ADVERTISEMENT

ಚಿತ್ರದುರ್ಗ: ನಿರ್ಲಕ್ಷ್ಯದ ‘ಟ್ರ್ಯಾಕ್‌’ನಲ್ಲೇ ದಸರಾ ಕ್ರೀಡಾಕೂಟ

ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ; ಅವ್ಯವಸ್ಥೆಗೆ ಕ್ರೀಡಾಪಟುಗಳ ಬೇಸರ

ಕೆ.ಪಿ.ಓಂಕಾರಮೂರ್ತಿ
Published 30 ಆಗಸ್ಟ್ 2025, 7:46 IST
Last Updated 30 ಆಗಸ್ಟ್ 2025, 7:46 IST
ಮಳೆ ನೀರು ನಿಂತ ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಓಡುತ್ತಿರುವ ಸ್ಪರ್ಧಿಗಳು
ಮಳೆ ನೀರು ನಿಂತ ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಓಡುತ್ತಿರುವ ಸ್ಪರ್ಧಿಗಳು   

ಚಿತ್ರದುರ್ಗ: ಮಳೆ ನೀರು ನಿಂತ ಸಿಂಥೆಟಿಕ್‌ ಟ್ರ್ಯಾಕ್‌, ಗುಣಮಟ್ಟವಲ್ಲದ ಮಣ್ಣು ಹಾಕಿರುವ ಲಾಂಗ್‌ ಜಂಪ್‌ ಅಂಕಣ, ಕೆಸರು ಗದ್ದೆಯಂತಾದ ಫುಟ್‌ಬಾಲ್‌ ಅಂಕಣ, ಮುರಿದ ಆಸನ, ಹುಲುಸಾಗಿ ಬೆಳೆದ ಹುಲ್ಲು, ಮಣ್ಣಿನಲ್ಲಿ ಗುರುತು ಮಾಡಿದ್ದ ಟ್ರ್ಯಾಕ್‌ಗಳು.. ಇದು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ನಡೆಯುತ್ತಿರುವ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಸ್ಥಿತಿ.

ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಉತ್ಸಾಹದೊಂದಿಗೆ ಬಂದ ಕ್ರೀಡಾಪಟುಗಳು ಇಲ್ಲಿನ ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದರು. ಅಥ್ಲೆಟಿಕ್ಸ್‌, ವಾಲಿಬಾಲ್‌, ಕಬಡ್ಡಿ, ಕೊಕ್ಕೊ, ಫುಟ್‌ಬಾಲ್, ಥ್ರೋಬಾಲ್‌, ಬ್ಯಾಸ್ಕೆಟ್‍ಬಾಲ್, ಕುಸ್ತಿ, ಬ್ಯಾಡ್ಮಿಂಟನ್‌, ಹಾಕಿ, ಹ್ಯಾಂಡ್‌ಬಾಲ್, ಟೇಬಲ್‌ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ಷಟಲ್ ಬ್ಯಾಡ್ಮಿಂಟನ್‌ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸೌಲಭ್ಯಗಳು ಒತ್ತಟ್ಟಿಗಿರಲಿ, ಕನಿಷ್ಠ ಸ್ಪರ್ಧಾ ಅಂಕಣಗಳನ್ನೂ ಸೂಕ್ತ ರೀತಿಯಲ್ಲಿ ಸಜ್ಜುಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿತ್ತು. ಇನ್ನು ಪಾರಿತೋಷಕಗಳನ್ನೂ ಬೇಕಾಬಿಟ್ಟಿ ಮಾಡಿಸಿರುವುದು ಕ್ರೀಡಾಪಟುಗಳ ಬೇಸರಕ್ಕೆ ಕಾರಣವಾಯಿತು. ಪಾರಿತೋಷಕಗಳಿಗೆ ಸ್ಟಿಕರ್‌ಗಳನ್ನು ತಲೆಕೆಳಗಾಗಿ ಅಂಟಿಸಲಾಗಿತ್ತು.

