾಗುವುದು. ತಾಲ್ಲೂಕಿಗೆ 13 ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದರು.
‘ರಾಜಕಾರಣಿಗಳಿಗೆ ಬದ್ಧತೆ ಇದ್ದರೆ ಮಾತ್ರ ಉತ್ತಮ ಕೆಲಸಗಳು ಆಗುತ್ತವೆ. ಶಾಸಕ ಎಂ.ಚಂದ್ರಪ್ಪ ಅವರ ಕರ್ತವ್ಯ ಪ್ರಜ್ಞೆಯಿಂದ ಈಗ ಗ್ರಾಮಕ್ಕೆ ಬಸ್ ಬರುತ್ತಿದೆ. ಕಷ್ಟಕ್ಕೆ ನೆರವಾದವರನ್ನು ಎಂದಿಗೂ ಮರೆಯಬಾರದು’ ಎಂದು ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಡಿ.ಬಿ. ಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ. ಗಂಗಾಧರ್, ಗ್ರಾಮ ಪಂಚಾಯತಿ ಅಧ್ಯಕ್ಷ ದಾನವೇoದ್ರ ದಾನೇಶ್, ನುಲೇನೂರು ಶೇಖರ್, ಉಮಾಪತಿ, ಹನುಮಂತಪ್ಪ, ಹಳ್ಳಪ್ಪ, ಶಶಿಧರ್, ಶಾಂತಕುಮಾರ್, ಯಶೋಧಮ್ಮ, ಆಶಾ ಕುಮಾರ್, ಮಜುನಾಥ, ಲಲಿತಮ್ಮ, ಶಿವಮೂರ್ತಿ ಹಾಗೂ ಗ್ರಾಮಸ್ಥರು ಇದ್ದರು.
ಬಂಗಾರದ ಬೆಲೆ ಗಗನಕ್ಕೇರಿದ್ದು, ಬಡವರು, ಮಧ್ಯಮ ವರ್ಗದವರು ಮದುವೆಗೆ ತಾಳಿ ಖರೀದಿಸುವುದೂ ಕಷ್ಟವಾಗಿದೆ. ಆದ್ದರಿಂದ ಸಾಮೂಹಿಕ ವಿವಾಹ ಏರ್ಪಡಿಸಿ ಬಂಗಾರದ ತಾಳಿ ಬದಲಿಗೆ ಅರಿಶಿಣ ಕೊಂಬನ್ನು ಕಟ್ಟಿಸಿ ಎಂದು ಭಕ್ತರು ಕೋರುತ್ತಿದ್ದಾರೆ.-ಈಶ್ವರಾನಂದ ಪುರಿ ಸ್ವಾಮೀಜಿ, ಕನಕ ಗುರುಪೀಠ, ಕೆಲ್ಲೋಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.