ಹಳೆಟೌನ್ ವೆಂಕಟೇಶಪ್ಪ ಕೋಟ್ – ೩ ನಿರ್ಮಿಸಿರುವ ಶೌಚಾಲಯಗಳು ನೆಪಕ್ಕೆ ಮಾತ್ರ ಇವೆ. ಹೊರತು ಬಳಕೆಗೆ ಯೋಗ್ಯವಾಗಿಲ್ಲ. ಸಮರ್ಪಕ ನೀರು ಹಾಗೂ ಸ್ವಚ್ಚತೆ ಇಲ್ಲ. ಕೆಲವು ಮುಳ್ಳುಗಿಡಗಳಿಂದ ಮುಚ್ಚಿ ಹೋಗಿವೆ. ಇನ. ಚಳ್ಳಕೆರೆಯ ಪಾದಗಟ್ಟೆ ಬಳಿ ನಗರಸಭೆಯಿಂದ ನಿಮಿಸಿರುವ ಮಹಿಳಾ ಶೌಚಾಲಯದ ದುಸ್ಥಿತಿ
ಚಳ್ಳಕೆರೆ: ಬಯಲು ಬಹಿರ್ದೆಸೆಯಿಂದ ಮುಕ್ತಿನೀಡುವ ಸರ್ಕಾರದ ಯೋಜನೆಗೂ ಚಳ್ಳಕೆರೆ ನಗರಕ್ಕೂ ಸಂಬಂಧವೇ ಇಲ್ಲ ಎಂಬ ಸ್ಥಿತಿ ಇದೆ.
ನಗರ ವ್ಯಾಪ್ತಿಯಲ್ಲಿ 60,000ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಇಲ್ಲಿರುವ ಅರ್ಧದಷ್ಟು ನಿವಾಸಿಗಳು ಶೌಚಾಲಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಜಾಗದ ಕೊರತೆಯಿಂದಾಗಿ ಸಾರ್ವಜನಿಕ ಸ್ಥಳಗಳು ಮತ್ತು ಹಲವು ಮನೆಗಳಲ್ಲಿ ಶೌಚಾಲಯವೇ ಇಲ್ಲ.
ಹೀಗಾಗಿ ಮಹಿಳೆ ಮತ್ತು ಮಕ್ಕಳು ಮಲಮೂತ್ರ ವಿಸರ್ಜನೆಗೆ ನಗರದ ಹೊರವಲಯದ ಬಯಲು ಪ್ರದೇಶವನ್ನೇ ಅವಲಂಬಿಸುವಂತಾಗಿದ್ದು, ತೀವ್ರ ಸಮಸ್ಯೆ ಎದುರಿಸಬೇಕಿದೆ. ಪುರುಷರು ಯಾವುದನ್ನೂ, ಯಾರನ್ನೂ ಲೆಕ್ಕಿಸದೆ ಎಲ್ಲೆಂದರಲ್ಲಿ ಜಲ–ಮಲ ಬಾಧೆ ತೀರಿಸಿಕೊಳ್ಳುತ್ತಾರೆ.