ADVERTISEMENT

32 ವರ್ಷಗಳ ಹಿಂದೆ 19 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಈ ಕ್ರೀಡಾಂಗಣದಲ್ಲಿ ದಶಕದ ಹಿಂದೆ 400 ಮೀಟರ್‌ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆಯಿಲ್ಲದೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಟ್ರ್ಯಾಕ್‌ನ ತಿರುವಿನಲ್ಲಿ ಎರಡು ಕಡೆ ನೀರು ನಿಂತು ಪಾಚಿ ಕಟ್ಟಿದ ಸ್ಥಿತಿ ತಲುಪಿದೆ.

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 975 ಜನ ಪುರುಷ ಹಾಗೂ 234 ಜನ ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು. ಚಳ್ಳಕೆರೆ ತಾಲ್ಲೂಕಿನ 354, ಚಿತ್ರದುರ್ಗದ 714, ಹೊಸದುರ್ಗದ 470, ಹಿರಿಯೂರಿನ 171, ಹೊಳಲ್ಕೆರೆಯ 218, ಮೊಳಕಾಲ್ಮುರಿನ 157 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಸೆಣಸಿದರು. 

ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳ ವೇಗ ಮಳೆ ನೀರಿನ ಕಾರಣಕ್ಕೆ ತಿರುವಿನಲ್ಲಿ ಕಡಿಮೆಯಾಗುತ್ತಿತ್ತು. ಪ್ರಾರಂಭದಲ್ಲಿ ನಾಲ್ಕು ಸಾಲಿನಲ್ಲಿ ಓಡುತ್ತಿದ್ದ ಸ್ಪರ್ಧಿಗಳು ನೀರಿನ ಕಾರಣಕ್ಕೆ ಎಲ್ಲರೂ ಒಂದೇ ಸಾಲಿಗೆ ಬರುತ್ತಿದ್ದರು. ಪುನಃ ವೇಗ ಪಡೆದುಕೊಳ್ಳಲು ಕ್ಷಣ ಕಾಲ ಬೇಕಾಗಿತ್ತು. ಇನ್ನು, ಲಾಂಗ್‌ಜಂಪ್‌ನ ಓಟದ ಟ್ರ್ಯಾಕ್‌ ಸಹ ಕಿತ್ತುಹೋಗಿದೆ. ಅಂಕಣದಲ್ಲಿ ಹಾಕಿದ್ದ ಮಣ್ಣು ಸಹ ಗಟ್ಟಿ ಆಗಿತ್ತು. ಜತೆಗೆ ಟ್ರ್ಯಾಕ್‌ ಮೇಲೆ ಹಾಕಿದ್ದ ಗುರುತುಗಳು ಸಹ ಕಾಣದಂತಾಗಿರುವ ಕಾರಣ ಮಣ್ಣಿನಲ್ಲಿ ಗುರುತು ಮಾಡಲಾಗಿತ್ತು ಎಂದು ಕ್ರೀಡಾಳುಗಳು ದೂರಿದರು.

‘ಫುಟ್‌ಬಾಲ್ ಮೈದಾನ ಕೆಸರಿನಂತಾಗಿದೆ. ಅಲ್ಲಲ್ಲಿ ಮಳೆ ನೀರು ನಿಂತಿದ್ರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ಇದ್ದರು. ಮುರುಘರಾಜೇಂದ್ರ ಕ್ರೀಡಾಂಗಣ, ಬಾಲಕರ ಪದವಿಪೂರ್ವ ಕಾಲೇಜು ಮೈದಾನದ ಸ್ಥಿತಿಯೂ ಭಿನ್ನವಾಗಿಲ್ಲ. ನಾವು ಪ್ರಶ್ನಿಸಿದರೆ, ‘ಸಮಸ್ಯೆ ಇದೆ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ಮುಗಿಸಿ’ ಎಂಬ ಉತ್ತರ ಬರುತ್ತಿತ್ತು ಎಂದು ಕ್ರೀಡಾಪಟುಗಳು ಆರೋಪಿಸಿದರು.

