ADVERTISEMENT

PV Web Exclusive: ಚುನಾವಣೆ ಭಾಷಣದಲ್ಲಿ ಓಡುವ ನೇರ ರೈಲು!

ಜಿ.ಬಿ.ನಾಗರಾಜ್
Published 9 ಅಕ್ಟೋಬರ್ 2020, 8:33 IST
Last Updated 9 ಅಕ್ಟೋಬರ್ 2020, 8:33 IST
ತುಮಕೂರು–ಚಿತ್ರದುರ್ಗ– ದಾವಣಗೆರೆ ನೇರ ರೈಲು ಮಾರ್ಗದ ನಕ್ಷೆ
ತುಮಕೂರು–ಚಿತ್ರದುರ್ಗ– ದಾವಣಗೆರೆ ನೇರ ರೈಲು ಮಾರ್ಗದ ನಕ್ಷೆ   

ಚಿತ್ರದುರ್ಗ: ‘ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗಕ್ಕೆ ಗ್ರಹಣ ಹಿಡಿದಿದೆ. ಪಕ್ಷ ಅಧಿಕಾರಕ್ಕೆ ಬಂದರೆ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುತ್ತೇವೆ. ಕಡಿಮೆ ಅವಧಿಯಲ್ಲಿ ಬೆಂಗಳೂರು ತಲುಪಲು ಸಾಧ್ಯವಾಗಲಿದೆ...’

–ಇದು 2019ರ ಲೋಕಸಭಾ ಚುನಾವಣೆಯ ಪ್ರಚಾರ ರ‍್ಯಾಲಿಯಲ್ಲಿ ಅಭ್ಯರ್ಥಿಯೊಬ್ಬರು ನೀಡಿದ ಆಶ್ವಾಸನೆ. 2004ರ ಚುನಾವಣೆಯಿಂದಲೂ ಇದೇ ಆಶ್ವಾಸನೆ ಕೇಳಿದ ಮತದಾರ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ರಾಜಕೀಯ ಪಕ್ಷಗಳು ಮಾತ್ರ ಅಸ್ತಿತ್ವದಲ್ಲಿಲ್ಲದ ಹಳಿಯ ಮೇಲೆ ‘ರೈಲು ಓಡಿಸುವುದ’ನ್ನು ಕೈಬಿಡಲಿಲ್ಲ.

ನೇರ ರೈಲು ಮಾರ್ಗವು ಚಿತ್ರದುರ್ಗ ಜನರ ಬಹುದಿನಗಳ ಕನಸು. ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿರುವ ಕೋಟೆನಾಡು ರೈಲ್ವೆ ಸಂಪರ್ಕದಲ್ಲಿ ಪ್ರಗತಿ ಸಾಧಿಸಿಲ್ಲ. ಮುಂಬೈ–ಬೆಂಗಳೂರು ಹಾಗೂ ಚಿಕ್ಕಜಾಜೂರು–ಆಂಧ್ರಪ್ರದೇಶದ ರಾಯದುರ್ಗ ಸಂಪರ್ಕಿಸುವ ಎರಡು ರೈಲು ಹಳಿಗಳು ಕೋಟೆನಾಡಿನಲ್ಲಿ ಹಾದು ಹೋಗಿವೆ. ಮುಂಬೈ–ಬೆಂಗಳೂರು ರೈಲ್ವೆ ಮಾರ್ಗದಿಂದ ಚಿಕ್ಕಜಾಜೂರು ಹೋಬಳಿ ಜನರಿಗೆ ಮಾತ್ರ ಪ್ರಯೋಜನವಾಗಿದೆ. ಆಂಧ್ರಪ್ರದೇಶ ಸಂಪರ್ಕಿಸುವ ಮಾರ್ಗ ಸರಕು ಸಾಗಣೆಗೆ ಹೆಚ್ಚು ಮೀಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ ಹಾದು ಹೋಗಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಾಜಧಾನಿ ಸಂಪರ್ಕಿಸುವ ಪ್ರಮುಖ ಮಾರ್ಗ. ಸಾರಿಗೆ ಸಂಪರ್ಕವನ್ನೇ ಹೆಚ್ಚಾಗಿ ಅವಲಂಬಿಸಿರುವ ಪ್ರಯಾಣಿಕರಿಗೆ ರೈಲು ಮಾರ್ಗದ ಬಗ್ಗೆ ಆಲೋಚನೆ ಮೂಡಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇದನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಆರಂಭಿಸಿದ ಬಳಿಕ ಈ ಬಗ್ಗೆ ಆಶಾಭಾವನೆ ಮೂಡಿತ್ತು.

