ADVERTISEMENT

ಚಿಕ್ಕಜಾಜೂರು: ಮನೆ ಮನೆಯಲ್ಲಿ ತುಳಸಿ ಆರಾಧನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 8:38 IST
Last Updated 3 ನವೆಂಬರ್ 2025, 8:38 IST
ಚಿಕ್ಕಜಾಜೂರಿನ ಮನೆಯೊಂದರಲ್ಲಿ ಭಾನುವಾರ ಸಂಜೆ ತುಳಸಿ ಹಬ್ಬದ ಅಂಗವಾಗಿ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸುತ್ತಿರುವ ಮಕ್ಕಳು
ಚಿಕ್ಕಜಾಜೂರಿನ ಮನೆಯೊಂದರಲ್ಲಿ ಭಾನುವಾರ ಸಂಜೆ ತುಳಸಿ ಹಬ್ಬದ ಅಂಗವಾಗಿ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸುತ್ತಿರುವ ಮಕ್ಕಳು   

ಚಿಕ್ಕಜಾಜೂರು: ಉತ್ಥಾನ ದ್ವಾದಶಿ ಪುಷ್ಪ ಬೃಂದಾವನೋತ್ಸವದ ಅಂಗವಾಗಿ ಗ್ರಾಮದ ಮಹಿಳೆಯರು ತುಳಸಿ ಕಲ್ಯಾಣೋತ್ಸವವನ್ನು ಭಾನುವಾರ ಸಂಜೆ ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.

ಪ್ರತಿ ಮನೆಗಳಲ್ಲಿ ತುಳಸಿ ಪೂಜೆ: ಗ್ರಾಮದ ಬಹುತೇಕ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. ಗೃಹಿಣಿಯರು ತಮ್ಮ ಮನೆಯಂಗಳದಲ್ಲಿ ಪ್ರತಿಷ್ಠಾಪಿಸಿರುವ ತುಳಸಿ ಕಟ್ಟೆಯನ್ನು ಸುಣ್ಣ ಬಣ್ಣಗಳಿಂದ ಸಾರಿಸಿ, ರಂಗೋಲಿ ಬಿಡಿಸಿ, ಸೇವಂತಿಗೆ, ಮಲ್ಲಿಗೆ ಹೂವುಗಳ ಹಾರವನ್ನು ಮಾಡಿ, ವಿದ್ಯುತ್ ದೀಪಗಳಿಂದ ತುಳಸಿ ಕಟ್ಟೆಯನ್ನು ಸಿಂಗರಿಸಿದ್ದರು. 

ತುಳಸಿ ಗಿಡಕ್ಕೆ ಹೊಸ ಸೀರೆ, ರವಿಕೆ ಬಟ್ಟೆಗಳನ್ನು ಉಡಿಸಿ ಸಿಂಗರಿಸಿ, ಅವಲಕ್ಕಿ, ಹಣ್ಣುಗಳು ಹಾಗೂ ಬಗೆ ಬಗೆಯ ಸಿಹಿ ತಿನಿಸುಗಳನ್ನು ಇಟ್ಟು, ಅಕ್ಕಪಕ್ಕದ ಮನೆಗಳ ಮುತ್ತೈದೆಯರನ್ನು ಪೂಜೆಗೆ ಕರೆದು ತುಳಸಿ ಕಟ್ಟೆಗೆ ಮಂಗಳಾರತಿ ಮಾಡಿದರು. 

ADVERTISEMENT

ದೇವಾಲಯಗಳಲ್ಲಿ ವಿಶೇಷ ಪೂಜೆ: ಗ್ರಾಮದ ಹಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿನ ಉತ್ಸವ ಮೂರ್ತಿಯನ್ನು ಅಲಂಕರಿಸಿ, ವೃಂದಾವನ ಮಾದರಿಯ ಮೇಲೆ ಉತ್ಸವ ಮೂರ್ತಿಯನ್ನು ಇಟ್ಟು, ವಾದ್ಯಘೋಷ್ಠಿಯೊಂದಿಗೆ ಗ್ರಾಮದ ಬೊಮ್ಮಜ್ಜ ವಂಶಸ್ಥರು ವೃಂದಾವನದ ರಥವನ್ನು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ, ದೇವಸ್ಥಾನದ ಅರ್ಚಕರು ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ನಡೆಸಿದರು.

ಗ್ರಾಮದ ರಾಮಕೃಷ್ಣ ದೇವಸ್ಥಾನದ ಆವರಣದಲ್ಲಿರುವ ತುಳಿಸಿ ಕಟ್ಟೆ, ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಆಂಜನೇಯ ಮೂರ್ತಿಗಳಿಗೆ ತುಳಸಿ ಹಾರವನ್ನು ಹಾಕಿ ದೇವಸ್ಥಾನ ಸಮಿತಿ ವತಿಯಿಂದ ಪೂಜೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.