ಸರ್ಕಾರದ ವಿವಿಧ ಯೋಜನೆಗಳಡಿ ಇಲ್ಲಿನ ಅನೇಕ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ವೈಯಕ್ತಿಕ ಶೌಚಾಲಯದ ಅಂಕಿ-ಅಂಶಗಳ ಮಾಹಿತಿ ಕೇವಲ ದಾಖಲೆಗಳಲ್ಲಿ ಉಳಿದಿದೆ. ಅವುಗಳ ಸ್ಥಿತಿಗತಿ, ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ಕಿಂಚಿತ್ ಕಾಳಜಿ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ ಸರ್ಕಾರಿ ಬಸ್ ನಿಲ್ದಾಣ, ವಾರದ ಸಂತೆ ಮೈದಾನ ಮತ್ತು ಚಿತ್ರದುರ್ಗ ರಸ್ತೆಯ ಖಾಸಗಿ ಬಸ್ ನಿಲ್ದಾಣದ ಪೇ ಅಂಡ್ ಯೂಸ್ ಶೌಚಾಲಯಗಳು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದ ಗಾಂಧಿನಗರ ಮಾರಮ್ಮನ ಗುಡಿ, ಅಂಬೇಡ್ಕರ್ ನಗರ, ಜನತಾ ಕಾಲೋನಿ, ಲ್ಯಾಂಡ್ ಆರ್ಮಿ ಕಚೇರಿ ಹಿಂಭಾಗ, ಕಾಟಪ್ಪನಹಟ್ಟಿ, ಇಂಜನಹಟ್ಟಿ, ಮದಕರಿ ನಗರ, ರಹೀಂ ನಗರ, ಹಳೆ ಟೌನ್ ವೀರಭದ್ರಸ್ವಾಮಿ ದೇವಸ್ಥಾನ, ಪದ್ಮಸಾಲಿ ಕಲ್ಯಾಣ ಮಂಟಪ, ಪಾದಗಟ್ಟೆ, ಪಾವಗಡ ರಸ್ತೆ ಪೆಟ್ರೊಲ್ ಬಂಕ್ ಬಳಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಮಹಿಳಾ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ.
ಶೌಚಾಲಯದ ಸುತ್ತ ದಟ್ಟವಾಗಿ ಮುಳ್ಳುಗಿಡಗಳು ಬೆಳೆದು ಇಡೀ ಶೌಚಾಲಯವನ್ನೇ ಅವು ಆವರಿಸಿಕೊಂಡಿವೆ. ಶೌಚಾಲಯದ ಒಳಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ದುರ್ವಾಸನೆ ಸುತ್ತಮುತ್ತ ಹರಡಿದೆ.
ಶೌಚಾಲಯಗಳಿಗೆ ಅಳವಡಿಸಿದ್ದ ಕಬ್ಬಿಣದ ಬಾಗಿಲು ತುಕ್ಕು ಹಿಡಿದು, ಮುರಿದು ಬಿದ್ದಿವೆ. ಗೋಡೆಗಳು ಬಿರುಕು ಬಿಟ್ಟಿವೆ. ನೀರು ಸರಬರಾಜಿನ ಪೈಪ್‌ಲೈನ್ ಕಿತ್ತು ಹೋಗಿದೆ. ಮಲ ಮೂತ್ರ ಸಂಗ್ರಹಗುಂಡಿ ಮುಚ್ಚಿ ಹೋಗಿವೆ. ನೀರು ಸಂಗ್ರಹದ ತೊಟ್ಟಿ ಹಾಳಾಗಿದ್ದು, ಶೌಚಾಲಯಗಳು ಹಂದಿಗಳ ತಾಣಗಳಾಗಿವೆ.
ವ್ಯಾಪಾರ– ವಹಿವಾಟು, ಆಸ್ಪತ್ರೆ, ನ್ಯಾಯಾಲಯ ಮುಂತಾದ ಕಾರಣಕ್ಕೆ ಮತ್ತು ಶಾಲೆ– ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಸೇರಿ ಪ್ರತಿ ದಿನ ನಗರಕ್ಕೆ ಕನಿಷ್ಠ 8ರಿಂದ 10 ಸಾವಿರ ಜನರು ಬಂದು ಹೋಗುತ್ತಾರೆ. ಇವರ‍್ಯಾರಿಗೂ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ ಬಸ್ ಇಳಿದ ತಕ್ಷಣವೇ ಮಲ-ಮೂತ್ರ ವಿಸರ್ಜನೆಗೆ ಚಡಪಡಿಸುತ್ತಿರುತ್ತಾರೆ. ಕೆಲವರು ಅತ್ತ ಇತ್ತ ನೋಡಿ ಖಾಲಿ ನಿವೇಶನ, ಪಾಳುಬಿದ್ದ ಕಟ್ಟಡ, ಕೆಲ ಸರ್ಕಾರಿ ಕಚೇರಿಗಳ ಕಾಂಪೌಂಡ್ ಗೋಡೆ ಬಳಿ ಜಲಬಾಧೆ ತೀರಿಸಿಕೊಳ್ಳುತ್ತಾರೆ.
