ಪ್ರಾತಿನಿಧಿಕ ಚಿತ್ರ
ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆ.15 ರಿಂದ ಎಂಡೋಸ್ಕೋಫಿ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕಗಳು ಆರಂಭವಾಗಲಿವೆ. ಈಗಾಗಲೇ ಎಂಡೋಸ್ಕೋಫಿ ಉಪಕರಣಗಳು ಬಂದಿದ್ದು, ಇವುಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆಯಾಗಿದ್ದು, ತಜ್ಞ ವೈದ್ಯರನ್ನು ನೇಮಿಸಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
‘ಹುಬ್ಬಳ್ಳಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ 15 ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿಯೇ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಉಸಿರಾಟ ತೊಂದರೆ ಇರುವ ರೋಗಿಗಳ ಚಿಕಿತ್ಸೆಗಾಗಿ 10 ಬೆಡ್‍ಗಳ ವೆಂಟಿಲೇಟರ್ ಸೇವೆಯನ್ನೂ ಆರಂಭಿಸಲಾಗಿದೆ. ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಉನ್ನತ ಚಿಕಿತ್ಸೆ ನೀಡಲು ಅನುವಾಗುವಂತೆ ತಲಾ 50 ಹಾಸಿಗೆ ಸಾಮರ್ಥ್ಯವುಳ್ಳ ಕ್ರಿಟಿಕಲ್ ಕೇರ್ ಯುನಿಟ್ ಮತ್ತು ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶೀಘ್ರದಲ್ಲೇ ಜಿಲ್ಲಾ ಕೇಂದ್ರಿಕೃತ ಸಾರ್ವಜನಿಕ ಲ್ಯಾಬ್ ಸ್ಥಾಪನೆ ಮಾಡಲಾಗುವುದು. ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ವಿಭಾಗದಿಂದ ಪ್ರತಿದಿನ ನೂರಾರು ರೋಗಿಗಳಿಗೆ ಉಚಿತವಾಗಿ ಎಕ್ಸ್ ರೇ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರತಿ ತಿಂಗಳು 50,000 ಕ್ಕೂ ಹೆಚ್ಚು ರಕ್ತ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.