ತುಮಕೂರು–ಅರಸೀಕೆರೆ–ಬೀರೂರು–ಚಿಕ್ಕಜಾಜೂರು–ದಾವಣಗೆರೆ ಸಂಪರ್ಕಿಸುವ ಮುಂಬೈ–ಬೆಂಗಳೂರು ರೈಲು ಮಾರ್ಗದ ಸಂಚಾರ ಪ್ರಯಾಣಿಕರಿಗೆ ಹೊರೆ. ಹಾಸನ–ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾದು ಹೋಗುವುದರಿಂದ ವೆಚ್ಚದಾಯಕವೂ ಹೌದು. 192 ಕಿ.ಮೀ. ಉದ್ದದ ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದಿಂದ ದಾವಣಗೆರೆ–ಬೆಂಗಳೂರಿನ ನಡುವಿನ ಅಂತರ 53 ಕಿ.ಮೀ ಕಡಿಮೆಯಾಗಲಿದೆ. ಹುಬ್ಬಳ್ಳಿ, ಬೆಳಗಾವಿ, ಗೋವಾ, ಮುಂಬೈಗೆ ಸಂಚರಿಸುವ ರೈಲು ಒಂದು ಗಂಟೆ ಮುಂಚಿತವಾಗಿ ಗಮ್ಯ ತಲುಪಲು ನೆರವಾಗಲಿದೆ ಎಂಬುದು ನೇರ ರೈಲು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯಲ್ಲಿ ಉಲ್ಲೇಖವಾಗಿದೆ.

ಚಿತ್ರದುರ್ಗ ಹಾಗೂ ದಾವಣಗೆರೆ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಬಿ.ಎಸ್‌.ಯಡಿಯೂರಪ್ಪ 2009ರಲ್ಲಿ ನೇರ ರೈಲು ಮಾರ್ಗಕ್ಕೆ ಒಪ್ಪಿಗೆ ಸೂಚಿಸಿದರು. ರೈಲ್ವೆ ಯೋಜನೆಯ ವೆಚ್ಚದಲ್ಲಿ ಶೇ 50ರಷ್ಟು ರಾಜ್ಯ ಭರಿಸಲು ಸಿದ್ಧವಿದೆ ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ಸಲ್ಲಿಸಿದರು. ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿತು. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸುವಂತೆ ರಾಜ್ಯಕ್ಕೆ ತಿಳಿಸಿತು. ದಶಕ ಕಳೆದರೂ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಪೂರ್ಣಗೊಳ್ಳಲಿಲ್ಲ.

2013ರಲ್ಲಿ ರಾಜ್ಯ ಸರ್ಕಾರ ಬದಲಾದಂತೆ ಕೆಲ ತಾಂತ್ರಿಕ ಸಮಸ್ಯೆಗಳು ಹುಟ್ಟಿಕೊಂಡವು. ಕೇಂದ್ರ ಸರ್ಕಾರಕ್ಕೆ ಆದಾಯ ನೀಡುವ ರೈಲ್ವೆ ಯೋಜನೆಯ ವೆಚ್ಚ ಭರಿಸಲು ಸಾಧ್ಯವಿಲ್ಲವೆಂದು ರಾಜ್ಯ ಸರ್ಕಾರ ವರಸೆ ಬದಲಿಸಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಹಲವು ಪತ್ರ ವಿನಿಮಯಗೊಂಡವು. ಯೋಜನೆ ಮಾತ್ರ ನಿರೀಕ್ಷೆಯಂತೆ ಕಾರ್ಯಾರಂಭ ಆಗಲಿಲ್ಲ. ಈ ನಡುವೆ ಭೂಸ್ವಾಧೀನ ಮತ್ತು ರೈಲ್ವೆ ಹಳಿ ಸಮೀಕ್ಷೆ ಕಾರ್ಯ ಚುರುಕು ಪಡೆಯಲೇ ಇಲ್ಲ.