‘ಸಿಂಥೆಟಿಕ್‌ ಟ್ರ್ಯಾಕ್‌ ಕ್ರೀಡಾಪಟುಗಳಿಗಿಂತ ಸಾರ್ವಜನಿಕರ ವಾಯುವಿಹಾರಕ್ಕೆ ಬಳಕೆಯಾಗಿದೆ. ನೀರು ನಿಂತು ಇಡೀ ಟ್ರ್ಯಾಕ್‌ ಹಾಳಾಗಿದೆ. ಉಬ್ಬು– ತಗ್ಗು ಟ್ರ್ಯಾಕ್‌ನಲ್ಲೇ ಅಭ್ಯಾಸ ಮಾಡುವಂತಾಗಿದೆ. ಕ್ರೀಡಾಕೂಟದ ಸಮಯದಲ್ಲೂ ಇದೇ ಸ್ಥಿತಿ ಮುಂದುವರಿದಿದೆ’ ಎಂದು ಅವರು  ಬೇಸರ ವ್ಯಕ್ತಪಡಿಸಿದರು.

‘ಮೂಲ ಸೌಲಭ್ಯಗಳ ಕೊರತೆ ಹಾಗೂ ನಿರ್ವಹಣೆ ಇಲ್ಲದ ಕಾರಣಕ್ಕೆ ಸಮಸ್ಯೆ ಎದುರಿಸಬೇಕಾಯಿತು. ಆಸನಗಳು ಹಾಳಾಗಿರುವ ಕಾರಣ ಹೆಣ್ಣುಮಕ್ಕಳನ್ನು ಕರೆತಂದಿದ್ದ ಪಾಲಕರು ಸಮಸ್ಯೆ ಅನುಭವಿಸಿದರು’ ಎಂದೂ ಅವರು ಹೇಳಿದರು.

ಲಾಂಗ್‌ ಜಂಪ್‌ ಟ್ರಾಕ್‌ ಮೇಲೆ ಮಣ್ಣಿನ ಗುರುತು ಮಾಡಿರುವುದು
ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಮಳೆ ನೀರು ನಿಂತಿದ್ದರೂ ಸ್ಪಚ್ಛತೆಗೊಳಿಸಿಲ್ಲ. ಓಟದ ಸ್ಪರ್ಧೆಗೆ ಬಹಳ ತೊಡಕಾಯಿತು. ಇಡೀ ಮೈದಾನ ಅವ್ಯವಸ್ಥೆಯಿಂದ ಕೂಡಿದೆ.
– ಸಿ.ಆರ್‌.ಮಿಜಾನ್‌, ಕ್ರೀಡಾಪಟು ಚಿತ್ರದುರ್ಗ
ದಸರಾ ಕ್ರೀಡಾಕೂಟ ಎಂಬ ಉತ್ಸಾಹದಲ್ಲಿ ಬಂದ ನಮಗೆ ಇಲ್ಲಿನ ವ್ಯವಸ್ಥೆ ನೋಡಿ ಬೇಸರವಾಯಿತು. ಯಾವುದೇ ಅಂಕಣಗಳು ಸ್ಪರ್ಧೆಗೆ ಯೋಗ್ಯವಾಗಿಲ್ಲ.
– ಎಂ.ಇ.ಚೈತ್ರಾ, ಹೊಸದುರ್ಗ
ಏಕ ಕಾಲಕ್ಕೆ ವಿವಿಧ ಅಂಕಣಗಳಲ್ಲಿ ಸ್ಪರ್ಧೆ ನಡೆದ ಕಾರಣ ಚಿಕ್ಕ ಪುಟ್ಟ ಸಮಸ್ಯೆ ಆಗಿರಬಹುದು. ಲಾಂಗ್ ಜಂಪ್ ಟ್ರ್ಯಾಕ್ ಹಾಳಾಗಿದ್ದು ಶೀಘ್ರ ದುರಸ್ತಿ ಮಾಡಿಸಲಾಗುತ್ತದೆ.
– ಸುಚೇತಾ ಎಂ. ನೆಲವಿಗಿ, ಸಹಾಯಕ ನಿರ್ದೇಶಕಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಪಾರಿತೋಷಕಗಳಿಗೆ ಸ್ಟಿಕರ್‌ಗಳನ್ನು ಉಲ್ಟಾ ಅಂಟಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.