ADVERTISEMENT

ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸಿ.ಕೆ.ಮಹೇಶ್ ಹೇಳಿಕೆ

ಮುರುಘಾ ಶ್ರೀ ಪೀಠ ತ್ಯಾಗಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 10:18 IST
Last Updated 29 ಆಗಸ್ಟ್ 2022, 10:18 IST
 ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸಿ.ಕೆ.ಮಹೇಶ್
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸಿ.ಕೆ.ಮಹೇಶ್   

ಚಿತ್ರದುರ್ಗ: ಮಕ್ಕಳಿಗೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಕೂಡಲೇ ಪೀಠ ತ್ಯಾಗ ಮಾಡಿ, ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಸಿ.ಕೆ.ಮಹೇಶ್ ಆಗ್ರಹಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಮುರುಘಾ ಶ್ರೀಗಳು ತಮ್ಮ ಮೇಲೆ ಬಂದಿರುವ ಆರೋಪವನ್ನು ಬುದ್ಧ, ಏಸು, ಸಾಕ್ರಟೀಸ್ ಮತ್ತು ಬಸವಣ್ಣನ ಮೇಲೆ ಬಂದ ಆರೋಪಗಳೊಂದಿಗೆ ಸಮೀಕರಿಸಿಕೊಂಡು ತಾವೂ ಆ ಮಹಾ ಚೇತನಗಳಷ್ಟೇ ಪ್ರಧಾನರೆಂದು ಬಿಂಬಿಸಿಕೊಂಡಿದ್ದಾರೆ. ಬುದ್ಧ, ಏಸು ಮತ್ತಿತರೇ ಮಹಾಪುರುಷರ ಮೇಲೆ ಆರೋಪ ಬಂದಾಗ ಆ ಎಲ್ಲರೂ ಸ್ವಯಂ ಸ್ಫೂರ್ತಿಯಲ್ಲಿ ತನಿಖೆಗೆ ಒಳಪಟ್ಟಿದ್ದರು. ಅವರಂತೆ ಮುರುಘಾ ಶ್ರೀಗಳು ತನಿಖೆಗೆ ಒಳಪಡಲಿ. ಅದಕ್ಕಾಗಿ ತನಿಖೆ ಮುಗಿಯುವವರೆಗೆ ಪ್ರಭಾವಶಾಲಿಯಾದ ತಮ್ಮ ಪೀಠದಿಂದ ದೂರವಿರಲಿ ಎಂದು ಒತ್ತಾಯಿಸಿದರು.

ಆರೋಪ ಅತ್ಯಂತ ಗಂಭೀರ ಸ್ವರೂಪವಾಗಿರುವುದರಿಂದ ದಕ್ಷ, ಪ್ರಾಮಾಣಿಕ, ನೈತಿಕ, ಜಾತ್ಯಾತೀತ ಮತ್ತು ಶುದ್ಧ ನ್ಯಾಯಪರತೆಯ ವ್ಯಕ್ತಿತ್ವ ಉಳ್ಳವರ ತಂಡದಿಂದ ತನಿಖೆ ನಡೆಯಬೇಕು. ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಮುರುಘಾ ಶ್ರೀಗಳ ಮಾತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಆದ್ದರಿಂದ ಶ್ರಿಗಳ ಈ ಮಾತನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ವ್ಯಾಪ್ತಿಗೆ ಒಳಪಡಿಸಬೇಕು ಎಂದ ಅವರು, ಸಂತ್ರಸ್ಥ ಬಾಲಕಿಯರಿಗೆ ಸೂಕ್ತವಾದ ರಕ್ಷಣೆ ಕೊಡುವ ಅಗತ್ಯವಿದೆ ಎಂದು ಹೇಳಿದರು.

ADVERTISEMENT

ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷರಾದ ಡಿ.ದುರ್ಗೇಶ್, ರಾಮುಗೋಸಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ಜಿಲ್ಲಾ ಖಜಾಂಚಿ ಆರ್.ರಾಮಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.