ಚಳ್ಳಕೆರೆ: ‘ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಅತಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ತಿಳಿಸಿದರು.
ನಗರಸಭೆ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ನಗರಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಲಾದ ಒಟ್ಟು 1,480 ಬೀದಿನಾಯಿಗಳಿವೆ. ಅವುಗಳ ಸಂತಾನೋತ್ಪತ್ತಿಗೆ ಕಡಿವಾಣ ಹಾಕುವ ಸಲುವಾಗಿ 1,100 ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಶಸ್ತ್ರಚಿಕಿತ್ಸೆ ನೀಡಲಿಕ್ಕೆ ಕೊಠಡಿ ಸಿದ್ಧಪಡಿಸಲಾಗಿದೆ. ವೈದ್ಯರ ಕೊರತೆ ಕಾರಣ ಶಸ್ತ್ರಚಿಕಿತ್ಸೆ ವಿಳಂಬವಾಗುತ್ತಿದೆ’ ಎಂದು ಹೇಳಿದರು.
‘ಅಜ್ಜನಗುಡಿ ಹಾಗೂ ರಹಿಂನಗರದ ಚಿಕನ್-ಮಟನ್ ಅಂಗಡಿ ಬಳಿ ಎಲ್ಲೆಂದರಲ್ಲೇ ತ್ಯಾಜ್ಯ ಬಿಸಾಡುವುದರಿಂದ ಬೀದಿನಾಯಿಗಳು ಹೆಚ್ಚು ಇರುತ್ತವೆ. ಜನವಸತಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಅಂಗಡಿಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ. ಹೀಗಾಗಿ ಪರವಾನಗಿ ಇಲ್ಲದ ಅಂಗಡಿಗಳನ್ನು ಕೂಡಲೇ ಮುಚ್ಚಿಸಲಾಗುವುದು’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ತಿಳಿಸಿದರು.
‘ಅಂಗಡಿ ಬಳಿ ಸ್ವಚ್ಛತೆ ಕಾಪಾಡುವಂತೆ ಮಾಲೀಕರನ್ನು ಕರೆಯಿಸಿ ಅವರಿಗೆ ತಿಳಿವಳಿಕೆ ನೀಡಲಾಗುವುದು. ಮತ್ತು ನಗರದ ಮುಖ್ಯರಸ್ತೆ ಮತ್ತು ಶಾಲಾ ಆವರಣದಲ್ಲಿ ಓಡಾಡುತ್ತಿರುವ ಬಿಡಾಡಿ ದನಗಳನ್ನು ಪುಣ್ಯಕೋಟಿ ಸರ್ಕಾರಿ ಗೋಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪರಿಸರ ಎಂಜಿನಿಯರ್ ನರೇಂದ್ರಬಾಬು ಮಾತನಾಡಿದರು. ಉಪಾಧ್ಯಕ್ಷೆ ಕವಿತಾ ಬೋರಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.