ದಾವಣಗೆರೆ ಜಿಲ್ಲೆಯ 16 ಹಳ್ಳಿಗಳ 237 ಎಕರೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಿತು. ತುಮಕೂರು ಜಿಲ್ಲೆಯ 796 ಎಕರೆ ಭೂಮಿಯಲ್ಲಿ 135 ಎಕರೆಯ ಸ್ವಾಧೀನ ವರ್ಷದ ಹಿಂದೆಯೇ ಪೂರ್ಣಗೊಂಡಿದೆ. ಚಿತ್ರದುರ್ಗ ಜಿಲ್ಲೆಯ 1,028 ಎಕರೆ ಭೂಸ್ವಾಧೀನ ‍ಪ್ರಕ್ರಿಯೆ ಮಾತ್ರ ನನೆಗುದಿಗೆ ಬಿದ್ದಿದೆ.

ನೇರ ರೈಲು ಮಾರ್ಗಕ್ಕೆ ಹಿರಿಯೂರು ತಾಲ್ಲೂಕಿನ 19 ಗ್ರಾಮಗಳ 631 ಎಕರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ 24 ಗ್ರಾಮಗಳ 397 ಎಕರೆಯನ್ನು ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಇದರಲ್ಲಿ ಖರಾಬು, ಅರಣ್ಯ ಭೂಮಿ ಹಾಗೂ ಕೃಷಿ ಜಮೀನು ಇದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಹವಾಲು ಸ್ವೀಕರಿಸಲಾಗಿದೆ. ಭೂಮಿ ನೀಡಲು ಒಪ್ಪಿಗೆ ಸೂಚಿಸಿರುವ ರೈತರು ನ್ಯಾಯಯುತ ಪರಿಹಾರಕ್ಕೆ ಪಟ್ಟುಹಿಡಿದಿದ್ದಾರೆ. ವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಲು ಸರ್ಕಾರ ತೀರ್ಮಾನಿಸಿದೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಪರಿಹಾರದ ಮೊತ್ತದ ಬಗೆಗಿನ ಅನುಮಾನ ಇನ್ನೂ ನಿವಾರಣೆಯಾದಂತೆ ಕಾಣುತ್ತಿಲ್ಲ.

‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿಲ್ಲ. ಹಿರಿಯೂರು ತಾಲ್ಲೂಕಿನ ಭೂಸ್ವಾಧೀನ ಅಂತಿಮ ಅಧಿಸೂಚನೆ ಹೊರಬಿದ್ದಿದೆ. ಚಿತ್ರದುರ್ಗ ತಾಲ್ಲೂಕಿನ ಅಧಿಸೂಚನೆ ವರ್ಷದ ಕೊನೆಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ರೈಲು ಮಾರ್ಗದ ವಿನ್ಯಾಸವನ್ನು ರೈಲ್ವೆ ಇಲಾಖೆ ಮೂರು ಬಾರಿ ಬದಲಿಸಿದೆ. ರೈಲ್ವೆ ಇಲಾಖೆಯ ಅಸಹಾಕಾರದಿಂದ ಕೊಂಚ ತಡವಾಗಿದೆ’ ಎನ್ನುತ್ತಾರೆ ಚಿತ್ರದುರ್ಗ ಉಪವಿಭಾಗಾಧಿಕಾರಿ ವಿ.ಪ್ರಸನ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.