ಇದರಿಂದಾಗಿ ಮಹಾದೇವಿ ರಸ್ತೆ, ತಾಲ್ಲೂಕು ಕಚೇರಿ, ಸರ್ಕಾರಿ ಆಸ್ಪತ್ರೆ, ಬಿಇಒ ಕಚೇರಿ ಆವರಣದ ಜಾಗ ಸದಾ ದುರ್ವಾಸನೆ ಬೀರುತ್ತಿರುತ್ತದೆ. ಈ ಸ್ಥಳಗಳಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಳ್ಳಕೆರೆ ಅಂಬೇಡ್ಕರ್‌ನಗರದಲ್ಲಿ ಪಾಳು ಬಿದ್ದಿರುವ ಸಮುದಾಯ ಶೌಚಾಲಯ
ದುಃಸ್ಥಿತಿಯಲ್ಲಿರುವ ಶೌಚಾಲಯ ನೆಲಸಮ ಮಾಡಲಾಗುವುದು. ಡಿವೈಎಸ್ಪಿ ಕಚೇರಿ ಮುಂಭಾಗ ₹30 ಲಕ್ಷ ವೆಚ್ಚದಲ್ಲಿ ಮಾದರಿ ಶೌಚಾಲಯ ಕಾಮಗಾರಿ ಪ್ರಾರಂಭಿಸಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಲಾಗುವುದುನರೇಂದ್ರಬಾಬು, ಪರಿಸರ ಎಂಜಿನಿಯರ್
ಪೌರಕಾರ್ಮಿಕರ ಕೊರತೆಯ ಕಾರಣ 2–3 ತಿಂಗಳಿಗೊಮ್ಮೆ ಜಟ್ಟಿಂಗ್ ಯಂತ್ರದಿಂದ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ. ಸ್ವಚ್ಛತೆಗೆ ನೀರಿನ ಕೊರತೆ ಇಲ್ಲ. ಶೌಚಾಲಯ ನಮ್ಮದು ಎಂಬ ಭಾವ ಬೆಳೆಸಿಕೊಂಡು ಜನರು ಜವಾಬ್ದಾರಿಯಿಂದ ಬಳಸಬೇಕುಮಲ್ಲಿಕಾರ್ಜುನ, ನಗರಸಭೆ ಸದಸ್ಯ
ಶೌಚಾಲಯಗಳು ನೆಪಕ್ಕೆ ಮಾತ್ರ ಇವೆ. ಸಮರ್ಪಕ ನೀರು ಪೂರೈಕೆ ಹಾಗೂ ಸ್ವಚ್ಛತೆ ಇಲ್ಲ. ಕೆಲವು ಮುಳ್ಳುಗಿಡಗಳಿಂದ ಮುಚ್ಚಿ ಹೋಗಿವೆ. ಕೆಲವಕ್ಕೆ ಬೀಗ ಹಾಕಲಾಗಿದೆ.ಸರಸ್ವತಮ್ಮ, ಇಂಜನಹಟ್ಟಿ ನಿವಾಸಿ
ಶೌಚಾಲಯ ನಿರ್ಮಿಸಿಕೊಳ್ಳಲು ಮನೆ ಹತ್ತಿರ ಜಾಗ ಮತ್ತು ಹಣವೂ ಇಲ್ಲ. ನಗರದ ಹಲವು ಕುಟುಂಬಗಳು ಸಾಮೂಹಿಕ ಶೌಚಾಲಯವನ್ನೇ ಅವಲಂಬಿಸಿವೆವೆಂಕಟೇಶಪ್ಪ, ಹಳೆಟೌನ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.